ಕನ್ನಡಪ್ರಭ ವಾರ್ತೆ ಕುಶಾಲನಗರ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮೂಲಕ ಭಾಷಾ ಅಭಿವೃದ್ಧಿಯೊಂದಿಗೆ ಅನ್ಯಭಾಷಿಕರಿಗೆ ಅರೆ ಭಾಷೆಯನ್ನು ಕಲಿಸುವ ಪ್ರಯತ್ನ ನಡೆಯುತ್ತಿದೆ ಎಂದು ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ ತಿಳಿಸಿದ್ದಾರೆ. ಅವರು ಕುಶಾಲನಗರದ ರೈತ ಸಹಕಾರ ಭವನ ಸಭಾಂಗಣದಲ್ಲಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ಕುಶಾಲನಗರ ಗೌಡ ಸಮಾಜ ಮತ್ತು ಅದರ ಅಂಗ ಸಂಸ್ಥೆಗಳ ಸಹಯೋಗದೊಂದಿಗೆ ನಡೆದ ಅರೆಭಾಷೆ ದಿನಾಚರಣೆ -2025 ಮತ್ತು ಅರೆ ಭಾಷೆ ನಾಟಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಅಕಾಡೆಮಿ ಮೂಲಕ ಸಂಸ್ಕೃತಿ ಸಾಹಿತ್ಯ ಸಂಶೋಧನೆ ಕಾರ್ಯಕ್ರಮ ಚಟುವಟಿಕೆಗಳು ನಿರಂತರ ನಡೆಯುತ್ತಿವೆ. ಸಮುದಾಯದ ಪ್ರತಿಯೊಬ್ಬರು ಮಾತೃಭಾಷೆಗೆ ಆದ್ಯತೆ ನೀಡಬೇಕು. ಯುವ ಜನಾಂಗ ಭಾಷಾಜ್ಞಾನ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದರು. ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ನಿವೃತ್ತ ಮುಖ್ಯೋಪಾಧ್ಯಾಯರು ಹಾಗೂ ಗೌಡ ಸಮಾಜ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷರಾದ ಸೂದನ ಎಸ್ ಗೋಪಾಲ್, ವ್ಯಾಪ್ತಿಗಳು ಬದಲಾದಂತೆ ಭಾಷೆ ಬದಲಾಗುತ್ತವೆ. ಭಾಷೆ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ, ಅರೆಭಾಷೆಗೆ ತನ್ನದೇ ಆದ ಸ್ವಂತಿಕೆ ಇದೆ. ಭಾಷೆ ಸಂಸ್ಕಾರ ಆಚಾರ ವಿಚಾರವನ್ನು ಹೇಳಿಕೊಡುತ್ತದೆ, ಭಾಷೆ ನಾಶವಾದಲ್ಲಿ ಸಂಸ್ಕೃತಿ ನಾಶ ಖಚಿತ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಭಾಷೆ ಸಂಸ್ಕೃತಿ ಒಂದು ನಾಣ್ಯದ ಎರಡು ಮುಖಗಳು ಇದ್ದಂತೆ. ನಿರಂತರ ಬಳಕೆ ಮೂಲಕ ಭಾಷೆ ಜೀವಂತವಾಗಿ ಉಳಿಯಲು ಸಾಧ್ಯ ಎಂದರು. ಅರೆಭಾಷೆ ಮಾತನಾಡಲು ಹಿಂಜರಿಕೆ ಮಾಡಬಾರದು ಎಂದು ಕಿವಿಮಾತು ಹೇಳಿದ ಗೋಪಾಲ್, ಭಾಷೆಯ ಉಳಿವಿಗಾಗಿ ನಿರಂತರ ಕಾರ್ಯಕ್ರಮಗಳ ಅಗತ್ಯತೆ ಇದೆ ಎಂದರು. ಇದೇ ಸಂದರ್ಭ ಸಮುದಾಯದ ಸಾಧಕರಾದ ಕುಲ್ಲಚೆಟ್ಟಿ ಕಾಶಿ ಪೂವಯ್ಯ, ಕಡ್ಯದ ಅಶೋಕ, ಬೈಮನ ಭೋಜಮ್ಮ ಮತ್ತು ಕರಕರನ ಬೀನಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷರಾದ ಆನಂದ ಕರಂದ್ಲಾಜೆ, ಕುಲಾಲ ಸಂಘದ ಕೊಡಗು ಜಿಲ್ಲಾಧ್ಯಕ್ಷರಾದ ಕೆ ಕುಶಾಲಪ್ಪ ಮೂಲ್ಯ, ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷರಾದ ಎಸ್ ಜೆ ದೇವದಾಸ್ ಮತ್ತು ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೆ ಎಸ್ ದೊರೇಶ್ ಅವರು ಮಾತನಾಡಿದರು.ಕುಶಾಲನಗರ ಗೌಡ ಸಮಾಜ ಅಧ್ಯಕ್ಷರಾದ ಚಿಲ್ಲನ ಗಣಿ ಪ್ರಸಾದ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಕಾಡೆಮಿ ಸದಸ್ಯರಾದ ಪೊನ್ನಚ್ಚನ ಎಂ ಮೋಹನ್, ಚಂದ್ರಶೇಖರ್ ಪೆರಾಲ, ಕುದುಪಜೆ ಲತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭ ಕುಶಾಲನಗರ ಗೌಡ ಸಮಾಜ ಸಂಘ ಸಂಸ್ಥೆಗಳಾದ ಗೌಡ ಯುವಕ ಸಂಘ, ಗೌಡ ಸಾಂಸ್ಕೃತಿಕ ಸಂಘ, ಗೌಡ ಮಹಿಳಾ ಸಂಘ, ಗೌಡ ಮಾಜಿ ಸೈನಿಕರ ಸಂಘ, ಗೌಡ ಮಹಿಳಾ ಸ್ವಸಹಾಯ ಸಂಘ, ಸಾಂಸ್ಕೃತಿಕ ವೇದಿಕೆ ಮತ್ತು ಇತರ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು. ಧರಣಿ ಅವರು ಪ್ರಾರ್ಥಿಸಿದರು. ಗೌಡ ಯುವಕ ಸಂಘದ ಅಧ್ಯಕ್ಷ ಕೊಡಗನ ಹರ್ಷ ಸ್ವಾಗತಿಸಿದರು. ಕಲಾ ಆನಂದ್ ಮತ್ತು ರಶಿ ಹರೀಶ್ ಕಾರ್ಯಕ್ರಮ ನಿರೂಪಿಸಿದರು.ಕಾರ್ಯಕ್ರಮದ ನಂತರ ಲೋಕೇಶ್ ಊರುಬೈಲು ತಂಡದ ಸದಸ್ಯರಿಂದ ''''''''''''''''ಅಪ್ಪ'''''''''''''''' ಅರೆ ಭಾಷೆ ನಾಟಕ ಪ್ರದರ್ಶನ ನಡೆಯಿತು.