ಕಂಪ್ಲಿ: ಸ್ವಚ್ಛತಾ ಮತ್ತು ಪರಿಸರ ಸಂರಕ್ಷಣೆಯ ಮಹತ್ವವನ್ನು ಸಾರ್ವಜನಿಕರಲ್ಲಿ ಜಾಗೃತಿ ಪಡಿಸುವ ಉದ್ದೇಶದಿಂದ ತುಂಗಭದ್ರಾ ನದಿಯನ್ನು ನಿರ್ಮಲಗೊಳಿಸುವ ನಿರ್ಮಲ ತುಂಗಭದ್ರಾ ಅಭಿಯಾನ ಮತ್ತೊಮ್ಮೆ ಚುರುಕುಗೊಳಿಸಬೇಕು ಎಂದು ಶಾಸಕ ಜೆ.ಎನ್.ಗಣೇಶ ತಿಳಿಸಿದರು.ಪಟ್ಟಣದ ಶಾಸಕರ ಕಚೇರಿಯಲ್ಲಿ ಅಭಿಯಾನಕ್ಕೆ ಸಂಬಂಧಿಸಿದ ಪಾದಯಾತ್ರೆಯ ಭಿತ್ತಿಪತ್ರಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ನಿರ್ಮಲ ತುಂಗಭದ್ರಾ ಅಭಿಯಾನದ ಸಂಚಾಲಕರಾದ ಗಂಗಾವತಿಯ ಡಾ. ಶಿವಕುಮಾರ್ ಮಾಲಿಪಾಟೀಲ ಮಾತನಾಡಿ, ನದಿ ಶುದ್ಧತೆಗೆ ಸಂಬಂಧಿಸಿದ ದೀರ್ಘಕಾಲಿಕ ಕ್ರಮಗಳಿಗೆ ಸಾರ್ವಜನಿಕ ಬೆಂಬಲ ಅತ್ಯವಶ್ಯಕವೆಂದು ತಿಳಿಸಿದರು.
2025ರ ಡಿಸೆಂಬರ್ 27ರಿಂದ 2026ರ ಜನವರಿ 4ರವರೆಗೆ ಕಿಷ್ಕಿಂದೆಯಿಂದ ಮಂತ್ರಾಲಯದವರೆಗೆ ಮೂರನೇ ಹಂತದ ‘ಜಲ ಜಾಗೃತಿ- ಜನ ಜಾಗೃತಿ’ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.ಡಿಸೆಂಬರ್ 27ರ ಬೆಳಿಗ್ಗೆ 10 ಗಂಟೆಗೆ ಪಾದಯಾತ್ರೆ ಕಂಪ್ಲಿಗೆ ತಲುಪಲಿದೆ. ಸ್ಥಳೀಯರು ಈ ಯಾತ್ರೆಗೆ ಕೈಜೋಡಿಸಬೇಕು, ಪಾದಯಾತ್ರೆಯಲ್ಲಿ ಪಾಲ್ಗೊಳ್ಳಬೇಕು ಮತ್ತು ತುಂಗಭದ್ರಾ ಶುದ್ಧೀಕರಣದ ಧ್ವನಿಯನ್ನು ಹೆಚ್ಚು ಬಲಪಡಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಕ.ಮ. ಹೇಮಯ್ಯಸ್ವಾಮಿ, ಮಾಧವರೆಡ್ಡಿ, ಡಾ. ರಾಮಾಂಜನೆಯಲು, ಎ.ಸಿ. ದಾನಪ್ಪ, ಜಿ. ಪ್ರಕಾಶ ವಕೀಲರು, ಕೆ. ಷಣ್ಮುಖಪ್ಪ ಹಾಗೂ ಅಭಿಯಾನ ಸಂಚಾಲಕರಾದ ಬಾಲಕೃಷ್ಣ ನಾಯ್ಡು, ಟಿ.ಎನ್. ಮಾದವನ್ ಇದ್ದರು.