ನ್ಯಾಯಾಧೀಶರ ಎದುರೇ ಬಯಲಾದ ಅಂಗನವಾಡಿ ಅವಾಂತರ

KannadaprabhaNewsNetwork | Published : Jul 23, 2024 12:36 AM

ಸಾರಾಂಶ

ಅಂಗನವಾಡಿಗಳ ಕಳೆಪ ಆಹಾರ ಪೂರೈಕೆ ಸೇರಿದಂತೆ ಹಲವಾರು ಅವಾಂತರಗಳು ಹಿರಿಯ ಸಿವಿಲ್‌ ನ್ಯಾಯಾಧೀಶ ಮಲಕಾರಿ‌ ರಾಮಪ್ಪ ಒಡೆಯರ್ ಎದುರಿನಲ್ಲಿಯೇ ಬೆಳಕಿಗೆ ಬಂದಿವೆ.

ಅವಧಿ ಮೀರಿದ ಹಾಲಿನ ಪುಡಿ, ತವಡು ತುಂಬಿದ ರವಾ

ಅವ್ಯವಸ್ಥೆ ಕಂಡು ಬೆರಗಾದ ಹಿರಿಯ ಸಿವಿಲ್‌ ನ್ಯಾಯಾಧೀಶ ಮಲಕಾರಿ‌ ರಾಮಪ್ಪ ಒಡೆಯರ್

ಕನ್ನಡಪ್ರಭ ವಾರ್ತೆ ಕೊಪ್ಪಳ

ತಾಲೂಕಿನ ವಿವಿಧ ಅಂಗನವಾಡಿಗಳಲ್ಲಿ ಕಳೆಪ ಆಹಾರ ಪೂರೈಕೆ ಸೇರಿದಂತೆ ಹಲವಾರು ಅವಾಂತರಗಳು ಹಿರಿಯ ಸಿವಿಲ್‌ ನ್ಯಾಯಾಧೀಶರೂ, ಜಿಲ್ಲಾ‌ ಕಾನೂನು ಸೇವೆಗಳ ಪ್ರಾಧಿಕಾರದ ಜಿಲ್ಲಾ ಕಾರ್ಯದರ್ಶಿ ಮಲಕಾರಿ‌ ರಾಮಪ್ಪ ಒಡೆಯರ್ ಎದುರಿನಲ್ಲಿಯೇ ಬೆಳಕಿಗೆ ಬಂದಿವೆ. ಖುದ್ದು ನ್ಯಾಯಾಧೀಶರೇ ಅಂಗನವಾಡಿಗಳಲ್ಲಿನ ಅವ್ಯವಸ್ಥೆ ಕಂಡು ಬೆಕ್ಕಸಬೆರಗಾದರು. ಅವಾಂತರದ ಕುರಿತು ಮರುಕ ವ್ಯಕ್ತಪಡಿಸಿದ್ದಾರೆ.

ಕೊಪ್ಪಳ‌ ತಾಲೂಕಿನ‌ ಹಲಗೇರಿಯ‌ ಹಾಗೂ ವಿವಿಧೆಡೆಗಳ ಹಲವು ಅಂಗನವಾಡಿ‌ ಕೇಂದ್ರಗಳಿಗೆ ಸೋಮವಾರ ದಿಢೀರ್ ಭೇಟಿ ನೀಡಿ ಪರಿಶೀಲಿಸಿದಾಗ ಇದೆಲ್ಲವೂ ಬೆಳಕಿಗೆ ಬಂದಿದೆ.

ಹಲಿಗೇರಿ ಮತ್ತು ವಿವಿಧ ಅಂಗನವಾಡಿಗಳಲ್ಲಿ ಅವಧಿ ಮೀರಿದ‌ ಹಾಲಿನ‌ ಪುಡಿ, ತವಡು ಮಿಶ್ರತ‌ ರವಾ‌, ಕಡಿಮೆ ಪ್ರಮಾಣದ‌‌ ಮೊಟ್ಟೆ ಇನ್ನಿತರ‌ ಆಶ್ಚರ್ಯಕರ ಸಂಗತಿಗಳು ಬಯಲಾಗಿವೆ.

ಇದಲ್ಲದೆ ಹಲವು ಸೌಲಭ್ಯಗಳನ್ನು ಮಕ್ಕಳಿಗೆ ಒದಗಿಸದೆ ಇರುವುದು ಗೊತ್ತಾಗಿದೆ. ಅಷ್ಟೇ ಅಲ್ಲ, ಕಡಿಮೆ ಮಕ್ಕಳಿದ್ದರೂ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳ‌ ಇರುವುದಾಗಿ ತಪ್ಪು ಲೆಕ್ಕ ತೋರಿಸಿರುವುದು ಪರಿಶೀಲನೆಯ ವೇಳೆಯಲ್ಲಿ ಗೊತ್ತಾಗಿದೆ.‌ ಅನೇಕ ದಾಖಲೆಗಳಲ್ಲಿ ಅಪರಾತಪರ ವಿಷಯಗಳಿರುವುದನ್ನು ಗುರುತಿಸಿದರು. ಇನ್ನಿತರೆ ಅಚಾತುರ್ಯ ಸಂಗತಿಗಳನ್ನು ನ್ಯಾಯಾಧೀಶರು ಗಂಭೀರವಾಗಿ ಪರಿಗಣಿಸಿದ್ದು, ತಮ್ಮ ಸಹ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿದರು.

ಹಾಜರಿಯೂ ಹಾಕಿಲ್ಲ:

ಕೊಪ್ಪಳದ ಗಣೇಶ ನಗರದಲ್ಲಿ ಅಂಗನವಾಡಿಯಲ್ಲಿ‌ ಕಳೆದ 2-3 ತಿಂಗಳಿಂದ‌ ಮಕ್ಕಳ‌ ಹಾಜರಿ‌ ಹಾಕದಿರುವುದು, ಅಂಗನವಾಡಿ ಕಾರ್ಯಕರ್ತೆ ಸಹ ಅಂಗನವಾಡಿಗೆ‌ 2 ತಿಂಗಳಿಂದ ಬರದೇ ಇರುವುದು, 40 ಮಕ್ಕಳ ಅಂಗನವಾಡಿಯಲ್ಲಿ ಕಚೇರಿಯ ಅವಧಿಯಲ್ಲಿ‌ ಒಂದೇ ಒಂದು ಮಗುವಾಗಲಿ, ಸಹಾಯಕರಾಗಲಿ ಇರದಿರುವುದು, ಬೇನಾಮಿ‌ ವ್ಯಕ್ತಿಗಳ‌ ಕೈಯಲ್ಲಿ‌ ಅಂಗನವಾಡಿ‌ ಕೀಲಿ‌ ಕೊಟ್ಟಿರುವುದು, ಯಾವುದೇ‌ ದಾಖಲೆಗಳು‌ ಇಲ್ಲದಿರುವುದು, ಇತರ ಆಶ್ಚರ್ಯಕರ ಸಂಗತಿಗಳನ್ನು‌‌ ಗುರುತಿಸಿ‌ ಛೀಮಾರಿ‌ ಹಾಕಿದರು.

ನಂತರ ಈ‌ ಬಗ್ಗೆ‌ ಮಹಿಳಾ‌ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಡಿಡಿಯವರಿಗೆ ಕರೆ ಮಾಡಿ‌ ಅಂಗನವಾಡಿಯ‌ ಕುರಿತಂತೆ ಕ್ರಮಕ್ಕೆ‌ ಸೂಚಿಸಿದರು.

ಈ‌ ವೇಳೆ ಪ್ರಾಧಿಕಾರದ ಸ್ವಯಂ‌ ಸೇವಕ ಆರ್.ಎಚ್.‌ ಪೂಜಾರ, ಬಸವರಾಜ ಗಡಾದ ಇತರರಿದ್ದರು.

Share this article