ವಿಶೇಷಚೇತನ ಮಗು ದತ್ತು ಪಡೆದ ಇಟಲಿ ದಂಪತಿ

KannadaprabhaNewsNetwork | Published : Feb 19, 2025 12:46 AM

ಸಾರಾಂಶ

ಇಲ್ಲಿನ ಸ್ವಾಮಿ ವಿವೇಕಾನಂದ ಸೇವಾ ಪ್ರತಿಷ್ಠಾನದ ಗಂಗಮ್ಮ ಚಿಕ್ಕುಂಬಿಮಠ‌ ಬಾಲಕಲ್ಯಾಣ ಕೇಂದ್ರದಲ್ಲಿ ಆಸರೆ ಪಡೆದಿದ್ದ ಅನಾಥ ವಿಶೇಷಚೇತನ ಮಗುವನ್ನು ವಿದೇಶಿ ದಂಪತಿ ದತ್ತು ಪಡೆದಿದ್ದಾರೆ. ಈ ಮೂಲಕ ಬೆಳಗಾವಿಯ ಕನ್ನಡದ ಕಂದ ಇಟಲಿಗೆ ಪ್ರಯಾಣಿಸಲಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಇಲ್ಲಿನ ಸ್ವಾಮಿ ವಿವೇಕಾನಂದ ಸೇವಾ ಪ್ರತಿಷ್ಠಾನದ ಗಂಗಮ್ಮ ಚಿಕ್ಕುಂಬಿಮಠ‌ ಬಾಲಕಲ್ಯಾಣ ಕೇಂದ್ರದಲ್ಲಿ ಆಸರೆ ಪಡೆದಿದ್ದ ಅನಾಥ ವಿಶೇಷಚೇತನ ಮಗುವನ್ನು ವಿದೇಶಿ ದಂಪತಿ ದತ್ತು ಪಡೆದಿದ್ದಾರೆ. ಈ ಮೂಲಕ ಬೆಳಗಾವಿಯ ಕನ್ನಡದ ಕಂದ ಇಟಲಿಗೆ ಪ್ರಯಾಣಿಸಲಿದೆ.

ವಿಶೇಷಚೇತನ ಎನ್ನುವ ಕಾರಣಕ್ಕೆ ನವಜಾತ ಶಿಶುವನ್ನು ಹೆತ್ತವರು ಕಸದ ತಿಪ್ಪಿಗೆ ಎಸೆದುಹೋಗಿದ್ದರು. ಈ ಮಗು ಚಿಕ್ಕುಂಬಿಮಠ ಬಾಲಕಲ್ಯಾಣ ಕೇಂದ್ರದಲ್ಲಿ ಆರೈಕೆ ಪಡೆಯುತ್ತಿತ್ತು. ಇದೀಗ ಇಟಲಿ ಮೂಲದ ದಂಪತಿ ದತ್ತು ಪಡೆಯುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಆಶ್ರಮದಲ್ಲಿನ ಯಾವುದಾರು ಒಂದು ಮಗುವನ್ನು ದತ್ತು ಪಡೆಯಲು ನಿರ್ಧರಿಸಿದ್ದ ಇಟಲಿ ದಂಪತಿ ಆರು ವರ್ಷಗಳ ಹಿಂದೆಯೇ ಅರ್ಜಿ ಸಲ್ಲಿಸಿದ್ದರು. ಒಂದು ವರ್ಷದ ಹಿಂದೆ ವಿಶೇಷ ಚೇತನ ಮಗುವಿನ ಬಗ್ಗೆ ಆಶ್ರಮದಿಂದ ಮಾಹಿತಿ ಪಡೆದಿದ್ದರು. ಬಳಿಕ, ವಿಶೇಷ ಚೇತನ ಮಗುವಿನ ಆರೈಕೆ, ಚಿಕಿತ್ಸೆಗೆ ಇಟಲಿ ಮೂಲದ ಪಿಜಿಷಿಯನ್ ಡಾ.ಕೂಸ್ತಾಂನ್ಸಾ ಮತ್ತು ಬುಯಾರ್ ಡೆಡೆ ದಂಪತಿ ಸಹಾಯ ಮಾಡುತ್ತಿದ್ದರು. ಇದೀಗ, ಮಗುವಿನ ಆರೋಗ್ಯದಲ್ಲಿ ಸುಧಾರಣೆ ಕಂಡ ಹಿನ್ನೆಲೆ ದಂಪತಿ ಮಗುವನ್ನು ದತ್ತು ಪಡೆದಿದ್ದಾರೆ. ಬೆಳಗಾವಿಯ ಚಿಕ್ಕುಂಬಿ ಮಠದ ಆಶ್ರಮದಿಂದ ವಿದೇಶಕ್ಕೆ ಹಾರಿರುವ 13ನೇ ಮಗು ಇದಾಗಿದೆ.

ನಂಬಿಕಸ್ಥರು, ಸುಸಂಸ್ಕೃತರೆಂಬ ಕಾರಣಕ್ಕೆ ಭಾರತೀಯ ಮಗು ದತ್ತು ಪಡೆಯುತ್ತಿದ್ದೇವೆ. ವಿಶೇಷ ಚೇತನ ಮಗುವಿನ ಭವಿಷ್ಯ ರೂಪಿಸಿದ ಧನ್ಯತೆಯ ಕಾರಣಕ್ಕೆ ನಮ್ಮ ಆಯ್ಕೆ ಇದಾಗಿದೆ ಎಂದು ಡಾ.ಕೂಸ್ತಾಂನ್ಸಾ ದಂಪತಿ ಹರ್ಷ ವ್ಯಕ್ತಪಡಿಸಿದರು.

ಚಿಕ್ಕುಂಬಿಮಠ ಬಾಲಕಲ್ಯಾಣ ಕೇಂದ್ರದ ಅಧ್ಯಕ್ಷೆ ಡಾ.ಮನಿಷಾ ಭಾಂಡನಕರ್ ಅವರು, 7 ತಿಂಗಳಲ್ಲೇ ಜನಿಸಿದ್ದರಿಂದ ಮಗುವಿನ ತೂಕ 1.3 ಕೆ.ಜಿ ಇತ್ತು. ಆರೋಗ್ಯದಲ್ಲಿ ಸಾಕಷ್ಟು ಸಮಸ್ಯೆಗಳು ಇದ್ದವು. ಮಗುವಿನ‌ ಸ್ಥಿತಿ ಕಠಿಣವಾಗಿತ್ತು. ಅಲ್ಲದೇ ದೃಷ್ಟಿದೋಷದಿಂದಲೂ ಬಳಲುತ್ತಿತ್ತು. ಕೆಎಲ್ಇ ಆಸ್ಪತ್ರೆಯಲ್ಲಿ ಒಂದು ತಿಂಗಳು ಚಿಕಿತ್ಸೆ ಕೊಡಿಸಿದ್ದೇವೆ. ಅಲ್ಲದೇ ಮಗುವಿಗೆ ನಾವು ಬಹಳಷ್ಟು ಆರೈಕೆ ಮಾಡಿದ್ದೇವೆ. ಪಿಜಿಯೋಥೆರಪಿ, ಸ್ಪೀಚ್ ಥೆರಪಿ ಕೊಟ್ಟಿದ್ದೇವೆ. ಈಗ ಮಗು ಓಡಾಡುತ್ತಿದೆ. ಮಾತಾಡುತ್ತಿದೆ. ಇದು ಜನಿಸಿದ್ದು ಬೇರೆ ಯಾರೋ ದಂಪತಿಗಳಿಂದ. ಆದರೆ, ಅದು ಸೇರುತ್ತಿರುವುದು ಇಟಲಿಯ ಈ ದಂಪತಿ ಕೈಗೆ. ಯಾವ ಜನ್ಮದ ಋಣವೋ ಅದು ನಿಜವಾದ ತನ್ನ ಗುರಿಯತ್ತ ಹೊರಟಿದೆ. ನಿಜಕ್ಕೂ ಈ ದಂಪತಿದ್ದು ದೊಡ್ಡ ಮನಸ್ಸು. ಬೇರೆ ಸಂಸ್ಕೃತಿಯ ಅದರಲ್ಲೂ ವಿಶೇಷ ಚೇತ‌ನ ಮಗುವನ್ನು ದತ್ತು ಪಡೆದಿದ್ದಾರೆ.‌ ಅವರಿಗೆ ನಾವು ಎಷ್ಟು ಕೃತಜ್ಞತೆ ಸಲ್ಲಿಸಿದರೂ ಕಡಿಮೆ ಎಂದರು.

Share this article