ಫಲವತ್ತಾದ ಭೂಮಿ ಬಿಟ್ಟು ಉಳಿದ ಭೂಮಿಗೆ ಅಧಿಸೂಚನೆ ಹೊರಡಿಸುವಂತೆ ರೈತಸಂಘದ ಮತ್ತೊಂದು ಬಣ ಆಗ್ರಹ

KannadaprabhaNewsNetwork |  
Published : Nov 24, 2025, 01:15 AM IST
ಸಿಕೆಬಿ-1  ಜಂಗಮಕೋಟೆ ಹೋಬಳಿ ಕೆಐಎಡಿಬಿ ಭೂ ವಶ ಪರ ಹೋರಾಟಗಾರರಿಂದ ಜಿಲ್ಲಾಡಳಿತ ಭವನದ ಮುಂದೆ ಅನಿರ್ಧಿಷ್ಟಾವಧಿ ಧರಣಿ ಆರಂಭಿಸಿದರು | Kannada Prabha

ಸಾರಾಂಶ

ಭಾನುವಾರದಿಂದ ಚಿಕ್ಕಬಳ್ಳಾಪುರದ ಜಿಲ್ಲಾಡಳಿತ ಭವನದ ಮುಂದೆ ಅಹೋರಾತ್ರಿ ಧರಣಿಯನ್ನು ಹಮ್ಮಿಕೊಂಡಿದ್ದು ರೈತರ ಪರ ನಿಂತು ಸರ್ಕಾರ ಈ ಮೇಲ್ಕಂಡ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಹೋಬಳಿ 13 ಹಳ್ಳಿಗಳಲ್ಲಿ ಕೆಐಎಡಿಬಿಯಿಂದ ಭೂಸ್ವಾಧೀನ ಪರವಾಗಿ ರೈತ ಪರ ಹೋರಾಟ ಸಮಿತಿಯ ವತಿಯಿಂದ ಭಾನುವಾರ ಜಿಲ್ಲಾಡಳಿತ ಭವನದ ಮುಂದೆ ಅನಿರ್ಧಿಷ್ಟಾವಧಿ ಧರಣಿ ಆರಂಭಿಸಲಾಯಿತು.

ರಾಜ್ಯ ರೈತಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್ ಮಾತನಾಡಿ, ಜಂಗಮಕೋಟೆ ಹೋಬಳಿ 13 ಹಳ್ಳಿಗಳಲ್ಲಿ 2823 ಎಕರೆ ಜಮೀನು ಘನ ಸರ್ಕಾರ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಮೂಲಕ ಭೂಸ್ವಾಧೀನ ಪ್ರಕ್ರಿಯೆಗೆ 2024ರ ಜೂನ್ 24 ರಂದು ಪ್ರಾಥಮಿಕ ಅಧಿಸೂಚನೆ ಹೊರಡಿಸಿದ್ದು, ಬಹುಪಾಲು ರೈತರು ತಮ್ಮ ತಮ್ಮ ಮಕ್ಕಳ ಮುಂದಿನ ಉದ್ಯೋಗದ ಭವಿಷ್ಯಕ್ಕಾಗಿ ಸ್ವಯಂ ಬೆಂಗಳೂರಿನ ಕೆಐಎಡಿಬಿ ಕಚೇರಿಗೆ ತೆರಳಿ ಒಪ್ಪಿಗೆ ಸೂಚಿಸಿದ್ದಾರೆ. ಆದರೆ ಅಂದಿನಿಂದ ರೈತರು ಯಾವುದೇ ಬ್ಯಾಂಕಿನಲ್ಲಿ ಬೆಳೆ ಸಾಲ ಪಡೆಯಲು ಆಗುತ್ತಿಲ್ಲ. ಹೊಸ ಕೊಳವೆ ಬಾವಿಗೆ ವಿದ್ಯುತ್ ಸಂಪರ್ಕ ಸಿಗುತ್ತಿಲ್ಲ. ಯಾವುದೇ ನೋಂದಣಿಯ ಪರಭಾರೆ, ವಿಭಾಗಪಟ್ಟಿಗಳು ಆಗುತ್ತಿಲ್ಲ. ಹಾಗಾಗಿ ಈ ಕೂಡಲೇ 2823 ಎಕರೆ ಭೂಸ್ವಾಧೀನದ ಜಮೀನಿನಲ್ಲಿ ಕೃಷಿಗೆ ಯೋಗ್ಯವಾದ ನೀರಾವರಿ ಜಮೀನು ಬಿಟ್ಟು ಉಳಿದ ಜಮೀನುಗಳನ್ನು ಭೂಸ್ವಾಧೀನಗೊಳಿಸಲು ಅಂತಿಮ ಅಧಿಸೂಚನೆ ಹೊರಡಿಸಬೇಕು ಎಂದು ಆಗ್ರಹಿಸಿದರು.

ಭೂಮಿ ನೀಡಿದ ರೈತರಿಗೆ ಉತ್ತಮ ಭೂಪರಿಹಾರ ನೀಡಬೇಕು, ಭೂಮಿ ನೀಡಿದ ಪ್ರತಿ ರೈತನ ಕುಟುಂಬಕ್ಕೆ ಒಂದು ಕಾಯಂ ಉದ್ಯೋಗ ನೀಡಬೇಕು, ಕೆಐಎಡಿಬಿಗೆ ಒಳಪಟ್ಟಿರುವ 2823 ಎಕರೆ ಜಮೀನಿನಲ್ಲಿ 525 ಎಕರೆ ಪಿಎಸ್ ಎಲ್ ಕಂಪನಿಗೆ ಒಳಪಟ್ಟಿದ್ದು, ಆ ಕಂಪನಿಯ ವಿರುದ್ಧ ಸರ್ಕಾರದಿಂದ ವಕೀಲರನ್ನು ನೇಮಿಸಿ ಆ 525 ಎಕರೆ ಜಮೀನುಗಳಿಗೆ ಭೂ ಪರಿಹಾರವನ್ನು ಮೂಲ ರೈತರಿಗೆ ನೀಡಬೇಕು ಎಂದು ಆಗ್ರಹಿಸಿದರು.

ಭಾನುವಾರದಿಂದ ಚಿಕ್ಕಬಳ್ಳಾಪುರದ ಜಿಲ್ಲಾಡಳಿತ ಭವನದ ಮುಂದೆ ಅಹೋರಾತ್ರಿ ಧರಣಿಯನ್ನು ಹಮ್ಮಿಕೊಂಡಿದ್ದು ರೈತರ ಪರ ನಿಂತು ಸರ್ಕಾರ ಈ ಮೇಲ್ಕಂಡ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.

ದಲಿತ ಸಂಘರ್ಷ ಸಮಿತಿ ಭೀಮ ಮಾರ್ಗ ರಾಜ್ಯ ಸಂಚಾಲಕಿ ನಾಗವೇಣಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ರಾಮಾಂಜನೇಯ, ತಾಲೂಕು ಅಧ್ಯಕ್ಷ ಎ.ಎನ್.ಮುನೇಗೌಡ, ಕಾರ್ಯದರ್ಶಿ ನವೀನಾಚಾರ್ಯ, ಜಿಲ್ಲಾ ಕಾರ್ಯಧ್ಯಕ್ಷ ಸುಬ್ರಮಣಿ, ಬಸವಾಪಟ್ಟಣ ಪ್ರಭುಗೌಡ, ವೆಂಕಟೇಶ್, ನಾಗರಾಜ್, ಜಂಗಮಕೋಟೆ (ಜೆಸಿ) ಮಂಜಣ್ಣ, ನಾರಾಯಣ ದಾಸರಹಳ್ಳಿ, ನಾರಾಯಣಸ್ವಾಮಿ, ಯಣ್ಣಂಗೂರು ಈರಪ್ಪ, ಮಧು, ನರಸಿಂಹಪ್ಪ, ಚೀಂಮಗಲ ಚನ್ನಪ್ಪ, ಶಿಡ್ಲಘಟ್ಟ ನಗರದ ರಾಜೇಶ್, ಪ್ರಭು, ಅಂಬರೀಶ್, ಮೂರ್ತಿ, ನರಸಿಂಹ ಮೂರ್ತಿ ಮತ್ತಿತರರು ಇದ್ದರು.

--------

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನರೇಗಾ ಮರುಜಾರಿವರೆಗೆ ಹೋರಾಟ : ಸಿಎಂ ಸಿದ್ದರಾಮಯ್ಯ
ಡ್ರಗ್ಸ್‌ ವಿರುದ್ಧ ಸಿಎಂ ತವರಿಂದಲೇ ಹೋರಾಟ : ವಿಜಯೇಂದ್ರ