ಹನೂರು ಪಟ್ಟಣದ ಆರ್.ಎಂ.ಸಿ ಆವರಣದಲ್ಲಿ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರ್ ಪ್ರಕಾಶ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಕನ್ನಡಪ್ರಭ ವಾರ್ತೆ ಹನೂರುತಾಲೂಕಿನ ಜಲತ್ವ ಸಮಸ್ಯೆಗಳು ಸೇರಿದಂತೆ ಮಲೆಮಾದೇಶ್ವರ ಬೆಟ್ಟದ ತಪ್ಪಲಿನಲ್ಲಿ ಬರುವ ಕುಗ್ರಾಮಗಳ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಸಂಪುಟ ಸಭೆಯಲ್ಲಿ ಪ್ಯಾಕೇಜ್ ಘೋಷಿಸಬೇಕು. ಇಲ್ಲದಿದ್ದರೆ ಬೆಂಗಳೂರಿಗೆ ಸಿಎಂ ಹಾಗೂ ಸಚಿವರನ್ನು ಹೋಗಲು ಬಿಡುವುದಿಲ್ಲ ಎಂದು ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಹೊನ್ನೂರ್ ಪ್ರಕಾಶ್ ಎಚ್ಚರಿಸಿದರು.
ಹನೂರು ಪಟ್ಟಣದ ಆರ್.ಎಂ.ಸಿ ಆವರಣದಲ್ಲಿ ಆಯೋಜಿಸಲಾಗಿದ್ದ ರೈತ ಸಂಘದ ಪದಾಧಿಕಾರಿಗಳ ಸಭೆ ಹಾಗೂ ರೈತ ಮುಖಂಡರ ಸಂಘಟನೆಗೆ ಸೇರ್ಪಡೆಗೊಂಡ ನಂತರ ಸಭೆಯಲ್ಲಿ ಮಾತನಾಡಿದರು. ಮಲೆಮಹದೇಶ್ವರ ಬೆಟ್ಟದಲ್ಲಿ ಏ.24ರಂದು ಸಚಿವ ಸಂಪುಟ ಸಭೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ನಡೆಯಲಿರುವುದರಿಂದ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಹಾಗೂ ತಾಲೂಕಿನ ಜಲತ್ವ ಸಮಸ್ಯೆಗಳಿಗೆ ಸಂಪೂರ್ಣ ಅಭಿವೃದ್ಧಿಪಡಿಸಲು ಮಲೆಮಾದೇಶ್ವರ ಬೆಟ್ಟದ ತಪ್ಪಲಿನಲ್ಲಿ ಬರುವ ಕುಗ್ರಾಮಗಳ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಪ್ಯಾಕೇಜ್ ಘೋಷಣೆ ಮಾಡಬೇಕು ಎಂದರು.
ನೀರಾವರಿ ಯೋಜನೆಗೆ ಜನಪ್ರತಿನಿಧಿಗಳು ಕ್ರಮ ಕೈಗೊಳ್ಳಿ:
ತಾಲೂಕಿನಲ್ಲಿ ಅನೇಕ ಜಲಾಶಯಗಳು ಇವೆ. ನದಿಯಿಂದ ನೀರು ಬಿಡುವ ಮೂಲಕ ಅಭಿವೃದ್ಧಿಗೆ ಒತ್ತು ನೀಡಬೇಕು. ಮಳೆಗಾಲದಲ್ಲಿ ಕಾವೇರಿ ನದಿ ತುಂಬಿ ತಮಿಳುನಾಡಿನ ಮೂಲಕ ಸಮುದ್ರದ ಪಾಲಾಗುತ್ತಿರುವ ನೀರನ್ನು ನಮ್ಮ ಜಿಲ್ಲೆಯ ತಾಲೂಕಿನ ರೈತರಿಗೆ ನೀರಾವರಿ ಯೋಜನೆಗಳಿಗೆ ಸದ್ಬಳಕೆ ಮಾಡಿಕೊಳ್ಳಲು ಜನಪ್ರತಿನಿಧಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಸಂಘಟಿತ ಹೋರಾಟಕ್ಕೆ ಒತ್ತು ನೀಡಿ:
ಪಟ್ಟಣದಲ್ಲಿ ಮೊದಲ ಬಾರಿಗೆ ರಾಜ್ಯ ರೈತ ಸಂಘ ಗ್ರಾಮ ಘಟಕ ತೆರೆಯುತ್ತಿರುವುದು ಶ್ಲಾಘನೀಯ. ಯಾವುದೇ ಮೂಲಾಜಿಗೆ ಒಳಗಾಗದೆ ರೈತ ಸಂಘಟನೆಯಲ್ಲಿ ಇರುವ ಪದಾಧಿಕಾರಿಗಳು ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಕಾರ್ಯಗಳನ್ನು ಮಾಡಲು ಶ್ರಮವಹಿಸಬೇಕು. ಜೊತೆಗೆ ಸರ್ಕಾರಿ ಕಚೇರಿಗಳಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವ ಅಧಿಕಾರಿಗಳ ಕಣ್ಣು ತೆರೆಸಲು ಸಂಘಟಿತ ಹೋರಾಟದಿಂದ ಸಾಧ್ಯ ಎಂದರು.
ತಹಸೀಲ್ದಾರ್‌ಗೆ ಮನವಿ:
ತಾಲೂಕು ದಂಡಾಧಿಕಾರಿಗಳ ಕಚೇರಿಗೆ ತೆರಳಿದ ರೈತ ಸಂಘಟನೆ, ತಾಲೂಕಿನ ಚೆಸ್ಕಾಂ ಇಲಾಖೆಯಲ್ಲಿ ಗುತ್ತಿಗೆದಾರರು ರೈತರಿಂದ ಕೆಲಸ ಕಾರ್ಯಗಳಿಗೆ ಹಣ ಸುಲಿಗೆ ಮಾಡುತ್ತಿದ್ದಾರೆ. ಇದರ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ, ಚೆಸ್ಕಾಂ ಕಚೇರಿಯಲ್ಲಿ ಕೆಲಸ ಕಾರ್ಯಗಳಿಗೆ ನಾಮಫಲಕ ಅಳವಡಿಸುವಂತೆ ತಿಳಿಸಿದ್ದರೂ ಅಧಿಕಾರಿಗಳು ರೈತರಿಂದ ಸುಲಿಗೆ ಮಾಡಲು ಗುತ್ತಿಗೆದಾರರ ಮುಖಾಂತರ ಹಣ ಪಡೆಯುತ್ತಿದ್ದಾರೆ ಎಂದರು. ಜೊತೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಕಾಡುಪ್ರಾಣಿಗಳನ್ನು ರೈತರ ಜಮೀನಿಗೆ ಬರುವುದನ್ನು ತಡೆಗಟ್ಟಲು ವಿಫಲರಾಗಿದ್ದಾರೆ.
ಪರಿಹಾರ ನೀಡಲು ವಿಳಂಬ ಧೋರಣೆ ಅನುಸರಿಸುತ್ತಿರುವ ಅರಣ್ಯ ಅಧಿಕಾರಿಗಳ ಬಗ್ಗೆ ಸಾಕಷ್ಟು ದೂರುಗಳಿದ್ದು ಸೂಕ್ತ ಕ್ರಮ ಕೈಗೊಳ್ಳಲು ಸಚಿವ ಸಂಪುಟ ಸಭೆ ಮುನ್ನ ಪಟ್ಟಣದಲ್ಲಿ ಸಭೆ ಕರೆದು ತಾಲೂಕುವಾರು ಅಧಿಕಾರಿಗಳ ಸಭೆಯಲ್ಲಿ ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಕ್ರಮ ಕೈಗೊಳ್ಳಬೇಕು. ಪಶು ಸಂಗೋಪನೆ ಇಲಾಖೆಯಲ್ಲಿ ರೈತರಿಗೆ ಸಂಪೂರ್ಣ ಮಾಹಿತಿ ಸಿಗದೇ ಮತ್ತು ಜಾನುವಾರು ಸಾವನ್ನಪ್ಪಿದ ವೇಳೆ ಮತ್ತು ಅವರಿಗೆ ನೀಡಬೇಕಾಗಿರುವ ಪರಿಹಾರ ಮತ್ತು ಜಾನುವಾರುಗಳಿಗೆ ಸೂಕ್ತ ಸಕಾಲದಲ್ಲಿ ಚಿಕಿತ್ಸೆ ನೀಡಲು ವಿಳಂಬ ಧೋರಣೆ ಅನುಸರಿಸುತ್ತಿರುವ ಬಗ್ಗೆ ಕ್ರಮ ಕೈಗೊಳ್ಳಲು ಅಧಿಕಾರಿಗಳ ಸಭೆ ಕರೆಯುವಂತೆ ತಹಸೀಲ್ದಾರ್ ಗುರುಪ್ರಸಾದ್ ಅವರಿಗೆ ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರ್ ಪ್ರಕಾಶ್ ಮನವಿ ಸಲ್ಲಿಸಿದರು.
ಕಚೇರಿ ಮುಂಭಾಗ ಜಮಾವಣೆಗೊಂಡಿದ್ದ ರೈತ ಸಂಘಟನೆಯ ಮನವಿ ಸ್ವೀಕರಿಸಿದ ತಾಲೂಕು ದಂಡಾಧಿಕಾರಿ ಗುರುಪ್ರಸಾದ್, ವಿವಿಧ ಇಲಾಖೆ ಅಧಿಕಾರಿಗಳ ಸಭೆಯನ್ನು ತುರ್ತಾಗಿ ಕರೆದು ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.ಗ್ರಾಮ ಘಟಕ ನಾಮಫಲಕ ಉದ್ಘಾಟನೆ:
ಹನೂರು ಪಟ್ಟಣದಲ್ಲಿ ಮೊದಲ ಬಾರಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಗ್ರಾಮ ಘಟಕ ನಾಮಪಲಕ ಉದ್ಘಾಟನೆ ಮಾಡಿ ನಂತರ ರೈತರಿಗೆ ಸಂಘದ ಬಗ್ಗೆ ಮತ್ತು ನಿಯಮಾವಳಿಗಳ ಬಗ್ಗೆ ರೈತರು ತಿಳಿದುಕೊಂಡು ಸಂಘಟಿತ ಹೋರಾಟದಿಂದ ಸಂಘಟನೆ ಮಾಡುವ ಮೂಲಕ ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಪರಿಹಾರ ಕಂಡುಕೊಳ್ಳಬೇಕು ಎಂದು ತಿಳಿಸಿದರು.ಇದೇ ವೇಳೆ ತಾಲೂಕು ಘಟಕದ ಅಧ್ಯಕ್ಷ ಚಂಗಡಿ ಕರಿಯಪ್ಪ, ರೈತ ಮುಖಂಡರಾದ ಪಾಪಣ್ಣ ವೀರಭದ್ರಸ್ವಾಮಿ, ಬಿದರಳ್ಳಿ ಪುಟ್ಟಸ್ವಾಮಿ, ರೈತ ಮಹಿಳೆ ರತ್ನಮ್ಮ ಸೇರಿದಂತೆ ರಾಯರ ದೊಡ್ಡಿ ಗ್ರಾಮ ಘಟಕದ ಪದಾಧಿಕಾರಿಗಳಾದ ದಿನೇಶ್, ಅಮೋಘ, ವೆಂಕಟೇಶ್ ನಾಯ್ಡು, ಸಿದ್ದರಾಜು, ಕೃಷ್ಣ ನಾಯ್ಡು, ಚಿಕ್ ಮಂಚ, ಪ್ರಕಾಶ್, ಗೋಪಾಲ್ ನಾಯ್ಡು, ರವಿ ಹಾಗೂ ಇನ್ನಿತರ ರೈತ ಮುಖಂಡರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.