ಬ್ರಹ್ಮಾವರ: ಉಡುಪಿ ಯಕ್ಷಗಾನ ಕಲಾರಂಗವು ಪ್ರತೀವರ್ಷ ವೃತ್ತಿ ಕಲಾವಿದರಾದ 13 ಸಾವಿರ ಯಕ್ಷನಿಧಿ ಸದಸ್ಯರ ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನೊಳಗೊಂಡ ಡೈರಿ ಪ್ರಕಟಿಸುತ್ತಿದ್ದು, 2026ರ ಯಕ್ಷನಿಧಿ ಡೈರಿ ಬುಧವಾರ ಬಿಡುಗಡೆಗೊಂಡಿತು.
ವೃತ್ತಿ ಮೇಳದ ಕಲಾವಿದರಿಗೆ ಕಳೆದ ಎರಡು ದಶಕಗಳಿಂದ ಕೆನರಾ ಬಸ್ ಮಾಲಕರ ಸಂಘವು ನೀಡುತ್ತಾ ಬಂದ ಶೇ 50ರ ರಿಯಾಯತಿಯ ಬಸ್‌ಪಾಸ್‌ನ್ನು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕುಯಿಲಾಡಿ ಸುರೇಶ್ ನಾಯಕ್ ವಿವಿಧ ಮೇಳಗಳ ಪ್ರತಿನಿಧಿಗಳಿಗೆ ವಿತರಿಸಿದರು. ಹಾಲಿ 10 ತಿಂಗಳ ಅವಧಿಯ ಬಸ್‌ಪಾಸ್ ಸೌಲಭ್ಯವನ್ನು ಮುಂದೆ ಸಂಘದ ಅಧ್ಯಕ್ಷರು ಹಾಗೂ ಸದಸ್ಯರ ಸಹಕಾರದೊಂದಿಗೆ ಒಂದು ವರ್ಷಕ್ಕೆ ವಿಸ್ತರಿಸುವ ಯೋಚನೆ ಇದೆ ಎಂದರು. ವಿವಿಧ ಮೇಳಗಳ ೫೦೦ಕ್ಕೂ ಮಿಕ್ಕಿ ಕಲಾವಿದರು ಪ್ರತಿ ವರ್ಷ ಇದರ ಸೌಲಭ್ಯ ಪಡೆಯುತ್ತಿದ್ದಾರೆ ಎಂಬುದಾಗಿ ಪ್ರಾಸ್ತಾವಿಕ ಮಾತುಗಳಲ್ಲಿ ಕಾರ್ಯದರ್ಶಿ ಮುರಲಿ ಕಡೆಕಾರ್ ತಿಳಿಸಿದರು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಅತಿಥಿಗಳನ್ನು ಸ್ಮರಣಿಕೆ ನೀಡಿ ಗೌರವಿಸಿದರು.
ಯಕ್ಷಗಾನ ಕಲಾರಂಗದ ಕಾರ್ಯಕಾರಿ ಸಮಿತಿಯ ಸದಸ್ಯರಾದ ಎಸ್. ವಿ. ಭಟ್, ವಿ. ಜಿ. ಶೆಟ್ಟಿ, ಕೆ. ಸದಾಶಿವ ರಾವ್, ನಾರಾಯಣ ಎಂ. ಹೆಗಡೆ, ಭುವನ ಪ್ರಸಾದ್ ಹೆಗ್ಡೆ, ಸಂತೋಷ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ವಿವಿಧ ಮೇಳಗಳ ಪ್ರತಿನಿಧಿಗಳಾದ ಹರಿಶ್ಚಂದ್ರ ಆಚಾರ್ಯ, ಕೃಷ್ಣ ಪಿ., ಜ್ಞಾನೇಂದ್ರ ತೀರ್ಥಹಳ್ಳಿ, ಆನಂದ ದೇವಾಡಿಗ, ರವಿ ನಾಯಕ, ಶ್ರೇಯಸ್, ಸುದೇಶ್, ರಾಜೇಶ್ ಬೈಕಾಡಿ, ಶ್ರೀನಿವಾಸ ಅಡಿಗ, ರವಿ ನಾಯ್ಕ್ ಬಾಡ, ಸುಕೇಶ್, ಸುರೇಶ್ ಆಚಾರ್ಯ, ವಂಡಾರು ರಮೇಶ್ ಮಡಿವಾಳ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.