ಜಿಲ್ಲಾ ನ್ಯಾಯಾಲಯಕ್ಕೆ ಮತ್ತೆ ಹುಸಿ ಬಾಂಬ್ ಬೆದರಿಕೆ!

KannadaprabhaNewsNetwork |  
Published : Jun 20, 2026, 01:30 AM IST
19ಕೆಎಂಎನ್ ಡಿ26 | Kannada Prabha

ಸಾರಾಂಶ

ಹುಸಿ ಬಾಂಬ್ ಬೆದರಿಕೆಯ ಇ-ಮೇಲ್ ಮತ್ತೆ ಬಂದ ಹಿನ್ನೆಲೆಯಲ್ಲಿ ನಗರದ ಜಿಲ್ಲಾ ನ್ಯಾಯಾಲಯ ಸಂಕೀರ್ಣವನ್ನು ಪೊಲೀಸ್ ಇಲಾಖೆ, ಬಾಂಬ್ ನಿಷ್ಕ್ರಿಯ ದಳದ ಅಧಿಕಾರಿ, ಸಿಬ್ಬಂದಿ ಶುಕ್ರವಾರ ತೀವ್ರ ತಪಾಸಣೆ ನಡೆಸಿದ್ದು, ಕಡೆಗೆ ಇದೊಂದು ಹುಸಿ ಬಾಂಬ್ ಕರೆ ಎಂಬುದು ಸ್ಪಷ್ಟವಾಗಿದೆ.

- ಪೊಲೀಸ್ ಅಧಿಕಾರಿ-ಸಿಬ್ಬಂದಿ, ಬಾಂಬ್ ನಿಷ್ಕ್ರಿಯ ದಳ, ಶ್ವಾನದಳದಿಂದ ತಪಾಸಣೆ । ಹುಸಿ ಇ-ಮೇಲ್‌ ಬಾಂಬ್‌ ಸ್ಪಷ್ಟ

- ಜಡ್ಜ್‌ಗಳು, ವಕೀಲರು, ಜನಸಾಮಾನ್ಯರು ನಿಟ್ಟುಸಿರು । ಕಿಡಿಗೇಡಿಗಳ ಪತ್ತೆಹಚ್ಚಿ ಕಾನೂನು ಕ್ರಮಕ್ಕೆ ವಕೀಲರ ಒತ್ತಾಯ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಹುಸಿ ಬಾಂಬ್ ಬೆದರಿಕೆಯ ಇ-ಮೇಲ್ ಮತ್ತೆ ಬಂದ ಹಿನ್ನೆಲೆಯಲ್ಲಿ ನಗರದ ಜಿಲ್ಲಾ ನ್ಯಾಯಾಲಯ ಸಂಕೀರ್ಣವನ್ನು ಪೊಲೀಸ್ ಇಲಾಖೆ, ಬಾಂಬ್ ನಿಷ್ಕ್ರಿಯ ದಳದ ಅಧಿಕಾರಿ, ಸಿಬ್ಬಂದಿ ಶುಕ್ರವಾರ ತೀವ್ರ ತಪಾಸಣೆ ನಡೆಸಿದ್ದು, ಕಡೆಗೆ ಇದೊಂದು ಹುಸಿ ಬಾಂಬ್ ಕರೆ ಎಂಬುದು ಸ್ಪಷ್ಟವಾಗಿದೆ.

ನಗರದ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಇಟ್ಟಿರುವುದಾಗಿ ಶುಕ್ರವಾರ ಬೆಳಗ್ಗೆ ಜಿಲ್ಲಾ ನ್ಯಾಯಾಲಯಕ್ಕೆ ಇ-ಮೇಲ್‌ ಬಂದಿತ್ತು. ಬಾಂಬ್ ಬೆದರಿಕೆಯ ಇ-ಮೇಲ್ ಬಂದ ಹಿನ್ನೆಲೆ ತಕ್ಷಣವೇ ಜಿಲ್ಲಾ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ, ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳದ ತಂಡಗಳು ಸ್ಥಳಕ್ಕೆ ಧಾವಿಸಿ, ಇಡೀ ಜಿಲ್ಲಾ ನ್ಯಾಯಾಲಯದ ಪ್ರತಿ ಕೊಠಡಿ, ನ್ಯಾಯಾಲಯಗಳು, ವಕೀಲರ ಭ‍ವನ, ಶೌಚಾಲಯ ಹೀಗೆ ಯಾವುದೇನ್ನೂ ಬಿಡದೇ, ಮೂಲೆ ಮೂಲೆಯಲ್ಲಿ ಬಾಂಬ್‌ಗಾಗಿ ಶೋಧ ಕೈಗೊಂಡರು. ಸುಮಾರು ಗಂಟೆಗಳ ಶೋಧದ ನಂತರ ಇದೊಂದು ಹುಸಿ ಬಾಂಬ್ ಬೆದರಿಕೆ ಕರೆಯೆಂಬುದು ಸ್ಪಷ್ಟವಾಯಿತು. ಈ ಹಿನ್ನೆಲೆಯಲ್ಲಿ ಎಲ್ಲರೂ ನಿಟ್ಟಿಸಿರು ಬಿಟ್ಟರು.

ಕೆಲವು ತಿಂಗಳ ಹಿಂದೆಯೂ ಇದೇ ರೀತಿ ಹುಸಿ ಬಾಂಬ್ ಇ-ಮೇಲ್‌ಗಳು ಬಂದಿದ್ದವು. ಆಗಲೂ ಪೊಲೀಸ್ ಇಲಾಖೆ ಎಲ್ಲಾ ಅಧಿಕಾರಿ, ಸಿಬ್ಬಂದಿ ಇದೇ ರೀತಿ ಪರಿಶೀಲನೆ ನಡೆಸಿದ್ದರು. ಬಳಿಕ ಅದೊಂದು ಹುಸಿ ಬಾಂಬ್ ಬೆದರಿಕೆ ಎಂಬುದು ಗೊತ್ತಾಗಿತ್ತು. ಈ ಸಲವೂ ಇದು ಹುಸಿ ಬಾಂಬ್ ಕರೆ ಎಂಬುದು ಗೊತ್ತಾಯಿತು.

ದಾವಣಗೆರೆ, ಬಾಗಲಕೋಟೆ, ಚಿತ್ರದುರ್ಗ ಸೇರಿದಂತೆ ವಿವಿಧ ನ್ಯಾಯಾಲಯಗಳಿಗೆ ಹುಸಿ ಬಾಂಬ್ ಬೆದರಿಕೆಯ ಇ-ಮೇಲ್ ಹಾಕಲಾಗಿದೆ. 23 ಸೈನೈಡ್‌ ಬಾಂಬ್ ಸ್ಫೋಟಿಸುವುದಾಗಿ ಇ-ಮೇಲ್‌ನಲ್ಲಿ ಅಜ್ಞಾನ ವ್ಯಕ್ತಿ ಹಾಕಿದ್ದಾನೆ. ನ್ಯಾಯಾಲಯದಲ್ಲಿ ಟೈಮ್ ಬಾಂಬ್ ಇಟ್ಟಿದ್ದು, ಮಧ್ಯಾಹ್ನ 2 ಗಂಟೆಗೆ ಸ್ಫೋಟ ಆಗುತ್ತದೆಂಬುದಾಗಿ ಅಪರಿಚಿತ ವ್ಯಕ್ತಿ ಇ-ಮೇಲ್‌ನಲ್ಲಿ ಎಚ್ಚರಿಸಿದ್ದನು. 23 ಸೈನೈಡ್ ವಾಯು ಗುಂಡಿಗಳು ಸ್ಫೋಟವಾಗಲಿವೆ ಎಂದು ** karunanidhi.kundi@underworld.dog **ಎಂಬ ಐ.ಡಿ.ಯಿಂದ ಬಂದ ಇ-ಮೇಲ್‌ನಲ್ಲಿ ಉಲ್ಲೇಖಿಸಲಾಗಿದೆ. ** underworld.dog ** ನಕಲಿ ಡೊಮೇನ್‌ನಿಂದ ಇ-ಮೇಲ್ ಬಂದಿದ್ದರೂ, ಪೊಲೀಸರು ಅಲರ್ಟ್ ಆಗಿ, ಇಡೀ ನ್ಯಾಯಾಲಯವನ್ನು ತಪಾಸಣೆ ಮಾಡಿದರು. ಆದರೆ, ಯಾವುದೇ ಸ್ಫೋಟಕವಾಗಲೀ, ಟೈಂ ಬಾಂಬ್ ಆಗಲಿ ಪತ್ತೆಯಾಗಲಿಲ್ಲ.

ತಮಿಳುನಾಡು ಶಿವಗಂಗೆಯಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದ ಅಜಿತ್ ಕುಮಾರನ ಸಾವಿಗೆ ಪ್ರತೀಕಾರ ಎಂಬುದಾಗಿ ಹುಸಿ ಬಾಂಬ್ ಬೆದರಿಕೆಯ ಇ-ಮೇಲ್‌ನಲ್ಲಿ ಉಲ್ಲೇಖಿಸಲಾಗಿದೆ. ಉದಯನಿಧಿ ಎಂಬಾತನ ಉಪಪತ್ನಿ, ಮಗನ ಬಂಧನಕ್ಕೂ ಇ-ಮೇಲ್‌ನಲ್ಲಿ ಆಗ್ರಹಿಸಲಾಗಿದೆ. ನಿನ್ನೆ ನಡೆದಿದ್ದು ಪರೀಕ್ಷೆ, ಇಂದು ನಡೆಯುವುದು ನಿಜ ಎಂಬುದಾಗಿ ಅಪರಿಚಿತ ವ್ಯಕ್ತಿ ಇ-ಮೇಲ್‌ನಲ್ಲಿ ಬೆದರಿಕೆ ಹಾಕಿದ್ದನು. ಶುಕ್ರವಾರ ಬೆಳಗ್ಗೆ 7.47ಕ್ಕೆ ಏಕಕಾಲಕ್ಕೆ ರಾಜ್ಯದ ವಿವಿಧ ನ್ಯಾಯಾಲಯಗಳಿಗೆ ಮೇಲ್ ಬಂದಿದ್ದು, ಇಂತಹ ಹುಸಿ ಬಾಂಬ್ ಬೆದರಿಕೆ ಹಾಕಿ, ನ್ಯಾಯ ಕಲಾಪಕ್ಕೆ ಅಡ್ಡಿಪಡಿಸುವ, ನ್ಯಾಯಾಂಗದ ಬಹುಮೌಲ್ಯದ ಸಮಯವನ್ನು ವ್ಯರ್ಥ ಮಾಡಿಸುತ್ತಿರುವ ಕಿಡಿಗೇಡಿಗಳನ್ನು ಮಟ್ಟ ಹಾಕುವಂತೆ ವಕೀಲರು ಒತ್ತಾಯಿಸಿದ್ದಾರೆ.

- - -

(ಬಾಕ್ಸ್‌)

* ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮಕ್ಕೆ ವಕೀಲರ ಒತ್ತಾಯ ಇದೇ ವೇಳೆ ಸುದ್ದಿಗಾರರರೊಂದಿಗೆ ಮಾತನಾಡಿದ ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷ, ಹಿರಿಯ ವಕೀಲ ಎಲ್.ಎಚ್. ಅರುಣಕುಮಾರ, ದಾವಣಗೆರೆ ಜಿಲ್ಲಾ ನ್ಯಾಯಾಲಯಕ್ಕೆ ಹುಸಿ ಬಾಂಬ್ ಬೆದರಿಕೆ ಇ-ಮೇಲ್ ಬಂದಿದ್ದು ಖಂಡನೀಯ. ಪದೇಪದೇ ಹುಸಿ ಬಾಂಬ್ ಬೆದರಿಕೆ ಇ-ಮೇಲ್‌ಗಳನ್ನು ಕಳಿಸುತ್ತಿರುವ ಕಿಡಿಗೇಡಿಗಳನ್ನು ಪೊಲೀಸ್ ಇಲಾಖೆ ಪತ್ತೆ ಮಾಡಿ, ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಪದೇಪದೇ ಬೆದರಿಕೆ ಇ-ಮೇಲ್ ಬರುತ್ತಿದ್ದರೂ ನಮ್ಮ ನ್ಯಾಯಾಲಯದಲ್ಲಿ ಸಿಸಿ ಕ್ಯಾಮರಾ ಅಳವಡಿಸಿಲ್ಲ. ಸಿಸಿ ಕ್ಯಾಮರಾ ಅಳವಡಿಕೆಗೆ ಸರ್ಕಾರ, ನ್ಯಾಯಾಂಗ ಇಲಾಖೆ ಕ್ರಮ‌ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಹಿರಿಯ ವಕೀಲ ಪಿ.ಬಾಬು ಮಾತನಾಡಿ, ಹುಸಿ ಬಾಂಬ್ ಬೆದರಿಕೆ ಇ-ಮೇಲ್ ಮಾಡಿದವರ ವಿರುದ್ಧ ಕ್ರಮ ಜರುಗಿಸಬೇಕು. ಕಳೆದ ಬಾರಿಯೂ ಹುಸಿ ಬಾಂಬ್ ಬೆದರಿಕೆ ಇ-ಮೇಲ್ ಬಂದಿತ್ತು. ಹುಸಿ ಬೆದರಿಕೆ ಇದ್ದರೂ ನಿರ್ಲಕ್ಷ್ಯ ಮಾಡಲು ಆಗುವುದಿಲ್ಲ. ಹೀಗಾಗಿ ಕೇಂದ್ರ, ರಾಜ್ಯ ಗೃಹ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು. ಮತ್ತೆ ಬಾಂಬ್ ಬೆದರಿಕಯ ಇ-ಮೇಲ್ ಬಂದ ಕಾರಣಕ್ಕೆ ಶೋಧ ಕೈಗೊಂಡಿದ್ದಾರೆ. ಕಳೆದ ಸಲ ಪ್ರಕರಣದ ಆರೋಪಿ ಮೆಂಟಲ್ ಅಂತಾ ಕೈಬಿಟ್ಟರು. ವಕೀಲರು, ನ್ಯಾಯಾಧೀಶರು, ಕಕ್ಷಿದಾರರರಿಗೂ ಕಷ್ಟ. ಕೋರ್ಟ್‌ಗೆ ಬರುವುದಕ್ಕೆ ಜನ ಹಿಂದೇಟು ಹಾಕುತ್ತಾರೆ. ಅಂತಹದ್ದರಲ್ಲಿ ಹೀಗಾದರೆ ಒಳ್ಳೆಯ ಬೆಳವಣಿಗೆಯಲ್ಲ. ಉಗ್ರರು, ಹೊರಗಿನವರ ಹೀಗೆ ಮಾಡಿದ್ದು? ಯಾರು ಎಂಬುದನ್ನು ಪೊಲೀಸರು ಪತ್ತೆ ಮಾಡಿ, ಕಠಿಣ ಕ್ರಮ ಕೈಗೊಳ್ಳಲಿ ಎಂದು ಪಿ.ಬಾಬು ಆಗ್ರಹಿಸಿದ್ದಾರೆ.

- - -

-19ಕೆಡಿವಿಜಿ37, 38, 39

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಾಸಕರು ಅವರವರ ಆತ್ಮಸಾಕ್ಷಿಗೆ ಮತ ಚಲಾಯಿಸಿದ್ದಾರೆ
ಸೂಕ್ತ ಪರಿಷ್ಕರಣೆಯಿಂದ 14 ಲಕ್ಷ ಮತಗಳು ವಿಮರ್ಶೆಗೆ ಒಳಪಡುತ್ತದೆ: ಸಂಸದ ಕೋಟಾ ಶ್ರೀನಿವಾಸ ಪೂಜಾರಿ