ಬೇಡಿಕೆಗಳ ಈಡೇರಿಕೆಗೆ ಅಂಗನವಾಡಿ ನೌಕರರ ಪ್ರತಿಭಟನೆ

KannadaprabhaNewsNetwork | Published : Dec 18, 2024 12:47 AM

ಸಾರಾಂಶ

ರಾಮನಗರ: ಗುಜರಾತ್ ಹೈಕೋರ್ಟ್ ತೀರ್ಪಿನಂತೆ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನು ವರ್ಗ 3 ಮತ್ತು 4 ಎಂದು ಪರಿಗಣಿಸಿ ಕಾಯಂ ಮಾಡುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಂಗನವಾಡಿ ನೌಕರರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ರಾಮನಗರ: ಗುಜರಾತ್ ಹೈಕೋರ್ಟ್ ತೀರ್ಪಿನಂತೆ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನು ವರ್ಗ 3 ಮತ್ತು 4 ಎಂದು ಪರಿಗಣಿಸಿ ಕಾಯಂ ಮಾಡುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಂಗನವಾಡಿ ನೌಕರರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ನಗರದ ಜಿಲ್ಲಾ ಕಚೇರಿಗಳ ಸಂಕೀರ್ಣದ ಎದುರು ರಾಜ್ಯ ಅಂಗನವಾಡಿ ನೌಕರರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಅಂಗನವಾಡಿ ನೌಕರರು, ಬೆಳಗಾವಿಯ ಚಳಿಗಾಲದ ವಿಧಾನಸಭೆ ಅಧಿವೇಶನದಲ್ಲಿ ಅಂಗನವಾಡಿ ನೌಕರರ ಬಗ್ಗೆ ಚರ್ಚೆ ನಡೆಸಿ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.

2018ರಿಂದ ಕೇಂದ್ರ ಸರ್ಕಾರ ಯಾವುದೇ ಗೌರವಧನ ಹೆಚ್ಚಳ ಮಾಡಿಲ್ಲವಾದ್ದರಿಂದ ಕೇಂದ್ರ ಸರ್ಕಾರ 26 ಸಾವಿರ ರು.ಗಳಿಗೆ ಗೌರವಧನ ಹೆಚ್ಚಿಸಬೇಕು. 2023ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಘೋಷಣೆ ಮಾಡಿದಂತೆ 15 ಸಾವಿರ ರು.ಗೌರವಧನ ಹೆಚ್ಚಿಸಬೇಕು. ನಿವೃತ್ತಿಯಾದವರಿಗೆ ಇಡಿಗಂಟು ಅಥವಾ ಎನ್‌ಪಿಎಸ್ ಹಣವನ್ನು ಹಾಗೂ 10 ಸಾವಿರ ಮಾಸಿಕ ಪಿಂಚಣಿ ನೀಡಬೇಕು ಎಂದು ಆಗ್ರಹಿಸಿದರು.

ಶಿಕ್ಷಣ ಇಲಾಖೆ ಮತ್ತು ಎಸ್‌ಡಿಎಂಸಿಗಳಿಂದ ಪ್ರಾರಂಭ ಮಾಡಿರುವ ಎಲ್‌ಕೆಜಿ - ಯುಕೆಜಿ ನಿಲ್ಲಿಸಿ ಎಲ್ಲಾ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ ಅಂಗನವಾಡಿ ಕೇಂದ್ರಗಳಲ್ಲಿಯೇ ಎಲ್‌ಕೆಜಿ - ಯುಕೆಜಿ ಪ್ರಾರಂಭಿಸಬೇಕು. ಐಸಿಡಿಎಸ್ ಯೋಜನೆಗೆ ಪ್ರತ್ಯೇಕ ನಿರ್ದೇಶನಾಲಯ ಸ್ಥಾಪಿಸಬೇಕು. ಚುನಾವಣಾ ಕಾರ್ಯಗಳಿಂದ ಮುಕ್ತಿಗೊಳಿಸಬೇಕು ಎಂದು ಒತ್ತಾಯ ಮಾಡಿದರು.

ಸಾಮೂಹಿಕ ಆರೋಗ್ಯ ವಿಮೆ ಕೂಡಲೇ ಜಾರಿಗೊಳಿಸುವುದು. ಅಂಗನವಾಡಿ ಕೇಂದ್ರಗಳಿಗೆ ಕೊಡುವ ಪೂರಕ ಪೌಷ್ಟಿಕ ಆಹಾರಕ್ಕೆ ಜಿಎಸ್‌ಟಿ ಹಾಕಬಾರದು. ಘಟಕ ವೆಚ್ಚ ಹೆಚ್ಚಳ ಮಾಡಿ ಹಿಂದಿನಂತೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮೆನು ಅಂತಿಮಗೊಳ್ಳುವ ವ್ಯವಸ್ಥೆ ಜಾರಿಯಾಗಬೇಕು. ಖಾಲಿ ಹುದ್ದೆಗಳನ್ನು 3 ತಿಂಗಳೊಳಗೆ ನೇಮಕಾತಿ ಮಾಡಬೇಕು. ಇಲ್ಲದಿದ್ದರೆ ಅಧಿಕಾವಧಿ ವೇತನ ಕೊಡಬೇಕು. ಸಹಾಯಕಿ ಇಲ್ಲದ ಅಂಗನವಾಡಿ ಕೇಂದ್ರಗಳಲ್ಲಿ ಟೇಕ್ ಹೋಮ್ ಕೊಡಬೇಕು. ಇಲ್ಲದಿದ್ದರೆ ತಾತ್ಕಾಲಿಕ ಸಹಾಯಕಿಯರನ್ನು ನೇಮಕಾತಿ ಮಾಡಿಕೊಳ್ಳುವ ಅಧಿಕಾರ ಕಾರ್ಯಕರ್ತೆಗೆ ಕೊಡಬೇಕು ಎಂದು ಆಗ್ರಹಿಸಿದರು.

ಖಾಲಿ ಇರುವ ಮತ್ತು ಹೊಸ ಕೇಂದ್ರಗಳಿಗೆ ಸರ್ಕಾರಿ ಆದೇಶದಂತೆ ಮುಂಬಡ್ತಿ, ವರ್ಗಾವಣೆಗಳನ್ನೂ ನೀಡಿ ನಂತರ ಹೊಸ ಆಯ್ಕೆ ಮಾಡಬೇಕು. ಮಿನಿ ಅಂಗನವಾಡಿ ಕೇಂದ್ರಗಳನ್ನು ಪೂರ್ಣ ಕೇಂದ್ರಗಳನ್ನಾಗಿ ಪರಿವರ್ತಿಸುವ ತನಕ ಸಹಾಯಕಿಯರನ್ನು ಕೊಡಬೇಕು. ಪೂರ್ಣ ಕಾರ್ಯಕರ್ತೆಗೆ ಕೊಡುವಷ್ಟು ಗೌರವಧನ ಹೆಚ್ಚಿಸಬೇಕು.

ಅಂಗನವಾಡಿ ಕೇಂದ್ರದ ಚಟುವಟಿಕೆಗಳನ್ನು ಮೊಬೈಲ್‌ನಲ್ಲಿ ದಾಖಲೆ ನಿರ್ವಹಣೆ ಮಾಡಿದರೆ ಪುಸ್ತಕದಲ್ಲಿ ಬರೆಯುವುದನ್ನು ನಿಲ್ಲಿಸಬೇಕು. ಪೌಷ್ಟಿಕ ಆಹಾರ ಮತ್ತು ಪೂರ್ವ ಪ್ರಾಥಮಿಕ ಶಿಕ್ಷಣ ಹಕ್ಕಾಗಬೇಕು. ಐಸಿಡಿಎಸ್ ಯೋಜನೆಯನ್ನು ಕಾಯ್ದೆಯನ್ನಾಗಿ ರೂಪಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಅಪರ ಜಿಲ್ಲಾಧಿಕಾರಿ ಚಂದ್ರಯ್ಯ ಮನವಿ ಸ್ವೀಕರಿಸಿ, ಬೇಡಿಕೆಗಳನ್ನು ಪರಿಶೀಲಿಸಿ ಈಡೇರಿಸುವ ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷೆ ಪುಷ್ಪಲತಾ, ಗೌರವ ಅಧ್ಯಕ್ಷೆ ಸಿ.ಜಯಲಕ್ಷ್ಮಮ್ಮ, ಪ್ರಧಾನ ಕಾರ್ಯದರ್ಶಿ ಭಾಗ್ಯಮ್ಮ, ಖಜಾಂಚಿ ಶಾರದಾ, ಸಾವಿತ್ರಮ್ಮ, ನಾಗರತ್ನ, ನಾಗಮ್ಮ, ಹೇಮಾ ಮತ್ತಿತರರು ಭಾಗವಹಿಸಿದ್ದರು.

17ಕೆಆರ್ ಎಂಎನ್ 1.ಜೆಪಿಜಿ

ರಾಮನಗರ ಜಿಲ್ಲಾ ಕಚೇರಿಗಳ ಸಂಕೀರ್ಣದ ಎದುರು ಅಂಗನವಾಡಿ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವುದು.

Share this article