ಕನ್ನಡಪ್ರಭ ವಾರ್ತೆ ಅಫಜಲ್ಪುರ
ಈಗಾಗಲೇ 2-3 ಬಾರಿ ಅಪಾರ ಪ್ರಮಾಣದ ನೀರು ಹರಿದು ಉಕ್ಕೇರಿದ್ದ ಭೀಮೆ ಇದೀಗ ಇನ್ನೊಂದು ಸುತ್ತಿನ ಭಾರಿ ಪ್ರಮಾಣದಲ್ಲಿ ನೀರನ್ನು ಹೊತ್ತು ಅಬ್ಬರಿಸಲು ಸಿದ್ಧವಾಗಿದೆ.
ಮಹಾರಾಷ್ಟ್ರದ ಭೀಮಾ ನದಿ ಪಾತ್ರದ ಪ್ರದೇಶದಲ್ಲಿ ಬೀಳುತ್ತಿರುವ ಭಾರಿ ಮಳೆಯಿಂದಾಗಿ ಉಜನಿ ಜಲಾಶಯದಿಂದ 1 ಲಕ್ಷ ಕ್ಯೂಸೆಕ್ ನೀರು ಹಾಗೂ ಶೀನಾ ನದಿಯಿಂದ 1.49 ಲಕ್ಷ ಕ್ಯುಸೆಕ್ ನೀರು ಹರಿದು ಬಿಡಲಾಗಿದ್ದು, ತಾಲೂಕಿನಲ್ಲಿ,ಭೀಮಾ ನದಿಗೆ ಸೇರುವ ಬೋರಿ ಹಳ್ಳಕ್ಕೂ ಕೂಡ ಅಪಾರ ಪ್ರಮಾಣದಲ್ಲಿ ನೀರು ಬಂದಿರುವುದರಿಂದ ನದಿ ದಂಡೆಯಲ್ಲಿರುವ ಗ್ರಾಮಸ್ಥರು ಮತ್ತೆ ಆತಂಕಕ್ಕೆ ಒಳಗಾಗಿದ್ದಾರೆ.ಉಜನಿ ಜಲಾಶಯ, ಶೀನಾ ನದಿಯಿಂದ ಭೀಮಾ ನದಿಗೆ ಬಿಟ್ಟಿರುವ ಲಕ್ಷಾಂತರ ಪ್ರಮಾಣದ ನೀರು ಸೋಮವಾರ ಬೆಳಿಗ್ಗೆ ತಾಲೂಕಿನ ಭೀಮಾ ನದಿಗೆ ಬಂದು ತಲುಪಲಿದೆ. ಈಗಾಗಲೇ ಎರಡು ಮೂರು ಬಾರಿ ಅಪಾರ ಪ್ರಮಾಣದ ನೀರು, ನದಿಯಲ್ಲಿ ಹರಿದು ನದಿ ಪಾತ್ರದಲ್ಲಿರುವ ಹಾಗೂ ತಗ್ಗು ಪ್ರದೇಶದಲ್ಲಿರುವ ಸಾವಿರಾರು ಎಕರೆ ಬೆಳೆಗಳು ನಾಶವಾಗಿ ಹೋಗಿದ್ದು ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ.
ಸೊನ್ನ ಬ್ಯಾರೇಜ್‌ಗೆ ಸಾವಿರ ಒಳ ಹರಿವು ಹೆಚ್ಚಾಗಿದೆ. ಹೊರಹರಿವಿನ ಪ್ರಮಾಣ ಜಾಸ್ತಿಯಾಗುವುದರಿಂದ ಬ್ಯಾರೇಜ್ ಕೆಳಗಡೆ ಇರುವ ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರಬೇಕು. ಜನ ಜಾನುವಾರು ನದಿ ಪಾತ್ರಕ್ಕೆ ತೆರಳದಂತೆ ಎಚ್ಚರಿಕೆ ವಹಿಸಬೇಕೆಂದು ಕೆಎನ್‌ಎನ್‌ಎಲ್ ಎಇಇ ಸಂತೋಷಕುಮಾರ ಸಜ್ಜನ ಹೇಳಿದ್ದಾರೆ.