ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರದಲ್ಲಿ ಬಯಲುರಂಗ ಮಂದಿರ ನಿರ್ಮಾಣದ ಕನಸು ಕಳೆದ 3 ದಶಕಗಳಿಂದ ಕೇವಲ ಭರವಸೆಗಳಲ್ಲೇ ಉಳಿದಿರುವುದು ವಿಷಾದನೀಯ ಎಂದು ನಗರಸಭೆ ಮಾಜಿ ಅಧ್ಯಕ್ಷ ತ.ನ.ಪ್ರಭುದೇವ್ ಹೇಳಿದರು.
ರಂಗಭೂಮಿ ಚಲನಶೀಲವಾಗಿರಬೇಕಾದರೆ ಆಧುನಿಕತೆಯನ್ನು ಮೈಗೂಡಿಸಿಕೊಂಡು ಹೊಸ ಪ್ರಯೋಗಗಳು ಪ್ರದರ್ಶಿತವಾಗಬೇಕು. ಹವ್ಯಾಸಿ ಕಲಾವಿದರಿಗೆ ಸಮುದಾಯದ ಸಹಕಾರ ಅಗತ್ಯ. ನಗರದ ತೇರಿನ ಬೀದಿ ಸಮೀಪ ಸರ್ವೆ ನಂ.25ರಲ್ಲಿ ಬಯಲುರಂಗ ಮಂದಿರ ನಿರ್ಮಾಣಕ್ಕೆ ಜಾಗ ಮೀಸಲಿರಿಸುವಂತೆ ಒತ್ತಾಯಿಸಲಾಗಿದೆ. ಆದರೆ ಇಲ್ಲಿ ಇತರರಿಗೂ ಜಮೀನು ನೀಡಲಾಗಿದೆ. ಶಾಲಾ ಮೈದಾನಕ್ಕೆ ನೀಡಿರುವ ಜಾಗದಲ್ಲೇ ಬಯಲು ರಂಗಮಂದಿರ ನಿರ್ಮಾಣವಾದರೆ ಶಾಲೆ ಮತ್ತು ಕಲಾಚಟುವಟಿಕೆಗಳಿಗೆ ಅನುಕೂಲವಾಗುತ್ತದೆ ಎಂದರು.
ಕನ್ನಡ ಪಕ್ಷದ ರಾಜ್ಯ ಉಪಾಧ್ಯಕ್ಷ ಸಂಜೀವನಾಯಕ್ ಮಾತನಾಡಿ, ದೊಡ್ಡಬಳ್ಳಾಪುರದಲ್ಲಿ ಮೇರು ಕಲಾವಿದರಿದ್ದು, ಹೆಚ್ಚಿನ ಮಂದಿ ಮಾಸಾಶನ ಪಡೆಯುತ್ತಿದ್ದಾರೆ. ಇಂತಹ ಕಲಾವಿದರಿಗೆ ಜಾತ್ರಾ ನಾಟಕೋತ್ಸವ ಉತ್ತಮ ವೇದಿಕೆ ನೀಡಿದೆ. ದಶಕಗಳಿಂದ ಬಂದಿರುವ ಈ ಪರಂಪರೆ ಮುಂದುವರೆದು ಕಲಾವಿದರಿಗೆ ಆಶ್ರಯ ನೀಡಲಿ ಎಂದು ಆಶಿಸಿದರು.ತಾಲೂಕು ಕಲಾವಿದರ ಸಂಘದ ಅಧ್ಯಕ್ಷ ಎನ್.ರಾಮಾಂಜಿನಪ್ಪ ಮಾತನಾಡಿ, ಕಲಾವಿದರು ಹಣ ಹಾಕಿ ಕಲಾ ಪ್ರದರ್ಶನ ನೀಡಬೇಕಿದೆ. ಈ ವೇದಿಕೆಯಲ್ಲಿಯೂ ಸಹ ದಾನಿಗಳ ಸಹಕಾರವಿಲ್ಲದಿದ್ದರೆ ಆಗುವುದಿಲ್ಲ. ಈ ದಿಸೆಯಲ್ಲಿ ಇದಕ್ಕೆ ದತ್ತಿ ನಿಧಿ ಸ್ಥಾಪಿಸುವ ಅಗತ್ಯವಿದೆ ಎಂದರು.
30 ವರ್ಷಗಳಿಂದ ಕಲಾವಿದರ ಆಶೋತ್ತರ ಈಡೇರಿಲ್ಲ. ಸಾಂಸ್ಕೃತಿಕ ಪರಂಪರೆ ಗಟ್ಟಿಯಾಗಿರುವ ದೊಡ್ಡಬಳ್ಳಾಪುರದಲ್ಲಿ ಅಪ್ರತಿಮ ಕಲಾವಿದರಿದ್ದಾರೆ. ಅವರ ಕಲಾ ಪ್ರತಿಭೆ ಅನಾವರಣಕ್ಕೆ ಸೂಕ್ತ ವೇದಿಕೆ ಕೊರತೆ ಕಾಡುತ್ತಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು ಎಂದರು.
ನಗರಸಭೆ ಸದಸ್ಯೆ ವತ್ಸಲ, ರಂಗ ನಿರ್ದೇಶಕ ಮಾ.ಚಿ.ಕೃಷ್ಣ, ತಾಲೂಕು ಕಲಾವಿದರ ಸಂಘದ ಎಂ.ವೆಂಕಟರಾಜು, ಸಾಂಸ್ಕೃತಿಕ ಸಮಿತಿಯ ಸಂಚಾಲಕರಾದ ಪ್ರಕಾಶ್ ರಾವ್, ಡಿ.ವೆಂಕಟೇಶ್, ಮುನಿಪಾಪಯ್ಯ, ನಂದ ಕುಮಾರ್, ಜಿ.ರಾಮು, ಮುಖಂಡರಾದ ಡೈರಿ ಶ್ರೀನಿವಾಸ್, ತಳವಾರ ನಾಗರಾಜ್, ನರಸಿಂಹಮೂರ್ತಿ, ಕುಮಾರ್, ಆನಂದ್, ಬಸವರಾಜಯ್ಯ ಮೊದಲಾದವರು ಭಾಗವಹಿಸಿದ್ದರು.
4ಕೆಡಿಬಿಪಿ1- ದೊಡ್ಡಬಳ್ಳಾಪುರದಲ್ಲಿ ಶ್ರೀ ಪ್ರಸನ್ನ ಲಕ್ಷ್ಮೀ ವೆಂಕಟರಮಣಸ್ವಾಮಿ ಜಾತ್ರಾ ಸಾಂಸ್ಕೃತಿಕ ಸಮಿತಿ ವತಿಯಿಂದ ನಾಟಕೋತ್ಸವ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನಾ ಕಾರ್ಯಕ್ರಮ ನಡೆಯಿತು.