2023ರಲ್ಲೂ ನಿಲ್ಲದ ಅವಘಡ...ಅಪಘಾತ

KannadaprabhaNewsNetwork |  
Published : Dec 28, 2023, 01:45 AM IST
ಶಿರಸಿ ತಾಲೂಕು ಬಂಡಲ ಬಳಿ ಅಪಘಾತದಲ್ಲಿ ಐವರು ಮೃತ ಪಟ್ಟಿದ್ದ ಫೈಲ್ ಚಿತ್ರ | Kannada Prabha

ಸಾರಾಂಶ

ಯುವ ಸಮುದಾಯ ದಾರಿ ತಪ್ಪುತ್ತಿರುವುದೇ ಅಪಘಾತಗಳು ಹೆಚ್ಚಾಗುತ್ತಿರಲು ಪ್ರಮುಖ ಕಾರಣ. ಅಪಘಾತಕ್ಕೆ ಅವೈಜ್ಞಾನಿಕವಾದ ರಸ್ತೆ ಕೂಡಾ ಮುಖ್ಯ ಕಾರಣ.

ಮಂಜುನಾಥ ಸಾಯೀಮನೆ

ಶಿರಸಿ:

2023 ಮುಕ್ತಾಯಗೊಳ್ಳಲು ಬೆರಳೆಣಿಕೆಯಷ್ಟು ದಿನಗಳಿವೆ. ಹಿಂತಿರುಗಿ ನೋಡಿದರೆ ಈ ವರ್ಷ ಶಿರಸಿ ಉಪವಿಭಾಗದಲ್ಲಿ ನಡೆದ ಅಪಘಾತ, ಅವಘಡಗಳು 2022ಕ್ಕೆ ಸರಿ ಸಮವಾಗಿಯೇ ಇದೆ.

ಅವೈಜ್ಞಾನಿಕವಾದ ರಸ್ತೆ, ಅಸುರಕ್ಷಿತ ವಾಹನ ಚಾಲನೆ ಹಾಗೂ ಮದ್ಯ ಮತ್ತು ಮಾದಕ ವಸ್ತು ಸೇವೆನೆ ಮಾಡಿ ವಾಹನ ಚಲಾಯಿಸುತ್ತಿರುವುದರಿಂದ ಶಿರಸಿ ತಾಲೂಕಿನಲ್ಲಿ ಅಪಘಾತಗಳು ಭಯಾನಕವಾದ ಸಾವು-ನೋವು ಸಾಮಾನ್ಯವಾಗಿಬಿಟ್ಟಿದೆ. ಕಳೆದ ಬಾರಿಗೆ ಹೋಲಿಸಿದರೆ ಜನವರಿಯಿಂದ ಈ ವರಗೆ ಸಾವಿನ ಸಂಖ್ಯೆಯಲ್ಲಿ ಒಂದೆರಡು ಕಡಿಮೆಯಾಗಿದೆ ಬಿಟ್ಟರೆ ಗಾಯಗೊಂಡು ಪ್ರಕರಣ ದಾಖಲಾಗಿರುವ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.

ಶಿರಸಿ ತಾಲೂಕಿನಲ್ಲಿ ೨೦೨೨ರಲ್ಲಿ ವಿವಿಧ ರೀತಿಯಲ್ಲಿ ನಡೆದ ಅಪಘಾತದಲ್ಲಿ ೩೨ ಜನರು ಪ್ರಾಣ ಕಳೆದುಕೊಂಡರೆ ೨೦೨೩ರ ಈ ವರಗೆ ೨೮ ಜನರು ಮೃತಪಟ್ಟಿದ್ದಾರೆ. ಇದೇ ರೀತಿಯಾಗಿ ೨೦೨೨ರಲ್ಲಿ ೮೭ ಜನರು ಗಾಯಗೊಂಡಿರುವ ಪ್ರಕರಣ ದಾಖಲಾದರೆ ೨೦೨೩ರಲ್ಲಿ ೧೦೫ ಜನರು ಗಾಯಗೊಂಡಿರುವ ಬಗ್ಗೆ ಪ್ರಕರಣ ದಾಖಲಾಗಿದೆ. ಶಿರಸಿ ಉಪವಿಭಾಗದಲ್ಲಿ ೨೦೨೨ರಲ್ಲಿ ೮೮ ಜನರು ಮೃತಪಟ್ಟರೆ ೨೦೨೩ ರಲ್ಲಿ ೭೪ ಜನರು ಮೃತಪಟ್ಟಿದ್ದಾರೆ. ಇದೇ ರೀತಿ ೨೦೨೨ ರಲ್ಲಿ ೨೩೭ ಗಾಯಗೊಂಡರೆ ೨೦೨೩ರಲ್ಲಿ ೨೪೭ ಜನರು ಗಾಯಗೊಂಡ ಪ್ರಕರಣಗಳು ಉಪವಿಭಾಗದಲ್ಲಿರುವ ವಿವಿಧ ಠಾಣೆಗಳಲ್ಲಿ ದಾಖಲಾಗಿವೆ. ಶಿರಸಿ ತಾಲೂಕಿನ ಹುಬ್ಬಳ್ಳಿ ರಸ್ತೆ, ಬನವಾಸಿ ರಸ್ತೆ, ಕುಮಟಾ ರಸ್ತೆ ಹಾಳಾಗಿದ್ದು, ಇಲ್ಲಿ ಅಪಘಾತ ಸಂಖ್ಯೆ ಜಾಸ್ತಿಯಾಗಿದೆ. ನಗರದ ಒಳ ಭಾಗದ ರಸ್ತೆಗಳು ಕೂಡಾ ಹಾಳಾಗಿದ್ದು ಇವೆಲ್ಲವೂ ಕೂಡಾ ಅಪಾಯದ ಮುನ್ಸೂಚನೆ ನೀಡುತ್ತಿದೆ.

ಮುಖ್ಯವಾಗಿ ಅತೀ ವೇಗವೇ ಅಪಘಾತಕ್ಕೆ ಕಾರಣ ಎಂಬಂತೆ ಶಿರಸಿ ತಾಲೂಕಿನಲ್ಲಿ ಸರಿಯಾದ ರಸ್ತೆಯಿಲ್ಲದಿದ್ದರೂ ಅತೀ ವೇಗವಾಗಿ ಚಲಾಯಿಸಿ ಅಪಘಾತಕ್ಕೊಳಗಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇತ್ತೀಚಿಗಂತೂ ಬೈಕ್ ಕ್ರೇಜ್ ಹೆಚ್ಚಾಗಿದ್ದರಿಂದ ಅಪ್ಪ-ಅಮ್ಮನಿಗೆ ಕಾಡಿ ಬೇಡಿಯಾದರೂ ಬೈಕ್ ಖರೀದಿ ಮಾಡಿ ಶೋಕಿ ಮಾಡುತ್ತಿರುವುದನ್ನು ನೋಡಬಹುದಾಗಿದೆ. ಇನ್ನೊಂದೆಡೆ ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ಬಲಿಯಾಗಬೇಕಾದ ಪರಿಸ್ಥಿತಿಯಿದೆ. ಮೋಜು, ಮಸ್ತಿ ಮಾಡುವ ನೆಪದಲ್ಲಿ ಮದ್ಯ, ಮಾದಕ ವಸ್ತು ಸೇವೆನೆ ಅದರ ಗುಂಗಿನಲ್ಲಿ ಅತೀ ವೇಗವಾಗಿ ವಾಹನ ಚಲಾಯಿಸಿ ಪ್ರಾಣ ಕಳೆದುಕೊಂಡವರ ಸಂಖ್ಯೆ ಸಹ ಈ ವರ್ಷ ಜಾಸ್ತಿ. ಇದು ಒಂದೆಡೆಯಾದರೆ ಇನ್ನೊಂದೆಡೆ ಸೀಟ್ ಬೆಲ್ಟ್ ಮತ್ತು ಹೆಲ್ಮೆಟ್ ಹಾಕದೆ ವಾಹನ ಚಲಾಯಿಸಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹೀಗೆ ಪ್ರಾಣ ಕಳೆದುಕೊಳ್ಳುವುದರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದಲೇ ಪೋಲಿಸರು ಕೂಡಾ ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದಾರೆ. ಮದ್ಯ ಮತ್ತು ಗಾಂಜಾ ವ್ಯಸನಿಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸಿದ್ದಾರೆ ಮತ್ತು ಹೆಲ್ಮಟ್ ಹಾಗೂ ಸೀಟ್ ಬೆಲ್ಟ್ ಹಾಕದೇ ವಾಹನ ಚಲಾಯಿಸುವವರ ಮೇಲೆ ದುಬಾರಿ ದಂಡ ಹಾಕುವ ಕೆಲಸ ಮಾಡುತ್ತಿದ್ದಾರೆ.

ಅಘಾತಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಶಾಲಾ-ಕಾಲೇಜುಗಳಲ್ಲಿ ಅಪರಾಧ ತಡೆ ಮಾಸಾಚರಣೆ ಹಾಗೂ ರಸ್ತೆ ಸುರಕ್ಷತಾ ಸಪ್ತಾಹದಡಿಯಲ್ಲಿ ಜಾಗೃತಿ ಮೂಡಿಸುವಂತಹ ಕೆಲಸ ಮಾಡುತ್ತಿವೆ. ಅಪಘಾತ ತಡೆಯುವಲ್ಲಿ ಪೋಲಿಸರು ತಮ್ಮ ಕೆಲಸವನ್ನು ತಾವು ಮಾಡುತ್ತಿದ್ದಾರೆ. ಇದರ ಜತೆಗೆ ಪಾಲಕರು ತಮ್ಮ ಮಕ್ಕಳನ್ನು ಹಿಡಿತದಲ್ಲಿಟ್ಟುಕೊಂಡು ಗಾಡಿ ಚಾವಿ ಕೊಡುವುದು ಎಲ್ಲ ದೃಷ್ಟಿಯಿಂದಲೂ ಉತ್ತಮವಾಗಿದೆ.

ಯುವ ಸಮುದಾಯ ದಾರಿ ತಪ್ಪುತ್ತಿರುವುದೇ ಅಪಘಾತಗಳು ಹೆಚ್ಚಾಗುತ್ತಿರಲು ಪ್ರಮುಖ ಕಾರಣ. ಅಪಘಾತಕ್ಕೆ ಅವೈಜ್ಞಾನಿಕವಾದ ರಸ್ತೆ ಕೂಡಾ ಮುಖ್ಯ ಕಾರಣವಾಗಿದೆ. ರಸ್ತೆ ತುಂಬಾ ಹೊಂಡ, ಗುಂಡಿಗಳು ಬಿದ್ದಿರುವುದು, ರಸ್ತೆ ಅಂಚು ಕೊರೆದಿರುವುದು.. ಹೀಗೆ ನಾನಾ ಬಗೆಯ ಅವೈಜ್ಞಾನಿಕ ರಸ್ತೆಯಿಂದಾಗಿ ವಾಹನದಾರರು ಅಪಘಾತಕ್ಕೊಳಗಾಗಿ ಸಾಯುತ್ತಿದ್ದಾರೆ ಎಂದು ಡಿವೈಎಸ್‌ಪಿ ಗಣೇಶ ಕೆ.ಎಲ್. ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು