ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು
ಜನಪದ ಕ್ಷೇತ್ರ ಅತ್ಯಂತ ಅಮೂಲ್ಯವಾದದ್ದು ಮತ್ತು ವಿಸ್ತಾರವಾಗಿದೆ. ಇದು ಇತಿಹಾಸ ರಚನೆಗೆ ಪೂರಕ ಆಕರವಾಗಿದೆ ಎಂದು ಧಾರವಾಡದ ಕೆ.ಎಲ್.ಇ ಶಿಕ್ಷಣ ಸಂಸ್ಥೆಯ ಮೃತ್ಯುಂಜಯ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದ ಉಪನ್ಯಾಸಕ ಡಾ.ಬಾಬು ಅರ್ಜುನ ಬೆಣ್ಣಿ ಹೇಳಿದರು.ಪಟ್ಟಣದ ಕಲ್ಮಠದ ಆವರಣದಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತವಾಗಿ ಕಿತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಉತ್ತರ ಕರ್ನಾಟಕದ ಲಾವಣಿ ಸಾಹಿತ್ಯದ ವಸ್ತು ಮತ್ತು ವಿನ್ಯಾಸದ ಸ್ವರೂಪ ಕುರಿತು ಪ್ರಬಂಧ ಮಂಡಿಸಿ ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಕನ್ನಡ ವಿಷಯದಲ್ಲಿ ಪಿಎಚ್‌ಡಿ ಪದವಿ ಪಡೆದ ನಿಮಿತ್ತ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಾನು ಹುಟ್ಟಿದ ನಾಡಿನಲ್ಲಿ ಭವ್ಯವಾದ ಪರಂಪರೆಯುಳ್ಳ ಕಲ್ಮಠದಲ್ಲಿ ಪೂಜ್ಯರಿಂದ, ಕಲಿಸಿದ ಗುರುಗಳಿಂದ, ಸ್ನೇಹಿತರಿಂದ ದಂಪತಿ ಸಮೇತವಾಗಿ ಸನ್ಮಾನ ಸ್ವೀಕರಿಸಿರುವುದು ನನ್ನ ಕಲಿಕೆ ಮತ್ತು ಕಲಿಸುವ ಜವಾಬ್ದಾರಿ ಹೆಚ್ಚಿಸಿದೆ ಎಂಬುವುದನ್ನು ಅರಿತು ಕ್ರಿಯಾಶೀಲನಾಗುವೆ. ಪ್ರಸ್ತುತ ಸನ್ಮಾನವು ನನ್ನ ಸಂಶೋಧನಾ ಪಯಣದ ಸಾರ್ಥಕತೆಯ ಕ್ಷಣವಾಗಿದೆ. ಮಾರ್ಗದರ್ಶಕರಾದ ಡಾ.ಎಚ್.ಬಿ.ಕೋಲಕಾರ ಮತ್ತು ಇತರರ ಸಹಕಾರವನ್ನು ಸ್ಮರಿಸಿದರು. ಶಿಕ್ಷಕ ಮಂಜುುನಾಥ ಕಳಸಣ್ಣವರ ಪ್ರಾಸ್ತಾವಿಕ ನುಡಿಗಳನ್ನಾಡಿ, ಜನಪದ ಸಾಹಿತ್ಯವು ನೆಲಮೂಲ ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ. ಕನ್ನಡ ರಾಜ್ಯೋತ್ಸವದ ಕುರಿತು ಮಾತನಾಡಿದರು.ಕಲ್ಮಠದ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಕಿತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಎಸ್.ಬಿ.ದಳವಾಯಿ ಸಮಾರೋಪ ನುಡಿಗಳನ್ನಾಡಿದರು. ಸಂಗೀತ ನಿವೃತ್ತ ಶಿಕ್ಷಕ ಈಶ್ವರ ಗಡಿಬಿಡಿ ಶರಣರ ವಚನ ವಾಚಿಸಿದರು. ಸಂಜೀವ ಲದ್ದೀಮಠ ಸ್ವಾಗತಿಸಿದರು. ಪ್ರಭಾವತಿ ಲದ್ದಿಮಠ ಸಾಧಕರನ್ನು ಪರಿಚಯಿಸಿದರು. ಬಸವರಾಜ ದಳವಾಯಿ ವಂದಿಸಿದರು. ವೀರಪ್ಪ ನಂದಿಹಳ್ಳಿ ನಿರೂಪಿಸಿದರು.
ಈ ಸಂದರ್ಭದಲ್ಲಿ ಚನ್ನಮ್ಮನ ಕಿತ್ತೂರು ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಕ್ಯೂರೇಟರ್ ರಾಘವೇಂದ್ರ, ಶಶಿಧರ ಕುರಗುಂದ, ಎಂ.ವೈ.ಕಡಕೋಳ, ರಾಜಶೇಖರ ರಗಟಿ, ನಾಗಯ್ಯ ಹುಲೆಪ್ಪನವರಮಠ, ಬಿ.ಎಸ್.ಆಸಂಗಿಮಠ, ಗಂಗಾಧರ ಮೂಕಿ, ಭರತಕುಮಾರ ಕಡಬಿ ಮತ್ತು ಸಾಧಕರ ತಾಯಿ, ಪತ್ನಿ, ಮಕ್ಕಳು ಉಪಸ್ಥಿತರಿದ್ದರು.