ಹಾನಗಲ್ಲ ಆನಿಕೆರೆ ಕಾಲುವೆ ಕಾಮಗಾರಿ ಅವೈಜ್ಞಾನಿಕ?

KannadaprabhaNewsNetwork |  
Published : Apr 04, 2026, 02:30 AM IST
ಕಾಂಕ್ರೀಟ್ ಕಾಲುವೆ ಕಾಮಗಾರಿ ದೃಶ್ಯಗಳು.... | Kannada Prabha

ಸಾರಾಂಶ

ಪಟ್ಟಣಕ್ಕೆ ಕುಡಿಯುವ ನೀರಿನ ಜಲಮೂಲವಾದ ಆನಿಕೆರೆ ಹಿನ್ನೀರಿನ ಬಯಲಿನಿಂದ ಅಚಗೇರಿ ಕೆರೆವರೆಗೆ ರಾಜ್ಯ ವಿಪತ್ತು ನಿರ್ವಹಣಾ ಯೋಜನೆಯಡಿಯಲ್ಲಿ ₹೫ ಕೋಟಿ ವೆಚ್ಚದಲ್ಲಿ ನಡೆದಿರುವ ಕಾಮಗಾರಿಯಲ್ಲಿ ಕಾಲುವೆಗಳನ್ನು ಎತ್ತರಿಸುವುದು ಹಾಗೂ ಮನೆಗಳ ಹಿಂಭಾಗದ ಕಾಲುವೆಗಳಿಗೆ ಸ್ಲ್ಯಾಬ್ ಅಳವಡಿಸುವ ಅಗತ್ಯವಿದ್ದು, ಯೋಜನೆ ಪರಿಷ್ಕರಿಸಲು ಆಗ್ರಹ ಕೇಳಿಬಂದಿದೆ.

ಮಾರುತಿ ಶಿಡ್ಲಾಪೂರ

ಕನ್ನಡಪ್ರಭ ವಾರ್ತೆ ಹಾನಗಲ್ಲ

ಪಟ್ಟಣಕ್ಕೆ ಕುಡಿಯುವ ನೀರಿನ ಜಲಮೂಲವಾದ ಆನಿಕೆರೆ ಹಿನ್ನೀರಿನ ಬಯಲಿನಿಂದ ಅಚಗೇರಿ ಕೆರೆವರೆಗೆ ರಾಜ್ಯ ವಿಪತ್ತು ನಿರ್ವಹಣಾ ಯೋಜನೆಯಡಿಯಲ್ಲಿ ₹೫ ಕೋಟಿ ವೆಚ್ಚದಲ್ಲಿ ನಡೆದಿರುವ ಕಾಮಗಾರಿಯಲ್ಲಿ ಕಾಲುವೆಗಳನ್ನು ಎತ್ತರಿಸುವುದು ಹಾಗೂ ಮನೆಗಳ ಹಿಂಭಾಗದ ಕಾಲುವೆಗಳಿಗೆ ಸ್ಲ್ಯಾಬ್ ಅಳವಡಿಸುವ ಅಗತ್ಯವಿದ್ದು, ಯೋಜನೆ ಪರಿಷ್ಕರಿಸಲು ಆಗ್ರಹ ಕೇಳಿಬಂದಿದೆ.

ಆನಿಕೆರೆ ೪೮.೨೮ ಹೆಕ್ಟೇರ್ ವಿಸ್ತೀರ್ಣವಿದ್ದು, ಪಟ್ಟಣಕ್ಕೆ ಕುಡಿಯುವ ನೀರಿಗಾಗಿ ೪೩.೨೨ ಮೆಟ್ರಿಕ್ ಕ್ಯೂಬಿಕ್ ಫೀಟ್ ನೀರು ಸಂಗ್ರಹದ ಸಾಮರ್ಥ್ಯ ಹೊಂದಿದೆ. ಆನಿಕೆರೆಯ ಹಿನ್ನೀರಿಗೆ ಮಳೆಗಾಲದಲ್ಲಿ ಪಟ್ಟಣದ ವಿವಿಧ ಪ್ರದೇಶದ ಕೊಳಚೆ ನೀರು ಸೇರುತ್ತಿದೆ. ಇದನ್ನು ತಪ್ಪಿಸಲು ರಾಜ್ಯ ವಿಪತ್ತು ನಿರ್ವಹಣಾ ಯೋಜನೆಯಡಿ ₹೫ ಕೋಟಿ ವೆಚ್ಚದಲ್ಲಿ ಆನಿಕೆರೆ ಹಿನ್ನೀರು ಬಯಲಿನಿಂದ ಅಚಕೆರೆ ವರೆಗೆ ೨.೬ ಕಿಮೀ ಕಾಂಕ್ರಿಟ್ ಕಾಲುವೆ ನಿರ್ಮಾಣ ಕಾಮಗಾರಿ ಅವೈಜ್ಞಾನಿಕವಾಗಿದೆ.

ಆನಿಕೆರೆ ಹಿನ್ನೀರಿನ ಪ್ರದೇಶದಲ್ಲಿ ಕಾಲುವೆಯ ಎತ್ತರ ೫ ಅಡಿ ಎನ್ನಲಾಗಿದೆ. ಆದರೆ ಭಾರೀ ಮಳೆ ಸಂದರ್ಭದಲ್ಲಿ ಆನಿಕೆರೆಯ ಹಿನ್ನೀರು ಈ ಕಾಂಕ್ರಿಟ್‌ ಕಾಲುವೆಯ ಎತ್ತರಕ್ಕಿಂತ ಹೆಚ್ಚು ಎತ್ತರಕ್ಕೆ ಬಂದು ನಿಲ್ಲುವ ಸಂದರ್ಭಗಳಿವೆ. ಈ ಕಾರಣಕ್ಕಾಗಿ ಇದೇ ಪಟ್ಟಣದಿಂದ ಬರುವ ಕೊಳಚೆ ನೀರು ಮತ್ತೆ ಆನಿಕೆರೆ ಸೇರುವುದೆಂಬ ಆತಂಕವಿದೆ.

ಇದರೊಂದಿಗೆ ಆನಿಕೆರೆಯನ್ನು ದಾಟಿ ಮುಂದೆ ಕಾಲುವೆ ಅಚಗೆರಿ ಕೆರೆವರೆಗಿನ ಕಾಮಗಾರಿ ಉದ್ದಕ್ಕೂ ಒಂದು ಕಡೆಗೆ ಮನೆಗಳಿವೆ. ಇನ್ನೊಂದು ಕಡೆಗೆ ಕೋಟೆ ಗೋಡೆಯೂ ಇದೆ. ಇದೇ ಕಾಲುವೆ ಬದಿ ಕೆಲವು ಮೀಟರನಲ್ಲಿ ಕ್ರೀಡಾಂಗಣವೂ ಇದೆ. ಆ ಕಾರಣಕ್ಕಾಗಿ ಈ ಕಾಲುವೆಗೆ ಮೇಲೆ ಸ್ಲ್ಯಾಬ್ ಹಾಕಬೇಕೆಂಬ ಬೇಡಿಕೆಯೂ ಇದೆ. ದೊಡ್ಡ ಪ್ರಮಾಣದ ಮಳೆ ಬಂದಾಗಲಂತೂ ಮತ್ತೆ ಇದೇ ಹಿನ್ನೀರು ಆನಿಕೆರೆ ಸೇರಿ ಅದೇ ಕಲುಷಿತ ನೀರಿನ ಆತಂಕಕ್ಕೆ ಸಾರ್ವಜನಿಕರು ಒಳಗಾಗಬೇಕಾಗುತ್ತದೆ.

ಕಾಲುವೆಯ ಒಂದು ಗೋಡೆ ಇನ್ನೆರಡು ಅಡಿ ಎತ್ತರಿಸಿದರೆ ಮಾತ್ರ ಇದು ಶಾಶ್ವತ ಪರಿಹಾರವಾಗಬಲ್ಲದು. ಈಗ ಯೋಜನೆ ಪರಿಷ್ಕರಿಸಿ ಕಾಮಗಾರಿ ಪೂರ್ಣಗೊಳಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ.

ಅನಿಕೆರೆಯ ಕೋಡಿಯ ಅಳತೆಯನ್ನು ಗಮನದಲ್ಲಿಟ್ಟುಕೊಂಡು ಈ ಕಾಮಗಾರಿ ರೂಪಿಸಲಾಗಿದೆ. ಪಟ್ಟಣದಿಂದ ಬರುವ ಯಾವುದೇ ಭಾಗದ ಕೊಳಚೆ ನೀರು ಇನ್ನು ಆನಿಕೆರೆ ಸೇರಲಾರದು. ಸಾರ್ವಜನಿಕರ ಒತ್ತಾಸೆಯನ್ನು ಪುನರ್ ಪರಿಶೀಲಿಸಿ ಅಗತ್ಯವಿದ್ದರೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಜರುಗಿಸಲಾಗುವುದು. ಇದೇ ಮೇ ತಿಂಗಳ ಒಳಗಾಗಿ ಕಾಮಗಾರಿ ಪೂರ್ಣಗೊಳಿಸುವಷ್ಟು ವೇಗದ ಕಾಮಗಾರಿ ನಡೆದಿದೆ ಎಂದು ಹಾನಗಲ್ಲ ನೀರಾವರಿ ಇಲಾಖೆ ಸಹಾಯಕ ಅಭಿಯಂತರ ಎಂ.ಬಿ. ಬಡಿಗೇರ ಹೇಳಿದರು.

ಈ ಕಾಮಗಾರಿ ಸರ್ವೇ ಸಂದರ್ಭದಲ್ಲಿಯೇ ಈ ಕಾಂಕ್ರಿಟ್‌ ಕಾಲುವೆ ಎತ್ತರದ ಬಗೆಗೆ ಇಲ್ಲಿನ ರೈತರು ಸಾರ್ವಜನಿಕರು ಅಧಿಕಾರಿಗಳ ಗಮನ ಸೆಳೆದಿದ್ದೆವು. ಅಧಿಕಾರಿಗಳು ಹೇಳುವುದಕ್ಕೂ ವಾಸ್ತವಕ್ಕೂ ಹೊಂದಾಣಿಕೆ ಆಗುತ್ತಿಲ್ಲ. ಆದ್ದರಿಂದ ಈ ಕಾಲುವೆಯ ಎತ್ತರವನ್ನು ಈಗಿರುವ ೫ ಅಡಿಗಿಂತ ಆರೇಳು ಅಡಿವರೆಗೆ ವಿಸ್ತರಿಸಬೇಕು. ಅಂದಾಗ ಮಾತ್ರ ಇದು ಪೂರ್ಣ ಪ್ರಮಾಣದ ಕೊಳಚೆ ಮುಕ್ತ ಆಗಲು ಸಾಧ್ಯ ಎಂದು ಹಾನಗಲ್ಲ ನಾಗರಿಕ ಸುನೀಲ ಬಂಕನಾಳ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉಚಿತ ವೈದ್ಯಕೀಯ, ನೇತ್ರ ತಪಾಸಣೆ ಮತ್ತು ದಂತ ಚಿಕಿತ್ಸಾ ಶಿಬಿರ
ಯಕ್ಷಧ್ರುವ ಪಟ್ಲ ಫೌಂಡೇಶನ್: ಮಂಗಳೂರು ಘಟಕದ ಅಷ್ಟಮ ಸಂಭ್ರಮ