ಕನ್ನಡಪ್ರಭವಾರ್ತೆ ಗುಳೇದಗುಡ್ಡ
ಪಟ್ಟಣದ ಮಾರವಾಡಿ ಬಗೀಚಿನಲ್ಲಿ ಇಲ್ಯಾಳ ಮ್ಯಾಳದವರು ಪ್ರತಿವರ್ಷ ಯುಗಾದಿ ಹಬ್ಬದ ನಿಮಿತ್ತ ಫಲ ಭವಿಷ್ಯ ನುಡಿಯುತ್ತಾರೆ. ಈ ಬಾರಿ ನುಡಿದ ಭವಿಷ್ಯ, ಪ್ರಸಕ್ತವಾಗಿ ನಡೆಯುತ್ತಿರುವ ಲೋಕಸಭಾ ಚುನಾವಣೆಯ ಮೇಲೆ ಕೇಂದ್ರೀಕೃತವಾಗಿದೆ.ಈ ವರ್ಷ ಹೆಸರು, ಬಿಳಿಜೋಳ, ಕಡಲೆ, ಗೋದಿ ಬಂಪರ್ ಬೆಳೆ ಇದೆ. ತೊಗರಿ, ಸಜ್ಜೆಗೆ ಕೀಟ ಬಾಧೆ ಕಾಡಲಿದೆ. ಅಲ್ಲದೇ ಎಳ್ಳು ಅತ್ಯುತ್ತಮವಾಗಿ ಬೆಳೆಯಲಿದೆ. ಗುಳೇದಗುಡ್ಡ ಖಣ, ಇಳಕಲ್ ಸೀರೆಯ ವ್ಯಾಪಾರ ವಹಿವಾಟು ಕುಂಠಿತ ಕಾಣಲಿದೆ. ಬಟ್ಟೆ ವ್ಯಾಪಾರದಲ್ಲಿ ಈ ಬಾರಿ ಗಣನೀಯ ಏರಿಕೆಯಾಗಲಿದೆ. ಸಿಮೆಂಟ್, ಕಬ್ಬಿಣ, ಉಸುಕು ವ್ಯಾಪಾರ ಜೋರಾಗಲಿದೆ ಎಂದು ಹೇಳಿದರು.
ಆರಿದ್ರಾ, ಪುನರ್ವಸು, ಮಾಘ, ಹುಬ್ಬಾ, ಚಿತ್ತಿ ಮಳೆಗಳು ಸಂಪೂರ್ಣವಾಗಿ ಆಗಲಿವೆ. ರಾಜ್ಯ ಮತ್ತು ದೇಶದಲ್ಲಿ ಈ ಬಾರಿ ಮಳೆರಾಯ ಕಣ್ತೆರೆಯಲಿದ್ದಾನೆ. ಜನರಿಗೆ ನೀರಿನ ಬವಣೆ ತಪ್ಪಲಿದೆ. ಹಲಸಂದಿ, ನವಣೆ ಸೇರಿದಂತೆ ಇನ್ನಿತರ ಬೆಳೆಗಳು ಉತ್ತಮವಾಗಿ ಬರಲಿವೆ ಎಂದು ಭವಿಷ್ಯ ನುಡಿಯಲಾಯಿತು.ಈ ವರ್ಷದ ಯುಗಾದಿ ಫಲ ಭವಿಷ್ಯ ಕೇಳಲು ಸೇರಿದ ಅದೆಷ್ಟೋ ಜನ, ರಾಜನೇ ಮತ್ತೇ ರಾಜನಾಗುತ್ತಾನೆ ಎಂಬ ಭವಿಷ್ಯವಾಣಿ ಕೇಳಿ ಈ ಬಾರಿ ಮತ್ತೆ ಮೋದಿ ಅವರು ಅಧಿಕಾರಕ್ಕೆ ಬರುತ್ತಾರೆನೋ ಎಂಬ ಮಾತುಗಳನ್ನಾಡಿದರು. ಈ ಸಂದರ್ಭದಲ್ಲಿ ಮ್ಯಾಳದ ಮಲ್ಲಿಕಾರ್ಜುನ ಗೊಬ್ಬಿ, ನಾಗಪ್ಪ ಚಿಂದಿ, ಪ್ರಸಾಂತ ರಂಜಣಗಿ, ಶಂಕರ ರಂಜಣಗಿ, ಮಲ್ಲೆಶಪ್ಪ ಶೀಪ್ರಿ, ಶಿವು ಹುಣಸಿಮರದ, ಈರಣ್ಣ ರಂಜನಗಿ ಸೇರಿದಂತೆ ಸಾರ್ವಜನಿಕರು ಸೇರಿದ್ದರು.
ಸುಮಾರು 20 ಅಡಿ ಚೌರಸ್ ಸ್ಥಳದ ಒಳಗಡೆ ಒಂದು ಕಡೆ ರೈತ ಹೊಲ ಉಳುಮೆ ಮಾಡುವ ಮಣ್ಣಿನ ಮೂರ್ತಿ, ಖಣದ ಬಟ್ಟೆಗಳನ್ನು, ಇತರೆ ಬಣ್ಣ ಬಣ್ಣದ ಬಟ್ಟೆಗಳನ್ನು ಅಲ್ಲಲ್ಲಿ ಹಾಕಲಾಗಿರುತ್ತದೆ. ಮಧ್ಯದಲ್ಲಿ ಮಣ್ಣಿನಿಂದ ಗದ್ದುಗೆ ಮಾಡಿ ಅದರಲ್ಲಿ ದ್ವಿದಳ ಧಾನ್ಯಗಳನ್ನು ಹಿಂದಿನ ದಿನವೇ ರಾತ್ರಿ ಮುಚ್ಚಿಟ್ಟು ಅದರ ಹತ್ತಿರ ಎಕ್ಕಿ ಎಲೆಗಳನ್ನು ಇಟ್ಟಿರುತ್ತಾರೆ. ಮರುದಿನ ಬೆಳಿಗ್ಗೆ ಇವುಗಳ ಲಕ್ಷಣ ನೋಡಿ ಭವಿಷ್ಯ ಹೇಳುವುದು ಒಂದು ವಾಡಿಕೆ. ಬೆಳಗಿನಜಾವ ಈ ಸ್ಥಳದಲ್ಲಿ ರತ್ನಪಕ್ಷಿ ಕಂಡ ನಂತರವೇ ಭವಿಷ್ಯ ಹೇಳುವುದು ಒಂದು ವಿಶೇಷ. ಕಳೆದ ವರ್ಷ ಮಳೆ-ಬೆಳೆ ಕುರಿತು ನುಡಿದ ಭವಿಷ್ಯ ಸತ್ಯವಾಗಿತ್ತು.