ಪರಶಿವಮೂರ್ತಿ ದೋಟಿಹಾಳ ಕುಷ್ಟಗಿ
ಮುಂಗಾರು ಹಂಗಾಮಿನಲ್ಲಿ ಬೆಳೆಯಲಾದ ತೊಗರಿ ಬೆಳೆ ಸೇರಿದಂತೆ ವಿವಿಧ ಬೆಳೆ ಕಟಾವು ಮಾಡಲು ರೈತರು ಕೂಲಿ ಕಾರ್ಮಿಕರ ಕೊರತೆ ಹಿನ್ನೆಲೆ ಕಟಾವು ಯಂತ್ರಗಳ ಮೊರೆ ಹೋಗಿದ್ದಾರೆ.ತಾಲೂಕಿನ ದೋಟಿಹಾಳ ಸೇರಿದಂತೆ ಅನೇಕ ಗ್ರಾಮದ ಹೊಲದಲ್ಲಿ ದುಡಿಯುವ ಕೂಲಿ ಕಾರ್ಮಿಕರ ಸಂಖ್ಯೆಯು ಕಡಿಮೆಯಾಗುತ್ತಾ ಬಂದಿದ್ದು, ಸಮಸ್ಯೆ ನಿವಾರಿಸಲು ರೈತಾಪಿ ವರ್ಗವು ಕಟಾವು ಯಂತ್ರಗಳ ಮೂಲಕ ಬೆಳೆದ ಬೆಳೆ ಕಟಾವು ಮಾಡಿಸಲು ಮುಂದಾಗಿದ್ದಾರೆ.
ವರ್ಷದಿಂದ ವರ್ಷಕ್ಕೆ ತಾಲೂಕಿನಲ್ಲಿ ಕೂಲಿ ಕಾರ್ಮಿಕರ ಕೊರತೆ ಹೆಚ್ಚಾಗುತ್ತಿದೆ, ರೈತರು ತೊಗರಿ, ಮೆಕ್ಕೆಜೋಳ ಸೇರಿದಂತೆ ಅನೇಕ ಬೆಳೆ ಬೆಳೆದಿದ್ದು ಕಟಾವು ಮಾಡಲು ಹೆಚ್ಚಿನ ಕೂಲಿ ನೀಡಿದರೂ ಕೂಲಿ ಕಾರ್ಮಿಕರು ಸಿಗುವುದಿಲ್ಲ ಎಂಬುದು ರೈತರ ಅಳಲು.ಯಂತ್ರಗಳು:ಕೂಲಿ ಕಾರ್ಮಿಕರ ಕೊರತೆಯಿಂದ ಕೆಲ ರೈತರು ಪಂಜಾಬ್,ಗೋಕಾಕ, ಸೊಲ್ಲಾಪುರ ಸೇರಿದಂತೆ ವಿವಿಧ ಭಾಗಗಳಿಂದ ಬಂದಿರುವ ಬೆಳೆ ಕಟಾವು ಮಾಡುವ ಯಂತ್ರ ಬಳಸುತ್ತಿದ್ದಾರೆ. ಹತ್ತಾರು ಕೂಲಿ ಕಾರ್ಮಿಕರು ಎರಡು ದಿನ ಮಾಡುವ ಕೆಲಸವನ್ನು ಈ ಯಂತ್ರ ಕೆಲ ಗಂಟೆಗಳಲ್ಲಿ ರಾಶಿ ಮಾಡಿ ಹಾಕಲಾಗುತ್ತಿದ್ದು ಬಹುತೇಕ ರೈತರು ಯಂತ್ರಗಳ ಮೂಲಕವೇ ಬೆಳೆ ಕಟಾವ್ ಮಾಡಿಸುತ್ತಿದ್ದಾರೆ.
ಕೊರತೆ ನೀಗಿಸಿದ ಯಂತ್ರಗಳು:ಬೆಳೆ ಕಟಾವು ಯಂತ್ರಗಳು ತಾಲೂಕಿನಲ್ಲಿ ಆಗಮಿಸಿರುವ ಹಿನ್ನೆಲೆಯಲ್ಲಿ ಕೃಷಿ ಕಾರ್ಮಿಕರ ಕೊರತೆ ನೀಗಿಸಿ ರೈತರಿಗೆ ರಾಶಿ ಮಾಡಿಕೊಟ್ಟು ಕಾರ್ಮಿಕರ ಕೊರತೆ ನೀಗಿಸಿದೆ ಎನ್ನುತ್ತಾರೆ ರೈತರು.ಕಡಿಮೆ ಖರ್ಚು:ರೈತರು ತಾವು ಬೆಳೆದ ಬೆಳೆಗಳ ಕಟಾವಿನ ಕಾರ್ಯ ಪೂರೈಸಿ ಬೆಳೆ ಮನೆಗೊಯ್ಯುವಲ್ಲಿ ರೈತ ಸಮೂಹ ಕೂಲಿ ಕಾರ್ಮಿಕರಿಗೆ ಬಹಳಷ್ಟು ಹಣ ಕೊಡುತ್ತಿದ್ದು, ಈಗ ಕಟಾವು ಯಂತ್ರಗಳು ಕೆಲವು ಗಂಟೆಯಲ್ಲಿ ಎಕರೆಗೆ ಕಡಿಮೆ ಖರ್ಚಿನಲ್ಲಿ ಪೂರ್ತಿ ಕೆಲಸ ಮುಗಿಸಿ ಶ್ರಮ, ಖರ್ಚನ್ನು ಉಳಿಸಿಕೊಡುತ್ತಿದೆ.
ಈ ಹಿಂದೆ ಬೆಳೆ ಕಟಾವು ಹಂತಕ್ಕೆ ಬಂದರೆ ಸಾಕು ವಾರಾನುಗಟ್ಟಲೆ ಕೂಲಿಕಾರರನ್ನು ಹುಡುಕುವಂತಾಗಿತ್ತು. ಆದರೆ ಈಗ ಕಟಾವು ಯಂತ್ರಗಳು ಬಂದ ನಂತರ ಕೇವಲ ಒಂದು ಫೋನ್ ಮಾಡಿದರೆ ಸಾಕು ಹೊಲದಲ್ಲಿಯೆ ಬಂದು ಬೆಳೆ ಕಟಾವು ಮಾಡುವುದರ ಜತೆಗೆ ರಾಶಿ ಮಾಡಿ ಹೋಗುತ್ತವೆ. ಇದರಿಂದ ಸಮಯ ಹಾಗೂ ಹಣ ಉಳಿತಾಯ ಆಗುತ್ತದೆ.ಗ್ರಾಮದ ಸುತ್ತಮುತ್ತಲಿನ ರೈತರಿಗೆ ಈ ಕಟಾವು ಯಂತ್ರದಿಂದ ತೊಗರಿ ಬೆಳೆ ರಾಶಿ ಬೇಗನೆ ಆಗುವುದರಿಂದ ಯಾವುದೇ ತರಹದ ಕಾರ್ಮಿಕರಿಗೆ ಕಾಯುವ ಚಿಂತೆಯಿಲ್ಲ. ಬೇಗನೆ ಮಾರಾಟ ಮಾಡಿ ಬರಬಹುದು. ಒಂದು ಎಕರೆಗೆ ₹1300 ಕೊಟ್ಟರೆ ಎಲ್ಲ ಕೆಲಸ ಮುಗಿಯುತ್ತದೆ ಎಂದು ಕಡೇಕೊಪ್ಪ ರೈತ ನಿಂಗಪ್ಪ ಜಿಗೇರಿ ತಿಳಿಸಿದ್ದಾರೆ.