ಶಿಗ್ಗಾಂವಿ: ಪಟ್ಟಣದ ಆಂಜನೇಯ ದೇವಸ್ಥಾನದಲ್ಲಿ ನಡೆದ ಘಟನೆ ವಿಷಾದನೀಯವಾಗಿದ್ದು, ಘಟನೆಗೆ ಯಾವುದೇ ರೀತಿಯ ಪ್ರಚೋದನೆ ಅಥವಾ ಪೂರ್ವನಿಯೋಜಿತ ಉದ್ದೇಶವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಹೇಳಿದರು.
ಘಟನೆಗೆ ಸಂಬಂಧಿಸಿದ ವ್ಯಕ್ತಿಯ ಮಾನಸಿಕ ಸ್ಥಿತಿಯ ಕುರಿತು ಮಾತನಾಡಿದ ಸಚಿವರು, ಈ ಹಿಂದೆ ಹಾವೇರಿಯಲ್ಲಿಯೂ ಇದೇ ರೀತಿಯ ಘಟನೆ ನಡೆದಿತ್ತು. ಮಾನಸಿಕ ಅಸ್ವಸ್ಥನೊಬ್ಬ ಮಹಾತ್ಮ ಗಾಂಧೀಜಿ ಅವರ ಪುತ್ಥಳಿಗೆ ಹಾನಿ ಮಾಡಿದ್ದ. ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಬಳಿಕ ನ್ಯಾಯಾಲಯದ ಸೂಚನೆಯಂತೆ ಆತನನ್ನು ಮಾನಸಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಹೇಳಿದರು.
ಈ ಘಟನೆಯನ್ನು ನಾವು ಯಾವುದೇ ಕಾರಣಕ್ಕೂ ಸಮರ್ಥಿಸುವುದಿಲ್ಲ. ಆದರೆ, ಇದನ್ನು ಅನಗತ್ಯವಾಗಿ ದೊಡ್ಡ ವಿಷಯವನ್ನಾಗಿ ಮಾಡಿ ಸಮಾಜದಲ್ಲಿ ಉದ್ವಿಗ್ನತೆ ಉಂಟುಮಾಡಬಾರದು. ನಾವೆಲ್ಲರೂ ಸಮಾನತೆಯಿಂದ ಹಾಗೂ ಸಹೋದರತ್ವದಿಂದ ಮನುಷ್ಯರಾಗಿ ಬದುಕಬೇಕು ಎಂದು ಸಚಿವರು ಮನವಿ ಮಾಡಿದರು.ಕಾನೂನು ಸುವ್ಯವಸ್ಥೆ ಬಗ್ಗೆ ಆರೋಪಕ್ಕೆ ಪ್ರತಿಕ್ರಿಯೆ: ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ ಎಂಬ ವಿರೋಧ ಪಕ್ಷಗಳ ಆರೋಪದ ಕುರಿತು ಪ್ರತಿಕ್ರಿಯಿಸಿದ ಸಚಿವ ಲಮಾಣಿ, ಒಬ್ಬ ಮಾನಸಿಕ ಅಸ್ವಸ್ಥ ವ್ಯಕ್ತಿ ಈ ರೀತಿಯ ಕೃತ್ಯ ಎಸಗಿದರೆ ಜಿಲ್ಲಾಡಳಿತ ಏನು ಮಾಡಲು ಸಾಧ್ಯ? ಸಚಿವರು ಪ್ರತಿಯೊಂದು ವ್ಯಕ್ತಿಯ ವರ್ತನೆಯನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಆದರೆ ಘಟನೆ ನಡೆದ ಕೂಡಲೇ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಬರಗಾಲ ಘೋಷಣೆ ವಿಚಾರ: ಬರಗಾಲ ಪೀಡಿತ ಪ್ರದೇಶಗಳ ಘೋಷಣೆಯಲ್ಲಿ ಹಾವೇರಿ ಜಿಲ್ಲೆಯನ್ನು ಕೈಬಿಟ್ಟಿರುವುದರಿಂದ ರೈತರಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ವಿಷಂಯದ ಕುರಿತು ವಿಧಾನಸಭಾ ಅಧಿವೇಶನದಲ್ಲಿ ಚರ್ಚಿಸಲು ಬಿಜೆಪಿಯವರು ಅವಕಾಶ ನೀಡಲಿಲ್ಲ ಎಂದು ಆರೋಪಿಸಿದರು.