ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಮಾನಸಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಮೈಸೂರು ವಿಶ್ವವಿದ್ಯಾನಿಲಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರೊ.ಎಸ್.ಚಂದ್ರಶೇಖರ್ ರಚಿಸಿದ ನಾಲ್ವಡಿ ಕೃಷ್ಣ ರಾಜ ಒಡೆಯರ್ ಮತ್ತು ಆಧುನಿಕ ಮೈಸೂರು ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಅನೇಕ ಸಂದರ್ಭಗಳಲ್ಲಿ ಇತಿಹಾಸವನ್ನು ಒಂದೆಡೆ ವೈಭವೀಕರಿಸುವುದು ಮತ್ತು ನಿರ್ಲಕ್ಷ್ಯಿಸುವುದು ನಡೆಯುತ್ತಿರುತ್ತದೆ. ಇದು ಸರಿಯಲ್ಲ. ಇತ್ತೀಚಿನ ದಿನಗಳಲ್ಲಿ ಚರಿತ್ರೆಯನ್ನು ಅಪವ್ಯಾಖ್ಯಾನ ಮಾಡಲಾಗುತ್ತಿದೆ. ಇದರಿಂದ ಇತಿಹಾಸಕಾರರು ದೊಡ್ಡ ಬಿಕ್ಕಟ್ಟು ಎದುರಿಸುತ್ತಿದ್ದಾರೆ. ಚರಿತ್ರೆ ಕಟ್ಟಲು ಬೇಕಿರುವುದು ನೈತಿಕತೆ, ತೀವ್ರತರವಾದ ಕಾಳಜಿ, ಸಮಕಾಲೀನ ವಿವೇಕ, ವಿದ್ವತ್ತು ಮಾತ್ರ ಎಂದರು.ರಾಜಪ್ರಭುತ್ವ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳ ನಡುವಿನ ವೈರುಧ್ಯವನ್ನು ಸಮರ್ಥವಾಗಿ ನಿಭಾಯಿಸಿದ್ದು ನಾಲ್ವಡಿ ಅವರ ವಿಶಿಷ್ಟ ಸಾಧನೆ. ಆದರ್ಶ ರಾಜ ಹೇಗಿರಬೇಕು ಎಂಬುದಕ್ಕೆ ನಾಲ್ವಡಿ ಅವರನ್ನು ಉತ್ತಮ ಮಾದರಿಯಾಗಿ ನೋಡಬಹುದು. ಅಸ್ಪೃಶ್ಯರ ಶಿಕ್ಷಣಕ್ಕಾಗಿ ವಿಶೇಷ ಶಾಲೆಗಳನ್ನು ಆರಂಭಿಸುವ ಮೂಲಕ ಶಿಕ್ಷಣದ ಹಕ್ಕನ್ನು ಸಮಾಜದ ಎಲ್ಲಾ ವರ್ಗಗಳಿಗೂ ತಲುಪಿಸಲು ಪ್ರಯತ್ನಿಸಿದ್ದಾಗಿ ಅವರು ಹೇಳಿದರು.
ಹಿರಿಯ ವಿಮರ್ಶಕ ಪ್ರೊ.ಓ.ಎಲ್. ನಾಗಭೂಷಣಸ್ವಾಮಿ ಅವರು ಕೃತಿ ಕುರಿತು ಮಾತನಾಡಿ, ಆಡಳಿತ ಹಕ್ಕು, ಅಧಿಕಾರ ಎಂದುಕೊಳ್ಳದೇ ಜವಾಬ್ದಾರಿಯುತವಾಗಿ ನಿರ್ವಹಿಸಿದ್ದಾಗಿ ಹೇಳಿದರು.
ಲೇಖಕ ಪ್ರೊ.ಎಸ್. ಚಂದ್ರಶೇಖರ್, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಡಾ. ನಂಜಯ್ಯ ಹೊಂಗನೂರು ಅಧ್ಯಕ್ಷತೆ ವಹಿಸಿದ್ದರು. ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತ ಡಾ. ಸಂಗಮೇಶ ಉಪಾಸೆ, ಮೈಸೂರು ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಇದ್ದರು. ಬೆಂಗಳೂರು ಜಿಲ್ಲಾ ಕಸಾಪ ಅಧ್ಯಕ್ಷ ಎಂ. ಪ್ರಕಾಶಮೂರ್ತಿ ಪ್ರಸ್ತಾವಿಕವಾಗಿ ಮಾತನಾಡಿದರು. ಎಲ್. ಹರ್ಷ ಸ್ವಾಗತಿಸಿದರು. ಡಾ.ಎನ್. ಯೋಗೀಶ್ ನಿರೂಪಿಸಿದರು. ಲತಾ ಮೋಹನ್ ವಂದಿಸಿದರು.