ಬೆಂಗಳೂರಲ್ಲಿ ಕಬ್ಬನ್‌, ಲಾಲ್‌ಬಾಗ್‌ ರೀತಿಯಲ್ಲಿ ಇನ್ನೊಂದು ದೊಡ್ಡ ಪಾರ್ಕ್‌ ನಿರ್ಮಾಣ

KannadaprabhaNewsNetwork |  
Published : Jan 03, 2026, 04:15 AM IST
ಜಜಜಹಗ್ | Kannada Prabha

ಸಾರಾಂಶ

ರಾಜಧಾನಿ ಬೆಂಗಳೂರಿನಲ್ಲಿ 153 ಎಕರೆ ವಿಸ್ತೀಣದಲ್ಲಿ ವಿಶ್ವಗುರು ಬಸವಣ್ಣ ಜೀವ ವೈವಿದ್ಯ ಉದ್ಯಾನವನ ನಿರ್ಮಾಣಕ್ಕೆ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ತನ್ಮೂಲಕ ಕಬ್ಬನ್‌ ಪಾರ್ಕ್‌, ಲಾಲ್‌ಬಾಗ್‌ ನಂತರ ಬೆಂಗಳೂರಿನ ಮೂರನೇ ಅತಿ ದೊಡ್ಡ ಪಾರ್ಕ್‌ ಇದಾಗಲಿದೆ.

ಕನ್ನಡಪ್ರಭ ವಾರ್ತೆ, ಬೆಂಗಳೂರು

ರಾಜಧಾನಿ ಬೆಂಗಳೂರಿನಲ್ಲಿ 153 ಎಕರೆ ವಿಸ್ತೀಣದಲ್ಲಿ ವಿಶ್ವಗುರು ಬಸವಣ್ಣ ಜೀವ ವೈವಿದ್ಯ ಉದ್ಯಾನವನ ನಿರ್ಮಾಣಕ್ಕೆ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ತನ್ಮೂಲಕ ಕಬ್ಬನ್‌ ಪಾರ್ಕ್‌, ಲಾಲ್‌ಬಾಗ್‌ ನಂತರ ಬೆಂಗಳೂರಿನ ಮೂರನೇ ಅತಿ ದೊಡ್ಡ ಪಾರ್ಕ್‌ ಇದಾಗಲಿದೆ.

ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ, ಈ ಹಿಂದೆ ಅರಣ್ಯ ಇಲಾಖೆ ಬೆಂಗಳೂರು ಉತ್ತರ ತಾಲೂಕು ಯಲಹಂಕ ಬಳಿಯ ಮಾದಪ್ಪನಹಳ್ಳಿಯಲ್ಲಿರುವ 153 ಎಕರೆ ಪ್ರದೇಶವನ್ನು ನೆಡುತೋಪು ಬೆಳೆಸಲು ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮಕ್ಕೆ ನೀಡಲಾಗಿತ್ತು.

ಈಗ ಈ ಜಾಗವನ್ನು ಮರಳಿ ಇಲಾಖೆಗೆ ಪಡೆಯಲಾಗಿದ್ದು, ಇಲ್ಲಿರುವ ನೀಲಗಿರಿ ಮರಗಳನ್ನು ಹಂತಹಂತವಾಗಿ ತೆಗೆದು ಇಲ್ಲಿ ಸ್ಥಳೀಯ ಪ್ರಭೇದದ ಗಿಡ ಮರ ಬೆಳೆಸಿ, ಜಲ ಗುಂಡಿ ನಿರ್ಮಿಸಿ ವಿಶ್ವಗುರು ಬಸವಣ್ಣ ಜೀವವೈವಿಧ್ಯ ಉದ್ಯಾನ ನಿರ್ಮಿಸಲು 50 ಕೋಟಿ ರು. ಮಂಜೂರು ಮಾಡಲು ಸಂಪುಟ ಸಭೆ ಅನುಮೋದಿಸಿದೆ. ಇದು ನಾನು ಸಚಿವನಾದ ತರುವಾಯ ಕೈಗೊಂಡ ಕನಸಿನ ಯೋಜನೆಯಾಗಿದ್ದು, ಇದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಎಲ್ಲ ಸಂಪುಟ ಸಹೋದ್ಯೋಗಿಗಳಿಗೆ ಧನ್ಯವಾದ ಅರ್ಪಿಸುವುದಾಗಿ ತಿಳಿಸಿದರು.

1760ರಲ್ಲಿ 240 ಎಕರೆ ಪ್ರದೇಶದಲ್ಲಿ ನಗರದಲ್ಲಿ ಲಾಲ್ ಬಾಗ್ ನಿರ್ಮಾಣವಾಗಿತ್ತು. ನಂತರ 1870ರಲ್ಲಿ 197 ಎಕರೆ ಪ್ರದೇಶದಲ್ಲಿ ಕಬ್ಬನ್‌ ಪಾರ್ಕ್‌ ನಿರ್ಮಿಸಲಾಗಿತ್ತು. ಆದಾದ ಬಳಿಕ ಬೆಂಗಳೂರಿನಲ್ಲಿ ಹಲವು ಸಣ್ಣ ಉದ್ಯಾನಗಳ ನಿರ್ಮಾಣವಾಗಿದೆಯಾದರೂ ಬೃಹತ್ ಉದ್ಯಾನ ನಿರ್ಮಾಣ ಆಗಿರಲಿಲ್ಲ. ಈಗ ಅಂತಹ ಒಂದು ಬೃಹತ್ ಜೀವವೈವಿಧ್ಯ ಉದ್ಯಾನವನ್ನು ನಮ್ಮ ಸರ್ಕಾರ ಜನತೆಗೆ ಸಮರ್ಪಿಸುತ್ತಿದೆ. ಇದು ನಗರದ 3ನೇ ಅತಿದೊಡ್ಡ ಉದ್ಯಾನವನವೆಂಬ ಖ್ಯಾತಿಗೆ ಪಾತ್ರವಾಗಲಿದೆ ಎಂದರು.ಈ ಉದ್ಯಾನದಲ್ಲಿ ದಿವ್ಯೌಷಧೀಯ ಸಸ್ಯ ವನ, ಪಕ್ಷಿ ಲೋಕ, ವೃಕ್ಷೋದ್ಯಾನ ಹಾಗೂ ಇಂಟರ್ ಪ್ರಿಟೇಷನ್ ಸೆಂಟರ್ ನಿರ್ಮಾಣ ಮಾಡಲು ಚಿಂತಿಸಲಾಗಿದ್ದು, ಅತಿ ಶೀಘ್ರದಲ್ಲೇ ಸಾರ್ವಜನಿಕರಿಗೆ ಲಭ್ಯವಾಗಲಿರುವ ಶಿವರಾಮಕಾರಂತ ಬಡಾವಣೆಗೆ ಅತ್ಯಂತ ಸಮೀಪದಲ್ಲಿದೆ. ಇಲ್ಲಿನ ನೀಲಗಿರಿ ಮರಗಳನ್ನು ತೆಗೆದು ಸ್ಥಳೀಯ ಜಾತಿಯ ನಂದಿ, ಹೊನ್ನೆ, ಬಿಲ್ವ, ಮಹಾಬಿಲ್ವ ಮೊದಲಾದ ನೂರಾರು ಪ್ರಭೇದದ ಸಸಿಗಳನ್ನು ನೆಟ್ಟು ಬೆಳೆಸಲಾಗುವುದು. ಆ ಮರಗಳ ಬಳಿ ವೃಕ್ಷದ ಹೆಸರು, ಪ್ರಭೇದ ಇತ್ಯಾದಿ ವೈಜ್ಞಾನಿಕ ವಿವರದ ಫಲಕ ಹಾಕುವ ಮೂಲಕ ಮುಂದಿನ ಪೀಳಿಗೆ ಕನಿಷ್ಠ 50 ಮರಗಳನ್ನು ಗುರುತಿಸುವಂತೆ ಅರಿವು ಮೂಡಿಸಲು ತೀರ್ಮಾನಿಸಲಾಗಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರ ವಿವಿ ಪದವಿ ಪ್ರಶ್ನೆ ಪತ್ರಿಕೆ ಸೋರಿಕೆ: ಎನ್‌ಎಸ್‌ಯುಐ ಆರೋಪ
ಪೊಲೀಸರಿಗೆ ಕಪಾಳಮೋಕ್ಷ: 27 ಜನರ ವಿರುದ್ಧ ಕೇಸ್‌