ಕನ್ನಡಪ್ರಭ ವಾರ್ತೆ ದಾಂಡೇಲಿ
ದಾಂಡೇಲಿ, ಹಳಿಯಾಳ, ಜೋಯಿಡಾ ತಾಲೂಕು ಮಾತ್ರವಲ್ಲದೇ ಜಿಲ್ಲೆ ಹಾಗೂ ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳ ಭಕ್ತ ಜನರ ಪವಿತ್ರ ಯಾತ್ರಸ್ಥಳವಾದ ಕವಳೇಶ್ವರನ ಸನ್ನಿಧಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತ ಸಮೂಹ ಆಗಮಿಸಿತ್ತು. ಎಲ್ಲಿ ನೋಡಿದರೂ ಜನವೇ ಜನ, ಅತ್ತ ಇತ್ತ ಎಲ್ಲಿ ನೋಡಿದರೂ ಶಿವನಾಮವನ್ನು ಜಪಿಸಿ ಕವಳೇಶ್ವರನ ದರ್ಶನ ಪಡೆದು ಪುಣ್ಯ ಕೃತಾರ್ಥರಾದ ಸದ್ಭಾವನೆ ಭಕ್ತರದ್ದಾಗಿತ್ತು.
ಕವಳೇಶ್ವರನ ದರ್ಶನಕ್ಕಾಗಿ ಭಾನುವಾರ ಬೆಳಗ್ಗೆ 4 ಗಂಟೆಯಿಂದಲೇ ಸರತಿ ಸಾಲು ಭರ್ತಿಯಾಗಿರುವುದು ವಿಶೇಷವಾಗಿತ್ತು. ದಾಂಡೇಲಿ ಬಸ್ ನಿಲ್ದಾಣದಿಂದ 26 ಕಿಮೀ ವರೆಗೆ ವಾಹನಗಳಲ್ಲಿ ಪ್ರಯಾಣಿಸಿ ಆನಂತರ ಅಲ್ಲಿಂದ ಕನಿಷ್ಠವೆಂದರೂ 3 ಕಿಮೀನಷ್ಟು ಪಾದಯಾತ್ರೆಯ ಮೂಲಕ ಬೆಟ್ಟ ಗುಡ್ಡ ಹತ್ತಿಳಿದು, ಕಡಿದಾದ ಕಣಿವೆಯಲ್ಲಿ ಸಾಗಿ, ಐನೂರಕ್ಕೂ ಅಧಿಕ ಮೆಟ್ಟಲುಗಳನ್ನು ಹತ್ತಿಳಿದು ಕವಳೇಶ್ವರನ ದರ್ಶನ ಪಡೆದು ಪೂಜೆ ಸಲ್ಲಿಸಿ ಬಂದ ಭಕ್ತ ಸಮೂಹದಲ್ಲಿ ಪುನೀತ ಭಾವನೆ ವ್ಯಕ್ತವಾಗಿತ್ತು.ವರ್ಷಕ್ಕೊಮ್ಮೆ ದರ್ಶನ ಭಾಗ್ಯ ಒದಗಿಸುವ ಕವಳೇಶ್ವರನ ದರ್ಶನ ಪಡೆಯಲು ಹರ ಸಾಹಸ ಮಾಡಬೇಕಾದರೂ, ಅದೊಂದು ಅಪೂರ್ವ ಮತ್ತು ಮಹತ್ವದ ಸುಸಂದರ್ಭ ಎಂದರೆ ಅತಿಶಯೋಕ್ತಿ ಎನಿಸದು.
ಕಾಡಿನ ಮಧ್ಯೆ ಕವಳೇಶ್ವರನ ಸನ್ನಿಧಿಗೆ ಸಾಗುವ ಭಕ್ತ ಜನರಿಗೆ ಮಾರ್ಗ ಮಧ್ಯದಲ್ಲಿ ಅಲ್ಲಲ್ಲಿ -ಭಕ್ತ ಜನರ ಮನತಣಿಸಲು ಬೆಲ್ಲ, ಪಾನೀಯ ಮತ್ತು ನೀರಿನ ವ್ಯವಸ್ಥೆಯನ್ನು ಸ್ವಯಂ ಸೇವಾ ಸಂಸ್ಥೆಗಳು ಕೈಗೊಂಡವು. ಸಾರಿಗೆ ವ್ಯವಸ್ಥೆಯನ್ನೊದಗಿಸಿದ ಸಾರಿಗೆ ಸಂಸ್ಥೆ;
ವ್ಯವಸ್ಥಿತ ಬಂದೋಬಸ್ತ್ ಒದಗಿಸಿದ ಪೊಲೀಸ್ ಇಲಾಖೆ: