ಹೊಸ ಬಿಎಲ್‌ಎಸ್ ಆ್ಯಂಬುಲೆನ್ಸ್ ನಲ್ಲಿ ಆಕ್ಸಿಜನ್ ವ್ಯವಸ್ಥೆ, ಸಕ್ಷನ್ ಯಂತ್ರ, ತುರ್ತು ಜೀವ ರಕ್ಷಕ ಉಪಕರಣಗಳು ಸೇರಿದಂತೆ ಅಗತ್ಯ ವೈದ್ಯಕೀಯ ಸೌಲಭ್ಯಗಳನ್ನು ಅಳವಡಿಸಲಾಗಿದೆ. ತುರ್ತು ಪರಿಸ್ಥಿತಿಯಲ್ಲಿ ರೋಗಿಗಳನ್ನು ತ್ವರಿತವಾಗಿ ಜಿಲ್ಲಾ ಆಸ್ಪತ್ರೆ ಅಥವಾ ಉನ್ನತ ಚಿಕಿತ್ಸಾ ಕೇಂದ್ರಗಳಿಗೆ ಸಾಗಿಸಲು ಇದು ನೆರವಾಗಲಿದೆ.
ಕನ್ನಡಪ್ರಭ ವಾರ್ತೆ ಮೈಸೂರು
ಎಚ್‌ಪಿಸಿಎಲ್ (ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್) ಸಂಸ್ಥೆಯ ಸಿಎಸ್‌ಆರ್ ನಿಧಿಯಡಿ ಆರೋಗ್ಯ ಇಲಾಖೆಗೆ ಕೊಡುಗೆಯಾಗಿ ನೀಡಲಾದ ಬಿಎಲ್‌ಎಸ್ (ಬೇಸಿಕ್ ಲೈಫ್ ಸಪೋರ್ಟ್) ಆ್ಯಂಬುಲೆನ್ಸ್ ಅನ್ನು ಡಿಎಚ್‌ಒ ಡಾ.ಪಿ.ಸಿ.ಕುಮಾರಸ್ವಾಮಿ ಗುರುವಾರ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಿದರು.
ಮೈಸೂರಿನ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಸಿರು ನಿಶಾನೆ ತೋರಿಸುವ ಮೂಲಕ ಆ್ಯಂಬುಲೆನ್ಸ್ ಗೆ ಚಾಲನೆ ನೀಡಲಾಯಿತು. ಬಳಿಕ ಮಾತನಾಡಿದ ಅವರು, ರಾಷ್ಟ್ರಿಯ ಹೆದ್ದಾರಿಯ ಮೂಲಕ ಸಂಪರ್ಕ ಹೊಂದಿರುವ ಹುಣಸೂರು ಭಾಗದಲ್ಲಿ ರಸ್ತೆ ಅಪಘಾತಗಳ ಸಂಭವ ಹೆಚ್ಚಿರುವ ಹಿನ್ನೆಲೆಯಲ್ಲಿ ತುರ್ತು ವೈದ್ಯಕೀಯ ಸೇವೆಯನ್ನು ಇನ್ನಷ್ಟು ಬಲಪಡಿಸುವ ಅಗತ್ಯವಿತ್ತು. ಈ ಹಿನ್ನೆಲೆ ಹೆಚ್ಚುವರಿ ಆ್ಯಂಬುಲೆನ್ಸ್ ಸೇವೆ ಸಾರ್ವಜನಿಕರಿಗೆ ನೆರವಾಗಲಿದೆ ಎಂದರು.
ಹೊಸ ಬಿಎಲ್‌ಎಸ್ ಆ್ಯಂಬುಲೆನ್ಸ್ ನಲ್ಲಿ ಆಕ್ಸಿಜನ್ ವ್ಯವಸ್ಥೆ, ಸಕ್ಷನ್ ಯಂತ್ರ, ತುರ್ತು ಜೀವ ರಕ್ಷಕ ಉಪಕರಣಗಳು ಸೇರಿದಂತೆ ಅಗತ್ಯ ವೈದ್ಯಕೀಯ ಸೌಲಭ್ಯಗಳನ್ನು ಅಳವಡಿಸಲಾಗಿದೆ. ತುರ್ತು ಪರಿಸ್ಥಿತಿಯಲ್ಲಿ ರೋಗಿಗಳನ್ನು ತ್ವರಿತವಾಗಿ ಜಿಲ್ಲಾ ಆಸ್ಪತ್ರೆ ಅಥವಾ ಉನ್ನತ ಚಿಕಿತ್ಸಾ ಕೇಂದ್ರಗಳಿಗೆ ಸಾಗಿಸಲು ಇದು ನೆರವಾಗಲಿದೆ ಎಂದು ಮಾಹಿತಿ ನೀಡಿದರು.
ಎರಡು ಲಕ್ಷ ಜನರಿಗೆ ಲಾಭ:
ಹುಣಸೂರು ತಾಲೂಕಿನಲ್ಲಿ ಸುಮಾರು ಎರಡು ಲಕ್ಷ ಜನಸಂಖ್ಯೆ ಇದ್ದು, ಪಟ್ಟಣ ವ್ಯಾಪ್ತಿಯಲ್ಲೇ ಸುಮಾರು 50 ಸಾವಿರ ಜನರು ವಾಸಿಸುತ್ತಿದ್ದಾರೆ. ಈಗಾಗಲೇ ಎರಡು ಆ್ಯಂಬುಲೆನ್ಸ್ ಗಳು ಕಾರ್ಯನಿರ್ವಹಿಸುತ್ತಿದ್ದರೂ, ಹೆಚ್ಚುತ್ತಿರುವ ತುರ್ತು ವೈದ್ಯಕೀಯ ಅವಶ್ಯಕತೆ ಹಿನ್ನೆಲೆಯಲ್ಲಿ ಮತ್ತೊಂದು ಆ್ಯಂಬುಲೆನ್ಸ್ ಸೇರ್ಪಡೆ ಮಹತ್ವದ್ದಾಗಿದೆ ಎಂದರು.
ಗರ್ಭಿಣಿಯರು, ನವಜಾತ ಶಿಶುಗಳಿಗೆ ನೆರವು:
ಹುಣಸೂರು ಸಾರ್ವಜನಿಕ ತಾಲೂಕು ಆಸ್ಪತ್ರೆಯಿಂದ ಪ್ರತಿದಿನ ಸರಾಸರಿ 5 ರಿಂದ 6 ತುರ್ತು ಪ್ರಕರಣಗಳನ್ನು ಮೈಸೂರಿಗೆ ರವಾನಿಸಲಾಗುತ್ತದೆ. ಗರ್ಭಿಣಿಯರು, ನವಜಾತ ಶಿಶುಗಳು ಹಾಗೂ ಎನ್‌ಐಸಿಯು ಚಿಕಿತ್ಸೆಯ ಅಗತ್ಯವಿರುವ ಮಕ್ಕಳನ್ನು ತ್ವರಿತವಾಗಿ ಜಿಲ್ಲಾ ಕೇಂದ್ರಕ್ಕೆ ಸಾಗಿಸಲು ಈ ಸೇವೆ ಸಹಕಾರಿಯಾಗಲಿದೆ. 24 ಗಂಟೆಯೂ ಸುಸಜ್ಜಿತ ತುರ್ತು ವೈದ್ಯಕೀಯ ಸೇವೆ ಒದಗಿಸುವಲ್ಲಿ ಹೊಸ ವಾಹನ ಮಹತ್ವದ ಪಾತ್ರ ವಹಿಸಲಿದೆ ಎಂದರು.
ತುರ್ತು ಚಿಕಿತ್ಸೆ ಗೆ ಪೂರಕ:
ಪಿ.ಎಚ್.ಸಿ ಹಂತದಲ್ಲಿ ಕೇವಲ ಪ್ರಾಥಮಿಕ ಚಿಕಿತ್ಸೆ ದೊರೆಯುತ್ತದೆ. ತಾಲೂಕು ಆಸ್ಪತ್ರೆಗಳಲ್ಲಿ ಮೊದಲ ಹಂತದ ಚಿಕಿತ್ಸೆ ದೊರೆಯುತ್ತದೆ. ಇನ್ನೂ ಹೆಚ್ಚುವರಿ ಚಿಕಿತ್ಸೆ ಬೇಕಾದಲ್ಲಿ ಜಿಲ್ಲಾ ಆಸ್ಪತ್ರೆಗೆ ಬರಬೇಕಾಗುತ್ತದೆ. ಆ ರೀತಿಯ ಅಗತ್ಯವಿರುವ ರೋಗಿಗಳನ್ನು ತಾಲೂಕು ಕೇಂದ್ರದಿಂದ ಜಿಲ್ಲಾ ಆಸ್ಪತ್ರೆಗಳಿಗೆ ಕರೆತರಲು ಸುಸಜ್ಜಿತ ಆ್ಯಂಬುಲೆನ್ಸ್ ಸೇವೆ ಅಗತ್ಯವಿದ್ದು ಜಿಲ್ಲೆಯಲ್ಲಿ ಸದ್ಯ ಅಗತ್ಯಕ್ಕೆ ತಕ್ಕಷ್ಟು ಆ್ಯಂಬುಲೆನ್ಸ್ ಇವೆ ಎಂದರು.
ಕಾರ್ಯಕ್ರಮದಲ್ಲಿ ಕಾರ್ಯಕ್ರಮಾಧಿಕಾರಿ ಸಿರಾಜ್ ಅಹಮದ್, ಗೋಪಿನಾಥ್, ಹುಣಸೂರು ಸಾರ್ವಜನಿಕ ತಾಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಶಿವಶಂಕರ್ ಹಾಗೂ ಎಚ್‌ಪಿಸಿಎಲ್ ನ ಪೈಪ್ ಲೈನ್ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಆರ್.ರಮೇಶ್, ಉಪ ಪ್ರಧಾನ ವ್ಯವಸ್ಥಾಪಕ ಬಿ.ವಿಜಯ್ ಕುಮಾರ್, ಆಪರೇಷನ್ ವಿಭಾಗದ ಪ್ರಧಾನ ವ್ಯವಸ್ಥಾಪಕ ಪಿ.ಅಜಿತ್ ಮೊದಲಾದವರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.