ರಾಜ್ಯ ಸರ್ಕಾರದಿಂದ ರೈತ ವಿರೋಧಿ ನೀತಿ: ನಡಹಳ್ಳಿ ಆರೋಪ

KannadaprabhaNewsNetwork |  
Published : Feb 22, 2024, 01:46 AM IST
ಪತ್ರಿಕಾಗೋಷ್ಠಿ | Kannada Prabha

ಸಾರಾಂಶ

ರೈತರ ಮಕ್ಕಳಿಗಾಗಿ ಜಾರಿಗೆ ತಂದ ವಿದ್ಯಾಸಿರಿ ಸ್ಕಾಲರ್‌ಶಿಪ್ ಯೋಜನೆಗಳನ್ನು ಕಡಿತ ಮಾಡುವ ಮಾಡುವ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ರೈತವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ಬಿಜೆಪಿ ರಾಜ್ಯ ರೈತಮೋರ್ಚಾ ಅಧ್ಯಕ್ಷ ಹಾಗೂ ಮಾಜಿ ಶಾಸಕ ಎ.ಎಸ್. ನಡಹಳ್ಳಿ ಆರೋಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ತುಮಕೂರು

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ರೈತರಿಗಾಗಿ ಜಾರಿಗೆ ತಂದ ಪ್ರಧಾನಮಂತ್ರಿ ಕಿಸಾನ್ ಸನ್ಮಾನ್, ರೈತರ ಮಕ್ಕಳಿಗಾಗಿ ಜಾರಿಗೆ ತಂದ ವಿದ್ಯಾಸಿರಿ ಸ್ಕಾಲರ್‌ಶಿಪ್ ಯೋಜನೆಗಳನ್ನು ಕಡಿತ ಮಾಡುವ ಮಾಡುವ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ರೈತವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ಬಿಜೆಪಿ ರಾಜ್ಯ ರೈತಮೋರ್ಚಾ ಅಧ್ಯಕ್ಷ ಹಾಗೂ ಮಾಜಿ ಶಾಸಕ ಎ.ಎಸ್. ನಡಹಳ್ಳಿ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, 2008 ರಲ್ಲಿ ಮೊದಲ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹಸಿರು ಶಾಲು ಧರಿಸಿ ಪ್ರಮಾಣ ವಚನ ಸ್ವೀಕರಿಸಿದ್ದಲ್ಲದೆ, ಪ್ರತ್ಯೇಕ ರೈತ ಬಜೆಟ್ ಮಂಡಿಸಿದ್ದರು. ಆ ನಂತರ ಕೇಂದ್ರ ಸರ್ಕಾರದ ಪಿ.ಎಂ. ಕಿಸಾನ್ ಸನ್ಮಾನ ಯೋಜನೆಯ 6 ಸಾವಿರದ ಜೊತೆಗೆ, ರಾಜ್ಯ ಸರ್ಕಾರವೂ 4 ಸಾವಿರ ಸೇರಿಸಿ, ವಾರ್ಷಿಕ 10 ಸಾವಿರ ರು. ರೈತರ ಖಾತೆಗೆ ನೇರ ವರ್ಗಾವಣೆ ಯಾಗುವಂತೆ ಮಾಡಿದ್ದರು.

ಅತಿವೃಷ್ಟಿ, ಆನಾವೃಷ್ಟಿಯಂತಹ ಕಾಲದಲ್ಲಿ ಕೇಂದ್ರದ ಅನುದಾನಕ್ಕೆ ಕಾಯದೆ, ರಾಜ್ಯ ಸರ್ಕಾರವೇ ಎಕರೆಗೆ 10 ಸಾವಿರ ರು. ಪರಿಹಾರ ನೀಡಿತ್ತು. ಆದರೆ ಈಗ ರಾಜ್ಯ ಸರ್ಕಾರದ ಬಳಿ ಎಕರೆಗೆ 2 ಸಾವಿರ ರು. ಪರಿಹಾರ ನೀಡಲು ಹಣವಿಲ್ಲ. ರಾಜ್ಯದ ಖಜಾನೆ ಇವರ ವಿವೇಚನಾ ರಹಿತ ಗ್ಯಾರಂಟಿಗಳಿಂದ ಖಾಲಿಯಾಗಿದೆ ಎಂದು ದೂರಿದರು.

ರಾಜ್ಯದಲ್ಲಿ ಕೃಷಿಗೆ ಪೂರಕವಾದ ಹೈನುಗಾರಿಕೆಯಿಂದ ಜನರು ಬದುಕು ಕಟ್ಟಿಕೊಳ್ಳುವಂತೆ ಮಾಡುವ ಉದ್ದೇಶದಿಂದ ಪ್ರತಿ ಲೀಟರ್ ಹಾಲಿಗೆ 2 ರು. ಪ್ರೋತ್ಸಾಹಧನವನ್ನು ಬಿ.ಎಸ್.ಯಡಿಯೂರಪ್ಪ ಘೋಷಿಸಿದ್ದರು. 2018 ರಲ್ಲಿ ಅಧಿಕಾರಕ್ಕೆ ಬಂದಾಗ ಅದನ್ನು 5 ರು. ಗಳಿಗೆ ಹೆಚ್ಚಿಸಿದ್ದರು. ಆದರೆ ಇಂದಿನ ಸಿದ್ದರಾಮಯ್ಯ ಸರ್ಕಾರ ಕಳೆದ ಮೇ ನಿಂದಲೂ ರೈತರಿಗೆ ಹಾಲಿನ ಪ್ರೋತ್ಸಾಹಧನ ನೀಡಿಲ್ಲ. ಸುಮಾರು 715 ಕೋಟಿ ರು. ಹೈನುಗಾರಿಕೆಗೆ ನೀಡಬೇಕಾಗಿರುವ ಬಾಕಿ ಇದೆ. ವಿರೋಧಪಕ್ಷವಾದ ಬಿಜೆಪಿ ಹೋರಾಟ ಮಾಡಿದ ನಂತರ ಒಂದು ತಿಂಗಳ ಹಣವನ್ನು ಈಗ ಬಿಡುಗಡೆ ಮಾಡಿದ್ದಾರೆ ಎಂದರು.

ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ. ನಡ್ಡಾ ಅವರ ಆದೇಶದಂತೆ ಎಲ್ಲಾ ರಾಜ್ಯಗಳ ರೈತಮೋರ್ಚಾ ಪ್ರತಿನಿಧಿಗಳು ಪ್ರತಿ ಹಳ್ಳಿಗೂ ಭೇಟಿ ನೀಡಿ, ಕೇಂದ್ರ ಸರ್ಕಾರ ರೈತರಿಗಾಗಿ ಜಾರಿಗೆ ತಂದಿರುವ ಯೋಜನೆಗಳ ಮನವರಿಕೆ ಮಾಡಿಕೊಡುವುದರ ಜೊತೆಗೆ, ರಾಜ್ಯ ಸರ್ಕಾರದ ರೈತವಿರೋಧಿ ನೀತಿಗಳನ್ನು ಜನರಿಗೆ ತಿಳಿಸುವ ಕೆಲಸ ಮಾಡುತ್ತಿದೆ. ಇದರ ಅಂಗವಾಗಿ ೨೦೨೪ರ ಫೆ. ೧೨ ರಿಂದ ಗ್ರಾಮ ಪರಿಕ್ರಮ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಒಂದು ಕಾಲದಲ್ಲಿ ತುತ್ತು ಕೂಳಿಗೂ ವಿದೇಶಗಳತ್ತ, ಪಂಜಾಬ್, ಹರಿಯಾಣದತ್ತ ನೋಡಬೇಕಿದ್ದ ರಾಷ್ಟ್ರದಲ್ಲಿ, ಇಂದು ಇಡೀ ವಿಶ್ವದಲ್ಲಿಯೇ ೨ನೇ ಅತಿ ದೊಡ್ಡ ಆಹಾರ ಉತ್ಪಾದನಾ ರಾಷ್ಟ್ರ ಭಾರತವಾಗಿದೆ. ಕೆಲವೇ ವರ್ಷಗಳಲ್ಲಿ ಚೀನಾವನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೆ ಬರಲಿದೆ. ಇದಕ್ಕೆ ಪ್ರಧಾನಿ ನರೇಂದ್ರಮೋದಿ ಅವರ ರೈತ ಪರ ಯೋಜನೆಗಳ ಕಾರಣ ಎಂದು ಎ.ಎಸ್. ನಡಹಳ್ಳಿ ತಿಳಿಸಿದರು.

ಸುದ್ದಿಗೋಷ್ಠಿಗೂ ಮುನ್ನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಹಿರಿಯ ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಿ, ಶ್ರೀಸಿದ್ದಲಿಂಗಸ್ವಾಮಿಜಿ ಅವರ ಆಶೀರ್ವಾದ ಪಡೆದರು. ನಂತರ ತುಮಕೂರು ತಾಲೂಕು ಮಷಾಣಪುರ ಗ್ರಾಮಕ್ಕೆ ಭೇಟಿ ನೀಡಿ, ಅಲ್ಲಿನ ರೈತರೊಂದಿಗೆ ಸಂವಾಧ ನಡೆಸಿದರು.

ರೈತರ ಜಯಣ್ಣ ಅವರ ತೋಟದಲ್ಲಿ ನಡೆದ ಸಂವಾದದ ಈ ವೇಳೆ ಮಾತನಾಡಿದ ಬಿಜೆಪಿ ರಾಜ್ಯ ರೈತಮೋರ್ಚಾ ಉಪಾಧ್ಯಕ್ಷ ಬ್ಯಾಟರಂಗೇಗೌಡ, ರೈತರಿಗೆ ಕೇಂದ್ರ ಸರ್ಕಾರದ ಯೋಜನೆಗಳ ಮಾಹಿತಿ ನೀಡುವ ಸಲುವಾಗಿ ಕಳೆದ ಒಂದು ವಾರದಿಂದ ರಾಜ್ಯದಾದ್ಯಂತ ಗ್ರಾಮ ಪರಿಕ್ರಮ ಅಭಿಯಾನ ನಡೆಯುತ್ತಿದೆ. ಇಂದು ಮಶಾಣಪುರದ ಜಯಣ್ಣ ಅವರ ತೋಟದ ಮನೆಯಲ್ಲಿ ಕಾರ್ಯಕ್ರಮವನ್ನು ಜಿಲ್ಲಾಧ್ಯಕ್ಷ ರವಿಶಂಕರ್‌ ಹೆಬ್ಬಾಕ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಿದೆ. ಮಂಡ್ಯ ಜಿಲ್ಲೆ ಮುಗಿಸಿ, ತುಮಕೂರು ಜಿಲ್ಲೆಗೆ ಪ್ರವೇಶ ಮಾಡಿದ್ದೇವೆ. ಕಳೆದ ೧೦ ವರ್ಷಗಳಲ್ಲಿ ರೈತರಿಗೆ ನೀಡಿದ ಜಲಜೀವನ್ ಮೀಷನ್, ಕೃಷಿ ಸನ್ಮಾನ್ ಯೋಜನೆಗಳಿಂದ ಜನರಿಗೆ ಆಗಿರುವ ಅನುಕೂಲಗಳ ಬಗ್ಗೆ ಮಾಹಿತಿ ಪಡೆದು, ಹೊಸ ಯೋಜನೆಗಳ ಅಗತ್ಯತೆ ಕುರಿತಂತೆ ಸಂವಾದ ನಡೆಸುವುದು ಇದರ ಉದ್ದೇಶವಾಗಿದೆ. ರೈತರು, ಬಡವರು, ಮಹಿಳೆಯರನ್ನು ಮುಖ್ಯವಾಗಿಟ್ಟುಕೊಂಡು ಕೇಂದ್ರದ ನರೇಂದ್ರಮೋದಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್‌ ಹೆಬ್ಬಾಕ, ರೈತಮೋರ್ಚಾ ಪದಾಧಿಕಾರಿಗಳಾದ ಸತ್ಯಮಂಗಲ ಜಗದೀಶ್, ಮಾಧ್ಯಮ ಪ್ರಮುಖ ಟಿ.ಆರ್‌. ಸದಾಶಿವಯ್ಯ, ಸಹ ಪ್ರಮುಖ್ ಜೆ. ಜಗದೀಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

BOX

ಸಾಲ ಮಾಡಿ ಬಜೆಟ್ ಮಂಡಿಸುವಂತಹ ದುಸ್ಥಿತಿ

ರಾಜ್ಯದಲ್ಲಿ ವಿದ್ಯುತ್ ಸಮಸ್ಯೆಯೂ ತೀವ್ರವಾಗಿ ತಲೆದೊರಿದೆ. ಕನಿಷ್ಠ ದಿನಕ್ಕೆ 3 ಗಂಟೆಯಾದರೂ ತ್ರೀಪೇಸ್ ವಿದ್ಯುತ್ ನೀಡಲು ಸಾಧ್ಯವಾಗುತ್ತಿಲ್ಲ. ಇದರಿಂದ ತೋಟಗಾರಿಕಾ ಬೆಳೆಗಳು ಹಾಳಾಗಿದ್ದು, ರೈತರು ಪರಿತಪಿಸುತಿದ್ದಾರೆ. ಸಾಲ ಮಾಡಿ ಬಜೆಟ್ ಮಂಡಿಸುವಂತಹ ದುಸ್ಥಿತಿಗೆ ರಾಜ್ಯ ಸರ್ಕಾರ ಬಂದಿದೆ. 2023-24ರಲ್ಲಿ 85 ಸಾವಿರ ಕೋಟಿ ಹಾಗೂ 2024-25ರಲ್ಲಿ 1.5 ಕೋಟಿ ಸಾಲ ಮಾಡಿ ಸರ್ಕಾರ ಯೋಜನೆಗಳಿಗೆ ಖರ್ಚು ಮಾಡಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಲ್ಲ. ಸಾಲದ ರಾಮಯ್ಯ ಎಂದು ಎ.ಎಸ್. ನಡಹಳ್ಳಿ ಟೀಕಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋಗಿಲು ನಿರಾಶ್ರಿತರಿಗೆ 5ರ ನಂತರ ವಸತಿ ಭಾಗ್ಯ
ಹೊಸ ವರ್ಷಕ್ಕೆ ಶೇ.40 ಮದ್ಯ ಮಾರಾಟ ಹೆಚ್ಚಳ!