ಅಂಜನಾದ್ರಿ ಅಭಿವೃದ್ಧಿ ಗೆ ತಾತ್ಸಾರ

KannadaprabhaNewsNetwork |  
Published : Dec 03, 2025, 02:30 AM IST
2ಕೆಪಿಎಲ್25  ಅಂಜನಾದ್ರಿಯಲ್ಲಿ ಹನುಮಮಾಲಾಧಾರಿಗಳಿಗೆ ಪ್ರಸಾದ ವ್ಯವಸ್ಥೆ ಮಾಡುತ್ತಿರುವುದು.2ಕೆಪಿಎಲ್26 ಹನುಮಮಲಾಧಾರಿಗಳಿಗೆ  ಸಂಸದ ರಾಜಶೇಖರ ಹಿಟ್ನಾಳ ಅವರ ಪತ್ನಿ ರಶ್ಮಿ ಅವರು ಕಡ್ಲೆ ಹಿಟ್ಟು ವಿತರಣೆ ಮಾಡುತ್ತಿರುವುದು. | Kannada Prabha

ಸಾರಾಂಶ

ವರ್ಷ ಪೂರ್ತಿ 30-40 ಲಕ್ಷಕ್ಕೂ ಅಧಿಕ ಭಕ್ತರನ್ನು ಸೆಳೆಯುವ ಆಂಜನಾದ್ರಿ ಬೆಟ್ಟದ ಅಭಿವೃದ್ಧಿ, ಪ್ರವಾಸಿಗರಿಗೆ ಮೂಲಭೂತ ಸೌಕರ್ಯ ಒದಗಿಸಬೇಕು ಎನ್ನುವ ಮಾಸ್ಟರ್ ಪ್ಲಾನ್ ತೆವಳುತ್ತಾ ಸಾಗಿದೆ.

ಸೋಮರಡ್ಡಿ ಅಳವಂಡಿ ಕೊಪ್ಪಳ

ದೇಶ, ವಿದೇಶಿ ಪ್ರವಾಸಿಗರ ಆಕರ್ಷಣೀಯ ಸ್ಥಳ ಎಂದೆ ಖ್ಯಾತಿಯಾಗಿರುವ ಮತ್ತು ದೇಶಾದ್ಯಂತ ಹನುಮ ಮಾಲಾಧಾರಿಗಳನ್ನು ಸೆಳೆಯುತ್ತಿರುವ ಅಂಜನಾದ್ರಿ ಅಭಿವೃದ್ಧಿಗೆ ಆಡಳಿತದ ತಾತ್ಸಾರ ಎದ್ದು ಕಾಣುತ್ತಿದೆ.

ಡಿ.3 ರಂದು ನಡೆಯುವ ಹನುಮ ಮಾಲಾ ವಿಸರ್ಜನಾ ಕಾರ್ಯಕ್ರಮಕ್ಕೆ ನಾಡಿನ ಮೂಲೆ ಮೂಲೆಯಿಂದ ಲಕ್ಷಾಂತರ ಭಕ್ತರು ಅಪಾರ ಸಂಖ್ಯೆಯಲ್ಲಿ ಆಗಮಿಸುತ್ತಾರೆಯಾದರೂ ಕನಿಷ್ಠ ಸೌಲಭ್ಯವೂ ಇಲ್ಲದಂತಾಗಿದೆ. ಕೇವಲ ಜಿಲ್ಲಾಡಳಿತ ಹರಸಾಹಸ ಮಾಡಿ ತಾತ್ಕಾಲಿಕ ವ್ಯವಸ್ಥೆ ಮಾಡುತ್ತಿದೆ.

ಹೌದು, ವರ್ಷ ಪೂರ್ತಿ 30-40 ಲಕ್ಷಕ್ಕೂ ಅಧಿಕ ಭಕ್ತರನ್ನು ಸೆಳೆಯುವ ಆಂಜನಾದ್ರಿ ಬೆಟ್ಟದ ಅಭಿವೃದ್ಧಿ, ಪ್ರವಾಸಿಗರಿಗೆ ಮೂಲಭೂತ ಸೌಕರ್ಯ ಒದಗಿಸಬೇಕು ಎನ್ನುವ ಮಾಸ್ಟರ್ ಪ್ಲಾನ್ ತೆವಳುತ್ತಾ ಸಾಗಿದೆ.

ಹಂಪಿ ಅಭಿವೃದ್ಧಿ ಪ್ರಾಧಿಕಾರವೇ ಅಡ್ಡಿ: ಅಂಜನಾದ್ರಿಯಲ್ಲಿ ಅಭಿವೃದ್ಧಿ ಮಾಡುವುದಕ್ಕೆ ಹಣಕಾಸಿನ ಅಭಾವ ಇಲ್ಲ. ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ₹100 ಕೋಟಿ ಹಾಗೂ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ₹100 ಕೋಟಿ ಬಜೆಟ್ ನಲ್ಲಿ ಘೋಷಣೆಯಾಗಿ ಬಿಡುಗಡೆಯಾಗಿದೆ. ಈ ಪೈಕಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ₹17.45 ಕೋಟಿ ಕಾಮಗಾರಿ ಮಾತ್ರ ನಡೆದಿದ್ದು, ಅದು ಸಹ ಪೂರ್ಣಗೊಂಡಿಲ್ಲ.

ಈ ಎಲ್ಲ ಅಭಿವೃದ್ಧಿ ಕಾಮಗಾರಿಗಳಿಗೆ ಹಂಪಿ ಅಭಿವೃದ್ಧಿ ಪ್ರಾಧಿಕಾರವೇ ಅಡ್ಡಿಯಾಗಿದೆ. ಅಂಜನಾದ್ರಿ ಮತ್ತು ಆನೆಗೊಂದಿಯ ಬಗ್ಗೆ ತಾತ್ಸಾರ ಭಾವನೆ ತೋರುತ್ತಿರುವುದು ಸ್ಪಷ್ಟವಾಗಿ ಗೋಚರವಾಗುತ್ತದೆ. ಹಂಪಿ ವ್ಯಾಪ್ತಿಯಲ್ಲಿ ಇಲ್ಲದ ಷರತ್ತು ಇಲ್ಲಿ ವಿಧಿಸಲಾಗುತ್ತದೆ. ಭೂ ಸ್ವಾಧೀನ ಪ್ರಕ್ರಿಯೆಗೂ ಹಂಪಿ ಅಭಿವೃದ್ಧಿ ಪ್ರಾಧಿಕಾರದಿಂದ ಹಿನ್ನಡೆಯಾಗಿದೆ. ವಿಶ್ವ ಪಾರಂಪರಿಕ ತಾಣ ವ್ಯಾಪ್ತಿಗೆ ಬರುತ್ತಿರುವುದರಿಂದ ಅಭಿವೃದ್ಧಿಗೆ ಒಂದಿಲ್ಲೊಂದು ಕಾರಣ ನೀಡಿ ಕೊಕ್ಕೆ ಹಾಕುತ್ತಲೇ ಬಂದಿದೆ.

ಕೇಬಲ್ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಅಸ್ತು ಎಂದಿತ್ತು. ಆದರೆ, ಅದು ವಾಸ್ತವಿಕವಾಗಿ ಅನುಷ್ಠಾನ ಸಮಸ್ಯೆಯಿಂದ ಅದನ್ನು ಸಹ ಕೈಬಿಡಲಾಗಿದೆ. ಪ್ರತಿನಿತ್ಯ 8-10 ಸಾವಿರ ಜನರಿಗೆ ಮಾತ್ರ ಅವಕಾಶ ಮಾಡಲು ಸಾಧ್ಯವಾಗುವುದರಿಂದ ಹಾಗೂ ಇಲ್ಲಿಗೆ ಆಗಮಿಸುವ ಭಕ್ತರ ಸಂಖ್ಯೆ ಸಾಧಾರಣವಾಗಿ 10 ಸಾವಿರದಿಂದ ವಿಶೇಷ ಸಂದರ್ಭ, ದಿನದಲ್ಲಿ 2-3 ಲಕ್ಷ ಮೀರುವುದರಿಂದ ಅನುಷ್ಠಾನ ಸೂಕ್ತವಲ್ಲ ಎಂದು ಕೈಬಿಡಲಾಗಿದೆ.

ಹೀಗೆ, ಲಕ್ಷ ಲಕ್ಷ ಭಕ್ತರು ಆಗಮಿಸುವ ಅಂಜನಾದ್ರಿಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿಯಾಗದೆ ಇರುವುದು ಅಂಜನೇಯನ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.

ಅಂಜನಾದ್ರಿಯಲ್ಲಿ ಕಟ್ಟುನಿಟ್ಟು: ಪ್ರಸಕ್ತ ವರ್ಷ ನಡೆಯುತ್ತಿರುವ ಹನುಮ ಮಾಲಾ ವಿಸರ್ಜನಾ ಕಾರ್ಯಕ್ರಮದಲ್ಲಿ ಲಕ್ಷ ಲಕ್ಷ ಸಂಖ್ಯೆಯ ಹನುಮ ಮಾಲಾಧಾರಿಗಳು ಆಗಮಿಸುತ್ತಿರುವುದರಿಂದ ತ್ಯಾಜ್ಯ ನಿರ್ವಹಣೆಗೆ ಹಲವಾರು ಕ್ರಮ ಜಿಲ್ಲಾಡಳಿತ ಕೈಗೊಂಡಿದೆ. ಪ್ಲಾಸ್ಟಿಕ್ ಬಳಕೆ ಸಂಪೂರ್ಣವಾಗಿ ನಿಷೇಧ ಮಾಡಲಾಗಿದೆ. ಇದಕ್ಕಿಂತ ಮಿಗಿಲಾಗಿ ಸಾಬೂನು ಮತ್ತು ಶ್ಯಾಂಪು ಬಳಕೆ ನಿಷೇಧ ಮಾಡಲಾಗಿದೆ. ಸಾಬೂನು ಮತ್ತು ಶ್ಯಾಂಪು ಅತಿಯಾಗಿ ಬಳಕೆ ಮಾಡಿ ಆ ನೀರು ತುಂಗಭದ್ರಾ ನದಿ ಸೇರುವುದರಿಂದ ಮಲೀನವಾಗುತ್ತಿರುವುದನ್ನು ತಡೆಗಟ್ಟಲು ಕ್ರಮ ವಹಿಸಲಾಗಿದೆ. ಹೀಗಾಗಿ, ಬಂದವರಿಗೆಲ್ಲ ಕಡ್ಲೆ ಹಿಟ್ಟು ಬಳಕೆ ಮಾಡಲು ಸೂಚಿಸಲಾಗಿದೆ. ಇದನ್ನು ಸಹ ಪೂರೈಕೆ ಮಾಡುವ ವ್ಯವಸ್ಥೆ ಮಾಡಲಾಗಿದೆ. ಅಷ್ಟೇ ಅಲ್ಲ, ಹನುಮ ಮಾಲಾ ವಿಸರ್ಜನೆ ಬಳಿಕ ತಮ್ಮ ವಸ್ತ್ರಗಳನ್ನು ಎಲ್ಲೆಂದರಲ್ಲಿ ಎಸೆಯದಂತೆ ಜಾಗೃತಿ ಮೂಡಿಸಲಾಗಿದೆ. ಇದಕ್ಕಾಗಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದ್ದು, ಅಲ್ಲಿಯೇ ಹಾಕುವಂತೆ ಸೂಚನೆ ನೀಡಲಾಗಿದೆ.

ವಸತಿ ವ್ಯವಸ್ಥೆ: ಹನುಮಮಾಲಾಧಾರಿಗಳು ಅಂಜನಾದ್ರಿಗೆ ಆಗಮಿಸಿದಾಗ ಅವರಿಗೆ ತಂಗಲು ವ್ಯವಸ್ಥೆ ಮಾಡಲಾಗಿದೆ. ಎಂಟು ಸ್ಥಳಗಳಲ್ಲಿ ವಾಸ್ತವ್ಯಕ್ಕೆ ಬೇಕಾಗಿರುವ ವ್ಯವಸ್ಥೆ ಮಾಡಲಾಗಿದೆ.

18 ವರ್ಷಗಳ ಇತಿಹಾಸ

ಹನುಮಮಾಲೆ ಧರಿಸುವುದಕ್ಕೆ ಪ್ರಾರಂಭವಾಗಿ ಬರೋಬ್ಬರಿ 18 ವರ್ಷವಾಗಿದೆ. ಗಂಗಾವತಿಯ ಸ್ನೇಹಿತರು 2007ರಲ್ಲಿ ಪ್ರಾರಂಭಿಸಿದ ಹನುಮಮಾಲೆ ಕಾರ್ಯಕ್ರಮ ದೇಶದಾದ್ಯಂತ ಅಂಜನಾದ್ರಿಯತ್ತ ಭಕ್ತರನ್ನು ಸೆಳೆಯುತ್ತಿದೆ. ಕೇವಲ ಐವರಿಂದ ಪ್ರಾರಂಭವಾಗಿ ಈಗ 1-2 ಲಕ್ಷ ಭಕ್ತರು ಹನುಮಮಾಲೆ ಧರಿಸುವಂತಾಗಿದೆ.

ಅಂಜನಾದ್ರಿಯಲ್ಲಿ ಹನುಮ ಮಾಲಾ ವಿಸರ್ಜನಾ ಕಾರ್ಯಕ್ರಮಕ್ಕೆ ಸಕಲ ವ್ಯವಸ್ಥೆ ಮಾಡಲಾಗಿದೆ. ಅಭಿವೃದ್ಧಿಯ ಹಣ ಬಳಕೆಗೆ ಹಂಪಿ ಅಭಿವೃದ್ಧಿ ಪ್ರಾಧಿಕಾರದ ಅನುಮತಿ ಪಡೆಯುವುದೇ ದೊಡ್ಡ ಸವಾಲು ಆಗಿದೆ. ಹೀಗಾಗಿ, ನಿಯಮಾನುಸಾರ ಕ್ರಮ ವಹಿಸಲಾಗುವುದು ಎಂದು ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ ಹೇಳಿದ್ದಾರೆ.

ಅಂಜನಾದ್ರಿಗೆ ಹನುಮ ಮಾಲಾ ವಿಸರ್ಜನಾ ಕಾರ್ಯಕ್ರಮಕ್ಕೆ ನಿರೀಕ್ಷೆ ಮೀರಿ ಭಕ್ತರು ಆಗಮಿಸುತ್ತಿರುವುದರಿಂದ ಜಿಲ್ಲಾಡಳಿತದಿಂದ ಅಗತ್ಯ ಕ್ರಮ ವಹಿಸಲಾಗಿದೆ. ಬರುವ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಜಿಲ್ಲಾಡಳಿತ ಮುತುವರ್ಜಿ ವಹಿಸಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು