ಕನ್ನಡಪ್ರಭ ವಾರ್ತೆ ಹನೂರು
ಅರಣ್ಯ ರಕ್ಷಕ ಶಿವರಾಜ್ ಸಾಸಲವಾಡೆ, ಅರಣ್ಯ ವೀಕ್ಷಕರಾದ ಶಿವಲಿಂಗ ನಾಯ್ಕ ಮತ್ತು ಗಿರೀಶ್ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ.
ಘಟನೆ ಹಿನ್ನೆಲೆ:ಆಗಸ್ಟ್ 15ರ ಮುಂಜಾನೆ ಕಾವೇರಿ ವನ್ಯಜೀವಿಧಾಮದ ಹೊಳೆ ಮುರಿದಟ್ಟಿ ಅರಣ್ಯದ ಕರಿಕಲ್ಲು ಗುಡ್ಡದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಮರಿಯಮಂಗಲದ ಆಂಥೋಣಿಸ್ವಾಮಿ, ಜಗನಾಥ್ ದೊಡ್ಡಿಯ ಜಾನ್ ರೋಸ್ ಪೀಟರ್ ಮತ್ತು ಲಾಜರ್ ದೊಡ್ಡಿಯ ಡೇವಿಡ್ ಕುಮಾರ್ ಎಂಬುವವರು ಮೃತಪಟ್ಟಿದ್ದರು. ನಾಲ್ಕನೇ ವ್ಯಕ್ತಿ ಮಹಿಮಾದಾಸ್ ಪರಾರಿಯಾಗಿ ಬದುಕುಳಿದಿದ್ದರು.
ನಾಲ್ವರು ಕಾವೇರಿ ವನ್ಯಜೀವಿಧಾಮಕ್ಕೆ ಅಕ್ರಮವಾಗಿ ಪ್ರವೇಶಿಸಿ ಬೇಟೆಯಾಡಲು ಯತ್ನಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಆಧರಿಸಿ ಇಲಾಖೆಯ ಎರಡು ವಿಶೇಷ ತಂಡ ಗಸ್ತು ನಡೆಸುತ್ತಿತ್ತು. ಮುಂಜಾನೆ ನಾಲ್ವರನ್ನು ಗುರುತಿಸಿದ ಸಿಬ್ಬಂದಿ ಶರಣಾಗುವಂತೆ ಸೂಚಿಸಿದಾಗ, ಬೇಟೆಗಾರರು ಮೊದಲು ಸಿಬ್ಬಂದಿ ಮೇಲೆ ಗುಂಡು ಹಾರಿಸಿದ್ದಾರೆ. ಆತ್ಮರಕ್ಷಣೆಗಾಗಿ ತಾವು ಪ್ರತಿದಾಳಿ ನಡೆಸಬೇಕಾಯಿತು ಎಂದು ಅರಣ್ಯ ಇಲಾಖೆ ಸರ್ಕಾರಕ್ಕೆ ವರದಿ ಸಲ್ಲಿಸಿದೆ.
ಮೃತರ ಕುಟುಂಬಸ್ಥರು ಮತ್ತು ಬದುಕುಳಿದ ಮಹಿಮಾದಾಸ್, ಕಾಣೆಯಾಗಿದ್ದ ಹಸು ಹುಡುಕಲು ಅರಣ್ಯಕ್ಕೆ ತೆರಳಿ ಮಲಗಿದ್ದಾಗ ಏಕಾಏಕಿ ಗುಂಡು ಹಾರಿಸಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಮೃತ ಆಂಥೋಣಿಸ್ವಾಮಿ ಪತ್ನಿ ಲೂರ್ದಾ ಮೇರಿ ಅವರು ಹನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಘಟನೆ ಸಂಬಂಧ ಸರ್ಕಾರ ಮೊದಲು ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿತ್ತು. ಬಳಿಕ ಪ್ರಕರಣದ ಸಮಗ್ರ ತನಿಖೆಯನ್ನು ಸಿಐಡಿಗೆ ವಹಿಸಿದೆ. ಸಿಐಡಿ ಎಸ್‌ಪಿ ಉಮಾ ಪ್ರಶಾಂತ್ ನೇತೃತ್ವದಲ್ಲಿ, ಡಿವೈಎಸ್‌ಪಿಗಳಾದ ಮೇರಿ ಶೈಲಜಾ ಮತ್ತು ವೈ.ಎಸ್. ಜಹಗಿರ್ದಾರ್, ನಾಲ್ವರು ಇನ್‌ಸ್ಪೆಕ್ಟರ್‌ಗಳು ಸೇರಿ ನಾಲ್ಕು ತಂಡಗಳು ಕಳೆದ 10 ದಿನಗಳಿಂದ ತನಿಖೆ ನಡೆಸುತ್ತಿವೆ.
ಕಳೆದ ವಾರ ಸಿಐಡಿ ಎಸ್‌ಪಿ ಉಮಾ ಪ್ರಶಾಂತ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮರುಪರಿಶೀಲನೆ ನಡೆಸಿದ್ದು, ಮೃತಪಟ್ಟವರ ಕುಟುಂಬಸ್ಥರು ಹಾಗೂ ಬದುಕುಳಿದ ಮಹಿಮಾದಾಸ್ ಅವರಿಂದಲೂ ಮಾಹಿತಿ ಸಂಗ್ರಹಿಸಿದ್ದಾರೆ.
ಜಾಮೀನು ಮಂಜೂರಾದ ಬೆನ್ನಲ್ಲೇ ಮೃತರ ಕುಟುಂಬಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಮೂವರನ್ನು ಗುಂಡಿಟ್ಟು ಬಲಿ ಪಡೆದಿದ್ದಾರೆ, ನಮಗೆ ನ್ಯಾಯ ಸಿಗುತ್ತದೆ ಎಂದು ಆಶಾಭಾವನೆಯಿಂದ ಇದ್ದೇವೆ. ಆದರೆ ಅರಣ್ಯ ಸಿಬ್ಬಂದಿಗೆ ಜಾಮೀನು ನೀಡಿರುವುದು ನಮಗೆ ಭಾರಿ ದುಃಖ ತಂದಿದೆ. ನಮಗೆ ನ್ಯಾಯ ಬೇಕು ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ಆಗಬೇಕು . ಈ ಸಂಬಂಧ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಹೋರಾಟ ಮಾಡಲು ಸಿದ್ಧರಿದ್ದೇವೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.