ಮತ್ತೊಂದು ಎಟಿಎಂ ಗೋಲ್‌ಮಾಲ್‌ ಬಯಲು!

KannadaprabhaNewsNetwork |  
Published : Jan 28, 2026, 02:15 AM IST
ಎಟಿಎಂ | Kannada Prabha

ಸಾರಾಂಶ

ಕಳೆದ ನವೆಂಬರ್‌ನಲ್ಲಿ ಸದ್ದು ಮಾಡಿದ್ದ 7 ಕೋಟಿ ರು. ಎಟಿಎಂ ಹಣ ದರೋಡೆ ಪ್ರಕರಣ ಬೆನ್ನಲ್ಲೇ ಇದೀಗ ರಾಜಧಾನಿ ಬೆಂಗಳೂರಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಎಟಿಎಂಗೆ ತುಂಬಬೇಕಿದ್ದ 1.38 ಕೋಟಿ ಹಣವನ್ನು ಹಂತ ಹಂತವಾಗಿ ಸಿಬ್ಬಂದಿಯೇ ಎಗರಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಈ ಸಂಬಂಧ ಕೋರಮಂಗಲ ಪೊಲೀಸ್‌ ಠಾಣೆಯಲ್ಲಿ ಎರಡು ಎಫ್‌ಐಆರ್ ದಾಖಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕಳೆದ ನವೆಂಬರ್‌ನಲ್ಲಿ ಸದ್ದು ಮಾಡಿದ್ದ 7 ಕೋಟಿ ರು. ಎಟಿಎಂ ಹಣ ದರೋಡೆ ಪ್ರಕರಣ ಬೆನ್ನಲ್ಲೇ ಇದೀಗ ರಾಜಧಾನಿ ಬೆಂಗಳೂರಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಎಟಿಎಂಗೆ ತುಂಬಬೇಕಿದ್ದ 1.38 ಕೋಟಿ ಹಣವನ್ನು ಹಂತ ಹಂತವಾಗಿ ಸಿಬ್ಬಂದಿಯೇ ಎಗರಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಈ ಸಂಬಂಧ ಕೋರಮಂಗಲ ಪೊಲೀಸ್‌ ಠಾಣೆಯಲ್ಲಿ ಎರಡು ಎಫ್‌ಐಆರ್ ದಾಖಲಾಗಿದೆ.

ಹರೀಶ್‌ ಕುಮಾರ್‌, ಪ್ರವೀಣ್‌ ಕುಮಾರ್‌, ವರುಣ್‌, ಧನಶೇಖರ್‌ ಮತ್ತು ರಾಮಕ್ಕ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಸಂಬಂಧ ಹಿಟಾಚಿ ಪೇಮೆಂಟ್‌ ಸರ್ವಿಸ್‌ ಪ್ರೈವೇಟ್ ಕಂಪನಿಯ ಅಧಿಕಾರಿಗಳಾದ ನಾಗಾರ್ಜುನ್‌ ಮತ್ತು ಮಿಥುನ್‌ ಎಂಬುವರು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೆಲ ತಿಂಗಳ ಹಿಂದೆ ಸಿದ್ದಾಪುರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಎಟಿಎಂಗೆ ತುಂಬ ಬೇಕಿದ್ದ ಸಿಎಂಎಸ್‌ ಕಂಪನಿಗೆ ಸೇರಿದ್ದ 7 ಕೋಟಿ ಹಣ ದರೋಡೆ ಪ್ರಕರಣದಲ್ಲೂ ಹಣ ತುಂಬಿಸುವ ಸಂಸ್ಥೆಯ ಸಿಬ್ಬಂದಿ ಕೈವಾಡ ಬೆಳಕಿಗೆ ಬಂದಿತ್ತು. ಇದರ ಬೆನ್ನಲ್ಲೇ ಇದೀಗ ಹಣ ತುಂಬಿಸುವ ಸಂಸ್ಥೆ ಸಿಬ್ಬಂದಿಯೇ ಎಟಿಎಂಗೆ ತುಂಬಿಸಬೇಕಿದ್ದ ಹಣಕ್ಕೆ ಕನ್ನ ಹಾಕಿರುವುದು ಆಘಾತ ಮೂಡಿಸಿದೆ.

ಈ ಪ್ರಕರಣದಲ್ಲಿ ಐವರು ಆರೋಪಿಗಳು ಹಿಟಾಚಿ ಪೇಮೆಂಟ್‌ ಸರ್ವಿಸ್‌ ಪ್ರೈವೇಟ್ ಲಿ. ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಎಸ್‌ಬಿಐ, ಆಕ್ಸಿಸ್‌ ಬ್ಯಾಂಕ್‌ ಮತ್ತು ಇತರೆ ಬ್ಯಾಂಕ್‌ಗಳ ಎಟಿಎಂಗಳಿಗೆ ಹಣವನ್ನು ಡೆಪಾಸಿಟ್‌ ಮಾಡುವ ಕೆಲಸ ನಿರ್ವಹಿಸುತ್ತಿದ್ದರು. ಕರೆನ್ಸಿ ಚೆಸ್ಟ್‌ನಿಂದ ಎಟಿಎಂಗಳಿಗೆ ಹಣ ತುಂಬುವ ಸಲುವಾಗಿ ಸುಮಾರು ಒಂದೂವರೆ ವರ್ಷಗಳ ಅವಧಿಯಲ್ಲಿ ಕೋಟ್ಯಂತರ ಹಣ ಪಡೆದುಕೊಂಡಿದ್ದರು. ಆದರೆ ಸಂಪೂರ್ಣ ಹಣವನ್ನು ಎಟಿಎಂಗಳಿಗೆ ಹಾಕದೆ ಒಂದೂವರೆ ವರ್ಷದ ಅವಧಿಯಲ್ಲಿ ಬ್ಯಾಂಕಿನವರಿಗೆ ಸುಮಾರು 1.38 ಕೋಟಿ ವಂಚಿಸಿ ಆ ಹಣವನ್ನು ತಮ್ಮ ಸ್ವಂತಕ್ಕೆ ಬಳಸಿಕೊಂಡಿದ್ದರು. ಆರೋಪಿಗಳು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಸುಮಾರು 80.49 ಲಕ್ಷ ರು. ಮತ್ತು 57.ಲಕ್ಷ ರು.ದುರುಪಯೋಗ ಪಡಿಸಿಕೊಂಡಿದ್ದಾರೆ. ನಂಬಿಕೆ ದ್ರೋಹ/ ವಂಚನೆ ಪ್ರಕರಣದಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

-ಕೋಟ್‌-

ಆರೋಪಿಗಳು 2024 ಫೆಬ್ರವರಿಯಿಂದ ಇಲ್ಲಿಯವರೆಗೂ ಹಂತ ಹಂತವಾಗಿ ಎಟಿಎಂಗೆ ತುಂಬ ಬೇಕಿದ್ದ ಹಣವನ್ನು ವಂಚಿಸಿ ತಮ್ಮ ಸ್ವಂತಕ್ಕೆ ಬಳಸಿಕೊಂಡಿದ್ದಾರೆ. ಲೆಕ್ಕಪರಿಶೋಧನೆ ವೇಳೆ ಈ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಆದರೆ ಇದು ದರೋಡೆ ಪ್ರಕರಣವಲ್ಲ. ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಮೊಹಮ್ಮದ್ ಸುಜಿತಾ, ಆಗ್ನೇಯ ವಿಭಾಗದ ಡಿಸಿಪಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವೈಭವೋಪೇತ ಮನೆಗಾಗಿ ವಾರಗಿತ್ತಿಯರ ವಾರ್‌
ನಿರಂತರ ಬರವಣಿಗೆಯೇ ಯಶಸ್ಸಿನ ದಾರಿ ಎಂದ ಶಿವಾನಂದ ತಗಡೂರು