ಕನ್ನಡಪ್ರಭ ವಾರ್ತೆ ಮೈಸೂರು
ಒಂದು ವಾರದ ತರಬೇತಿಗೆಂದು ಬಾಹ್ಯಾಕಾಶ ಕೇಂದ್ರಕ್ಕೆ ತೆರಳಿ, ತಾಂತ್ರಿಕ ಕಾರಣಗಳಿಂದ ಒಂಭತ್ತು ತಿಂಗಳು ಧೈರ್ಯದಿಂದ ಇದ್ದು, ಸುರಕ್ಷಿತವಾಗಿ ಭೂಮಿಗೆ ಮರಳಿರುವ ಸುನೀತಾ ವಿಲಿಯಮ್ಸ್ ಎಲ್ಲಾ ಮಹಿಳೆಯರಿಗೆ ಸ್ಫೂರ್ತಿಯಾಗಬೇಕು ಎಂದು ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಎಸ್. ಜಾಹ್ನವಿ ಹೇಳಿದರು.ಎಸ್‌ಜೆಸಿಇ ಆವರಣದಲ್ಲಿರುವ ಜೆಎಸ್ಎಸ್ ಪಾಲಿಟೆಕ್ನಿಕ್‌ನಲ್ಲಿ ಶುಕ್ರವಾರ ವಾರ್ಷಿಕೋತ್ಸವ ಹಾಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಸುನೀತಾ ಅವರು ಎಲ್ಲಾ ಅಡತಡೆಗಳನ್ನು ಎದುರಿಸಿ, ಸಂಶೋಧನಾ ಕಾರ್ಯ ಕೈಗೊಂಡು ನಗುಮುಖದಿಂದಲೇ ಭೂಮಿಗೆ ಮರಳಿದ್ದಾರೆ ಎಂದು ಹರ್ಷಿಸಿದರು.
ಮುಖ್ಯ ಅತಿಥಿಯಾಗಿದ್ದ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಉಪ ನಿರ್ದೇಶಕಿ ಮೇಘಲಾ ಮಾತನಾಡಿ, ಓದಿ ಸರ್ಕಾರಿ ಅಥವಾ ಖಾಸಗಿ ನೌಕರಿ ಪಡೆಯುವುದಕ್ಕಿಂತ ಸ್ವಂತ ಉದ್ಯೋಗ ಆರಂಭಿಸಿ, ಹತ್ತಾರು ಜನರಿಗೆ ಕೆಲಸ ಕೊಡುವಂತೆ ಆಗಬೇಕು ಎಂದರು.ನವ ಉದ್ಯಮಿ ಆರಂಭಿಸಲು ಇಲಾಖೆಯಿಂದ ಹಲವಾರು ಯೋಜನೆಗಳಿದ್ದು, ಡಿಪ್ಲೋಮಾ ವ್ಯಾಸಂಗ ಪೂರೈಸಿರುವವರು ಇದರ ಪ್ರಯೋಜನ ಪಡೆಯಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ಮಹಿಳೆಯರು ಇವತ್ತು ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ಸುನೀತಾ ವಿಲಿಯಮ್ಸ್ ಅವರ ಜೊತೆಗೆ ಅಂಟ್ಲಾಟಿಕ ಕಡಲನ್ನು ಏಕಾಂಗಿಯಾಗಿ ದಾಟಿಜ ಅನನ್ಯ ಪ್ರಸಾದ್, ಖೋ ಖೋ ವಿಶ್ವಕಪ್ ವಿಜೇತ ತಂಡದ ಆಟಗಾರ್ತಿ ಕುರುಬೂರಿನ ಬಿ. ಚೈತ್ರಾ, ಮೌಂಟ್ ಎವರೆಸ್ಟ್ ಶಿಖರವೇರಿದ ಜೆಎಸ್ಎಸ್ ದಂತ ಕಾಲೇಜಿನ ಪ್ರಾಧ್ಯಾಪಕಿ ಡಾ.ಉಷಾ ಹೆಗ್ಡೆ, ಸರಿಗಮಪ ವಿಜೇತೆಯಾದ ಜೆಎಸ್ಎಸ್ ವಿಶೇಷಚೇತನರ ಪಾಲಿಟೆಕ್ನಿಕ್‌ನ ಅಮೂಲ್ಯಾ ಮೊದಲಾದವರು ಕೂಡ ಸ್ಫೂರ್ತಿಯಾಗಬೇಕು ಎಂದರು.ಹುಣಸೂರು ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಸಹಾಯಕ ನಿರ್ದೇಶಕಿ ಎಚ್.ಕೆ. ರೇಣುಕಾ ಮುಖ್ಯ ಅತಿಥಿಯಾಗಿದ್ದರು. ಹಾಸ್ಯ ಕಲಾವಿದ ಮೈಸೂರು ಆನಂದ್ ಅವರು ಸಭಿಕರನ್ನು ತಮ್ಮ ಹಾಸ್ಯ ಪ್ರಸಂಗಗಳ ಮೂಲಕ ನಕ್ಕು ನಲಿಸಿದರು.
ಜೆಎಸ್ಎಸ್ ಪಾಲಿಟೆಕ್ನಿಕ್ ಪ್ರಾಂಶುಪಾಲ ಕೆ.ಎಸ್. ಭಕ್ತವತ್ಸಲ ವಾರ್ಷಿಕ ವರದಿ ಓದಿದರು. ಉಪನ್ಯಾಸಕಿ ನಾಗಕನ್ಯೆ ಸ್ವಾಗತಿಸಿದರು.ಸಿಎಚ್. ನಿಧಿ ಮಹಿಳಾ ದಿನದ ಮಹತ್ವದ ಬಗ್ಗೆ ಮಾತನಾಡಿದರು. ಆರ್, ತೇಜಸ್, ರೇವಂತ್ ಕುಮಾರ್, ನಿಧಿ ನಿರೂಪಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.