ಭೂಮಿಯೊಂದಿಗೆ ಪೂರ್ವಜದ ಬಾಂಧವ್ಯ ಅನುಕರಣೀಯ: ಎ.ಎಸ್.ಪೊನ್ನಣ್ಣ

KannadaprabhaNewsNetwork | Published : Oct 30, 2023 12:31 AM

ಸಾರಾಂಶ

ಟಿ- ಶೆಟ್ಟಿಗೇರಿ ಕೊಡವ ಸಮಾಜದಲ್ಲಿ ನಡೆಯುತ್ತಿರುವ 7ನೇ ವರ್ಷದ ಕಾವೇರಿ ಚಂಗ್ರಾಂದಿ ಪತ್ತಾಲೋದಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ 10ನೇ ದಿನದ ಸಮಾರೋಪ
ಕನ್ನಡಪ್ರಭ ವಾರ್ತೆ ಮಡಿಕೇರಿ ನಮ್ಮ ಸಂಸ್ಕೃತಿ ಈ ಭೂಮಿಯ ಕೃಷಿಯೊಂದಿಗೆ ಬೆಸೆದುಕೊಂಡಿದೆ. ಆದರೆ ಈ ಭೂಮಿಯೊಂದಿಗೆ ಪೂರ್ವಜರು ಹಾಗೂ ಹಿರಿಯರು ಹೊಂದಿದಂತಹ ಪೂಜನೀಯ ಬಾಂಧವ್ಯವನ್ನು ಇಂದು ಎಲ್ಲವನ್ನೂ ವಾಣಿಜ್ಯವಾಗಿ ಕಾಣುವ ಪರಿಯಿಂದ ನಾವು ಉಳಿಸಿಕೊಂಡಿಲ್ಲ. ಇದಕ್ಕೆ ನಮ್ಮ ಪೀಳಿಗೆಯೇ ಕಾರಣಕರ್ತರು. ಇದನ್ನು ಸರಿಪಡಿಸುವ ಜವಾಬ್ದಾರಿಯೂ ನಮ್ಮೆಲ್ಲರ ಮೇಲಿದೆ ಎಂದು ವಿರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಹೇಳಿದರು. ಟಿ.ಶೆಟ್ಟಿಗೇರಿಯಲ್ಲಿ ಇಲ್ಲಿನ ಮೂಂದ್ ನಾಡ್ ಕೊಡವ ಸಮಾಜ ಆಶ್ರಯದಲ್ಲಿ ಸಾರ್ವಜನಿಕ ಗೌರಿ ಗಣೇಶೋತ್ಸವ ಸೇವಾ ಸಮಿತಿ, ಸಂಭ್ರಮ ಮಹಿಳಾ ಕ್ರೀಡೆ ಮತ್ತು ಸಾಂಸ್ಕೃತಿಕ ಸಂಘ, ಕೊಡವ ತಕ್ಕ್ ಎಳ್ತ್‌ಕಾರಡ ಕೂಟ ಆಶ್ರಯದಲ್ಲಿ ಟಿ- ಶೆಟ್ಟಿಗೇರಿ ಕೊಡವ ಸಮಾಜದಲ್ಲಿ ನಡೆಯುತ್ತಿರುವ 7ನೇ ವರ್ಷದ ಕಾವೇರಿ ಚಂಗ್ರಾಂದಿ ಪತ್ತಾಲೋದಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ 10ನೇ ದಿನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ನಾವು ಆಟ ಆಡುತ್ತಿದ್ದ ಭತ್ತದ ಗದ್ದೆಗಳಲ್ಲಿ ವಾಣಿಜ್ಯ ಕಟ್ಟಡ, ಲೇಔಟ್ ನಿರ್ಮಾಣವಾಗುತ್ತಿದೆ. ಅತಿ ಹೆಚ್ಚು ಸಂಖ್ಯೆಯಲ್ಲಿ ವಾಣಿಜ್ಯ ಉದ್ದೇಶಕ್ಕೆ ಭೂಪರಿವರ್ತನೆ ಆಗುತ್ತಿರುವ ಆತಂಕದ ಬಗ್ಗೆ ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಅವರು ಸಹ ಅಧಿವೇಶನದಲ್ಲಿ ಪ್ರಸ್ತಾಪ ಮಾಡಿದ್ದಾರೆ. ಗದ್ದೆಗಳನ್ನು ಸೈಟ್ ಮಾಡಿ ಮನೆ ಕಟ್ಟಿದರೆ ಮಳೆಗಾಲದಲ್ಲಿ ಮನೆಗೆ ನೀರು ನುಗ್ಗುತ್ತವೆ. ಆಗ ಜನಪ್ರತಿನಿಧಿಗಳನ್ನು- ಸರ್ಕಾರವನ್ನು ಜನರು ದೂಷಿಸುತ್ತಾರೆ ಎಂದು ಹೇಳಿದರು. ಇಲ್ಲಿಯವರೆಗೆ ಕೊಡಗಿನ ಪರಿಸರವನ್ನು ನಾವು ಅನುಭವಿಸುತ್ತಾ ಬಂದಿದ್ದೇವೆ. ಇದು ನಮ್ಮ ಸ್ವಂತ ಅಲ್ಲ. ನಾವು ಕಾಪಾಡುವ ಭರವಸೆಯಿಂದ ಪೂರ್ವಜರು ಬಳುವಳಿಯಾಗಿ ನೀಡಿದ ಈ ನೆಲವನ್ನು ಹಾಳು ಮಾಡದೇ ನಮ್ಮಂತೆಯೇ ಉತ್ತಮ ಪರಿಸರದಲ್ಲಿ ಮುಂದಿನ ಪೀಳಿಗೆ ಬದುಕಲು ಕಾಪಾಡಬೇಕಾಗಿದೆಯೇ ಹೊರತು ಹಾಳು ಮಾಡಿದ ಅಪವಾದವನ್ನು ನಾವು ಹೊತ್ತುಕೊಳ್ಳಬಾರದು. ನಾಡಿನ ಹಿರಿಯರು, ಸಂಘ ಸಂಸ್ಥೆಗಳು ಈ ಬಗ್ಗೆ ಚಿಂತನೆ ಮಾಡಬೇಕು. ಕೊಡಗಿನ ಕೃಷಿ ಭೂಮಿಗೆ ಒಳಿತಾಗುವ ಒಮ್ಮತದ ನಿಲುವು ವ್ಯಕ್ತವಾದರೆ ಕೃಷಿ ಭೂಮಿಯ ಸಂರಕ್ಷಣೆಗೆ ಬದ್ಧ ಎಂದರು. ಟಿ.ಶೆಟ್ಟಿಗೇರಿ ಕೊಡವ ಸಮಾಜ ಅಧ್ಯಕ್ಷ ಕೈಬುಲೀರ ಹರೀಶ್ ಅಪ್ಪಯ್ಯ ಅವರು ಕೊಡಗಿನ ಪಾಳು ಬಿದ್ದಿರುವ ಸಹಸ್ರಾರು ಎಕರು ಭತ್ತದ ಗದ್ದೆಗಳನ್ನು ಕೃಷಿ ಭೂಮಿಯಾಗಿ ಸಂರಕ್ಷಣೆ ಮಾಡಲು ಮರುಕೃಷಿ ಮಾಡಿ ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಮತ್ತು ಈ ಮೂಲಕ ಅಂತರ್ಜಲ ವೃದ್ಧಿಸುವ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿ ಸಹಾಯಧನವನ್ನು ನೀಡಬೇಕೆಂದು ನೀಡಿದ ಮನವಿ ಸ್ವೀಕರಿಸಿ ಶಾಸಕರು ವಿಷಯಕ್ಕೆ ಪೂರಕವಾಗಿ ಮಾತನಾಡಿದರು. * ಕೊಡವರ ಬಗ್ಗೆ ಎಲ್ಲರಿಗೂ ಗೌರವವಿದೆ ಕೊಡವರ ಮೇಲೆ ಎಲ್ಲ ಜಾತಿ- ಧರ್ಮದವರಿಗೂ ವಿಶೇಷ ಪ್ರೀತಿ ಗೌರವವಿದೆ. 26 ವರ್ಷಗಳ ಯಶಸ್ವಿ ವಕೀಲ ವೃತ್ತಿಯ ಸೇವೆ ಸಲ್ಲಿಸಿದ ಅನುಭವದಲ್ಲಿ ಎಲ್ಲ ಜಾತಿ ಧರ್ಮದ ಜನರ ಸಂಪರ್ಕ ಹೊಂದಿದ ನನಗೆ ಇದರ ಅನುಭವವಾಗಿದೆ. ಈ ಗೌರವವನ್ನು ನಾವು ಸದಾ ಕಾಪಾಡಿಕೊಳ್ಳಬೇಕು. ಇನ್ನೊಂದು ಜನಾಂಗ- ಧರ್ಮವನ್ನು ದ್ವೇಷಿಸುವ ಮನೋಭಾವ ಬೆಳೆಸಿಕೊಳ್ಳಬಾರದು. ಹಾಗೆಯೇ ಚುನಾವಣೆ ಸಮಯದಲ್ಲಿ ರಾಜಕೀಯ ಬರುತ್ತದೆ, ಆದರೆ ನಂತರದಲ್ಲಿ ರಾಜಕೀಯ ದ್ವೇಷ ಬೆಳೆಸಿಕೊಳ್ಳದೇ ರಾಜಕೀಯ ಮನಸ್ಥಿತಿಯಿಂದ ಹೊರಬರಬೇಕು ಎಂದು ಕಿವಿಮಾತು ಹೇಳಿದ ಅವರು, ನಮ್ಮ ಸಂಸ್ಕೃತಿಯ ಸಂರಕ್ಷಣೆ, ಹಕ್ಕುಗಳನ್ನು ಪಡೆಯಲು ಸರ್ಕಾರದ ಮೇಲೆ ಒತ್ತಡ ಹಾಕಲು ಜನಾಂಗದಲ್ಲಿ ಒಗ್ಗಟ್ಟಿನ ಅಗತ್ಯತೆ ಬಗ್ಗೆ ಪ್ರತಿಪಾದಿಸಿದರು. * ಸನ್ಮಾನ ಬೇಡ ಶಾಸಕರಾಗಿ ಚುನಾಯಿಸಿದ ನಂತರ ಜನರ ಆಶೋತ್ತರಗಳಂತೆ ಸೇವೆ ಮಾಡುತ್ತೆನೆ. ನಿಮ್ಮ ಋಣದಲ್ಲಿರುವ ನನಗೆ ದಯವಿಟ್ಟು ಸನ್ಮಾನ ಬೇಡ ಎಂದು ಮನವಿ ಮಾಡಿದರು. ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ ಪ್ರಾಸ್ತಾವಿಕ ಮಾತನಾಡಿ, ದೇಶದಲ್ಲಿ 53 ಜನಾಂಗ ಮತ್ತು ಆ ಜನಾಂಗದ ಭಾಷೆ ಅಳಿವಿನ ಅಂಚಿನಲ್ಲಿದ್ದು, ಇದರಲ್ಲಿ ಕೊಡವ ಸಹ ಸೇರಿರುವುದು ಆತಂಕಕಾರಿ. ಕೊಡವರು ಹಲವು ದಶಕಗಳಿಂದ ದಸರಾ, ಗೌರಿ ಗಣೇಶ ಹಬ್ಬಗಳನ್ನು ಅತ್ಯಂತ ಅದ್ಧೂರಿಯಾಗಿ ನಡೆಸುತ್ತಾ ಬಂದಿದ್ದಾರೆ. ಆದರೆ ತಮ್ಮದೇ ಜನಾಂಗದ ಹಬ್ಬಗಳ ಆಚರಣೆಯಲ್ಲಿ ಉದಾಸೀನ ಪ್ರವೃತ್ತಿ ತೋರಿಸುತ್ತಿದ್ದಾರೆ. ಆದ್ದರಿಂದ ಚಂಗ್ರಾಂದಿ ಪತ್ತಲೋದಿ ಹಬ್ಬವನ್ನು 10 ದಿನಗಳ ಕಾಲ ವಿಶಿಷ್ಟವಾಗಿ ಆಚರಿಸುವ ಮೂಲಕ ಕೊಡವ ಭಾಷೆ ಸಂಸ್ಕೃತಿಯನ್ನು ಬೆಳೆಸಿ ಉಳಿಸುವ ಉದ್ದೇಶದಿಂದ ಆಚರಣೆ ಮಾಡಲಾಗುತ್ತಿದೆ ಎಂದರು. ಕೊಡವ ಸಮಾಜದ ಅಧ್ಯಕ್ಷ ಹರೀಶ್ ಅಪ್ಪಯ್ಯ ಅಧ್ಯಕ್ಷತೆ ವಹಿಸಿದ್ದರು. ದಾನಿ ಕೈಬುಲೀರ ಪಾರ್ವತಿ ಬೋಪಯ್ಯ, ಕೊಡವ ಸಮಾಜದ ಮಾಜಿ ನಿರ್ದೇಶಕ ತೀತಿರ ಧರ್ಮಜ ಉತ್ತಪ್ಪ, ರೂಟ್ಸ್ ವಿದ್ಯಾ ಸಂಸ್ಥೆಯ ಮುಖ್ಯ ಶಿಕ್ಷಕಿ ಕೇಚೆಟ್ಟಿರ ಮಮತಾ ಅರುಣ್, ತೀತಿರ ಮೀನಾ ಸತೀಶ್ ಮುಖ್ಯ ಅತಿಥಿಗಳಾದ್ದರು. ಸಮಾಜದ ಉಪಾಧ್ಯಕ್ಷ ಮಚ್ಚಮಾಡ ಸುಮಂತ್, ಕಾರ್ಯದರ್ಶಿ ಕೋಟ್ರಮಾಡ ಸುಮಂತ್ ಮಾದಪ್ಪ, ಖಜಾಂಚಿ ಚಂಗುಲಂಡ ಸತೀಶ್, ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷ ಚೆಟ್ಟಂಗಡ ರವಿಸುಬ್ಬಯ್ಯ, ಕ್ರೀಡಾ ಸಮಿತಿಯ ಅಧ್ಯಕ್ಷ ತಡಿಯಂಗಡ ಶಮ್ಮಿ, ನಿರ್ದೇಶಕರಾದ ಚಂಗುಲಂಡ ಅಶ್ವಿನಿ ಸತೀಶ್, ಆಂಡಮಾಡ ಸತೀಶ್, ಮುಕ್ಕಾಟಿರ ಸಂದೀಪ್, ತೀತಿರ ಅನಿತಾ ಸುಬ್ಬಯ್ಯ, ಬೊಳ್ಳೆರ ಅಪ್ಪುಟ ಪೊನ್ನಪ್ಪ, ಕರ್ನಂಡ ರೂಪ ದೇವಯ್ಯ, ಬಾದುಮಂಡ ವಿಷ್ಣು ಕಾರ್ಯಪ್ಪ ಹಾಜರಿದ್ದರು. * ಸನ್ಮಾನ ಕಾರ್ಯಕ್ರಮ ಕಾರ್ಯಕ್ರಮದಲ್ಲಿ ಶಾಸಕ ಪೊನ್ನಣ್ಣ, ದಾನಿ ಪಾರ್ವತಿ ಬೋಪಯ್ಯ, ಸಮಾಜದ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ರವಿಸುಬ್ಬಯ್ಯ ಅವರನ್ನು ಸನ್ಮಾನಿಸಲಾಯಿತು. ಸಮಾರೋಪ ಸಮಾರಂಭದಲ್ಲಿ ಟಿ.ಶೆಟ್ಟಿಗೇರಿ ರೂಟ್ಸ್ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳಿಂದ ನಾಲ್ಕು ಸಣ್ಣ ನಾಟಕ ಪ್ರದರ್ಶನ, ನೃತ್ಯ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜನಮನ ಸೆಳೆಯಿತು. ಕಾರ್ಯಕ್ರಮದಲ್ಲಿ ಕಿಕ್ಕಿರಿದು ಜನರು ಆಗಮಿಸಿ ಬೆಂಬಲ ವ್ಯಕ್ತಪಡಿಸಿದರು. ಚಂಗುಲಂಡ ಅಶ್ವಿನಿ ಸತೀಶ್ ಪ್ರಾರ್ಥಿಸಿದರು. ಮಚ್ಚಮಾಡ ಸುಮಂತ್ ಸ್ವಾಗತಿಸಿದರು. ಕೋಟ್ರಮಾಡ ಸುಮಂತ್ ಮಾದಪ್ಪ ವಂದಿಸಿದರು.

Share this article