ಕನ್ನಡಪ್ರಭ ವಾರ್ತೆ ಕುಶಾಲನಗರ
ಅವರು ಕುಶಾಲನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ನಡೆದ ಕೋಟಿ ಗೀತಾ ಲೇಖನ ಯಜ್ಞ ದೀಕ್ಷ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ತಾವು ಮಾಡುವ ಯಾವುದೇ ವೃತ್ತಿಯಲ್ಲಿ ಅಥವಾ ಜೀವನದಲ್ಲಿ ತೃಪ್ತಿ ಇಲ್ಲದೆ ಗೊಂದಲದಲ್ಲಿ ಸಿಲುಕಿರುವ ವೇಳೆ ಮನಃಶಾಂತಿಗಾಗಿ ಭಗವದ್ಗೀತೆ ಗ್ರಂಥ ಅಧ್ಯಯನ ಮಾಡುವುದರಿಂದ ಸ್ವಯಂತೃಪ್ತಿ ದೊರಕುತ್ತದೆ ಎಂದು ಶ್ರೀಗಳು ವ್ಯಾಖ್ಯಾನಿಸಿದರು.
ದೇಶ ವಿದೇಶಗಳಲ್ಲಿ ಭಗವದ್ಗೀತೆ ಅಭಿಯಾನ ನಡೆಯುತ್ತಿದ್ದು ವಿಶ್ವದಲ್ಲಿ ಗರಿಷ್ಠ ವ್ಯಾಖ್ಯಾನ ಹೊಂದಿರುವ ಗ್ರಂಥ ಭಗವದ್ಗೀತೆ ಪುಸ್ತಕವಾಗಿದೆ. ಜಗತ್ತಿನ ಯಾವುದೇ ಗ್ರಂಥಗಳಿಗೆ ಈ ರೀತಿಯ ವ್ಯಾಖ್ಯಾನ ದೊರಕಿಲ್ಲ. ಹಾಗೆಯೇ ಜಾತಿ ಧರ್ಮ ಭೇದವಿಲ್ಲದ ಜಾಗತಿಕ ಗ್ರಂಥವಾದ ಭಗವದ್ಗೀತೆ ಜಗತ್ತಿಗೆ ಸತ್ಯವನ್ನೇ ಬೋಧಿಸಿದೆ ಎಂದರು.ಪ್ರತಿಯೊಬ್ಬರೂ ಜೀವನದ ಉದ್ದೇಶ ಅರಿತು ಬಾಳಬೇಕು. ದೇವರಿಗೆ ಅರ್ಪಣೆ ಮಾಡುವುದು ನಮ್ಮ ಆದ್ಯ ಕರ್ತವ್ಯ. ಭಕ್ತಿ ಪ್ರೀತಿ ಸೇವೆ ವಿವಿಧ ರೂಪದಲ್ಲಿ ಅದನ್ನು ಭಗವಂತನಿಗೆ ಹಿಂತಿರುಗಿಸಬಹುದು. ಕೃಷ್ಣನ ಆರಾಧನೆ ಮೂಲಕ ಅನಂತ ಫಲ ಲಭಿಸಲು ಸಾಧ್ಯ ಎಂದರು. ಗೀತೆಯ ಓದಿನ ಜೊತೆಗೆ ಬರವಣಿಗೆ ಲೇಖನ ಮೂಲಕ ಶ್ರೀ ಕೃಷ್ಣನಿಗೆ ಸಮರ್ಪಣೆ ಮಾಡಬೇಕಾಗಿದೆ. ಅಭಿಯಾನದ ಮೂಲಕ ಭಗವದ್ಗೀತೆ ಪ್ರತಿಯೊಬ್ಬರ ಮನೆಯ ಪೂಜಾ ಕೊಠಡಿಯಲ್ಲಿ ಶಾಶ್ವತವಾಗಿ ಉಳಿಯುತ್ತದೆ ಎಂದರು.
ಬಳಿಕ ಪುತ್ತಿಗೆ ಶ್ರೀಗಳು, ಸಾಕ್ಷಾತ್ ಶ್ರೀ ಮಧ್ವಾಚಾರ್ಯರೇ ಶ್ರೀ ಮಧುಪೇಂದ್ರ ತೀರ್ಥ ಪೀಠದ ಮೂಲ ಯತಿಗಳಿಗೆ ಕರುಣಿಸಿದ ಸುಮಾರು 700ಕ್ಕೂ ಅಧಿಕ ವರ್ಷಗಳ ಪುರಾತನವಾದ ಪಟ್ಟದ ದೇವರಾಗಿದ್ದುಕೊಂಡು ಪ್ರತಿನಿತ್ಯ ಪೂಜೆ ನಡೆಸಿಕೊಂಡು ಬಂದ ಶ್ರೀ ರುಕ್ಮಿಣಿ, ಸತ್ಯಭಾಮ ಸಹಿತ ಶ್ರೀ ವೀರ ವಿಠಲ ಸಪರಿವಾರ ದೇವರಿಗೆ ಮಹಾಪೂಜೆ ನೆರವೇರಿಸಿದರು. 2026 ರ ಪರ್ಯಾಯದ ಅವಧಿಯ ಒಳಗಾಗಿ ಕೊಡಗು ಜಿಲ್ಲೆಯಿಂದ 10800 ಸಂಖ್ಯೆಯ ಭಗವದ್ಗೀತೆ ಪುಸ್ತಕಗಳನ್ನು ಬರೆದು ಮಠಕ್ಕೆ ನೀಡುವ ಸಂಕಲ್ಪ ಹೊಂದುವ ಗುರಿ ತಮ್ಮದಾಗಿದೆ ಎಂದರು.
ಭಗವದ್ಗೀತೆಯ ಪೂರ್ಣಾವಧಿ ಪ್ರಚಾರಕರು ಸಂಕರ್ಷಣ ಪ್ರಮುಖರು ಆಗಿರುವ ವಿದ್ವಾನ್ ರಮಣ ಆಚಾರ್ಯ ಅವರು ಕೋಟಿ ಲೇಖನ ಯಜ್ಞ ಅಭಿಯಾನದ ಬಗ್ಗೆ ಸಮಗ್ರ ಮಾಹಿತಿ ಒದಗಿಸಿದರು.
ಕೋಟಿಗೀತಾ ಲೇಖನ ಯಜ್ಞ ದೀಕ್ಷಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸರ್ವರಿಗೂ ಶ್ರೀಗಳು ಪ್ರಸಾದ ಮಂತ್ರಾಕ್ಷತೆ ವಿತರಿಸಿದರು.