ಬಸ್ ನಿಲ್ದಾಣದಲ್ಲಿ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಮನವಿ

KannadaprabhaNewsNetwork |  
Published : Jan 08, 2025, 12:15 AM IST
ಪೋಟೊ-೭ ಎಸ್.ಎಚ್.ಟಿ. ೨ಕೆ- ಶಿರಹಟ್ಟಿ ಬಸ್ ನಿಲ್ದಾಣದಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಿಕೊಡುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ವತಿಯಿಂದ ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಪ್ರಯಾಣಿಕರಿಗೆ ಅಗತ್ಯ ಸೌಕರ್ಯ ಕಲ್ಪಿಸಲು ಸ್ಥಳೀಯ ಆಡಳಿತ ಹಾಗೂ ಸಾರಿಗೆ ಇಲಾಖೆ ನಿರ್ಲಕ್ಷ್ಯ ವಹಿಸಿದೆ

ಶಿರಹಟ್ಟಿ: ಶಿರಹಟ್ಟಿ ರಾಜ್ಯದಲ್ಲಿಯೇ ಅತ್ಯಂತ ಹಿಂದುಳಿ ತಾಲೂಕು ಎಂಬ ಹಣೆಪಟ್ಟಿ ಹೊತ್ತಿದ್ದು, ಆಳುವ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಪಟ್ಟಣದ ಬಸ್ ನಿಲ್ದಾಣದಲ್ಲಿ ಯಾವುದೇ ಮೂಲಭೂತ ಸೌಲಭ್ಯವಿಲ್ಲದೆ ಪ್ರಯಾಣಿಕರು ಪರದಾಡುವಂತಾಗಿದ್ದು, ಕೂಡಲೇ ಸಾರಿಗೆ ಇಲಾಖೆ ಅಧಿಕಾರಿಗಳು ಸೌಲಭ್ಯ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿ ಕರವೇ ಸ್ವಾಭಿಮಾನಿ ಸೇನೆಯಿಂದ ಮಂಗಳವಾರ ಮನವಿ ಸಲ್ಲಿಸಲಾಯಿತು.

ಸಂಘಟನೆಯ ತಾಲೂಕು ಕಾರ್ಯಾಧ್ಯಕ್ಷ ದೇವೇಂದ್ರ ಶಿಂಧೆ ಮಾತನಾಡಿ, ಸುಮಾರು ನಾಲ್ಕು ದಶಕಗಳ ಹಿಂದೆ ಅಂದಿನ ಅಗತ್ಯಕ್ಕೆ ತಕ್ಕಂತೆ ನಿರ್ಮಾಣಗೊಂಡಿರುವ ಇಲ್ಲಿನ ಬಸ್ ನಿಲ್ದಾಣ ಯಾವುದೇ ಬದಲಾವಣೆ ಕಾಣದೇ ಅದೇ ಸ್ಥಿತಿಯಲ್ಲಿದೆ. ಪ್ರಯಾಣಿಕರಿಗೆ ಅಗತ್ಯ ಸೌಕರ್ಯ ಕಲ್ಪಿಸಲು ಸ್ಥಳೀಯ ಆಡಳಿತ ಹಾಗೂ ಸಾರಿಗೆ ಇಲಾಖೆ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದರು.

ಬಸ್ ನಿಲ್ದಾಣದಲ್ಲಿ ಇರಬೇಕಾದ ಕನಿಷ್ಠ ಸೌಕರ್ಯವೂ ಇಲ್ಲದೆ ಜನ ಪರದಾಡುವಂತಾಗಿದೆ. ಇದು ತಾಲೂಕು ಕೇಂದ್ರದ ಬಸ್ ನಿಲ್ದಾಣವೇ ಎಂಬ ಪ್ರಶ್ನೆ ಇಲ್ಲಿಗೆ ಬರುವ ಪ್ರಯಾಣಿಕರನ್ನು ಕಾಡುತ್ತಿದ್ದು, ಜನಸಂಖ್ಯೆಗೆ ಅನುಗುಣವಾಗಿ ವಾಹನಗಳ ಸಂಖ್ಯೆ ಕೂಡ ಇಲ್ಲ. ಬಸ್ ಡಿಪೋ ಆದ ಮೇಲೂ ಅಗತ್ಯಕ್ಕೆ ಅನುಗುಣವಾಗಿ ಬಸ್‌ಗಳು ಓಡುತ್ತಿಲ್ಲ. ನಾಲ್ಕು ದಶಕಗಳ ಹಿಂದಿನ ವ್ಯವಸ್ಥೆಗೆ ಪೂರಕವಾಗಿದ್ದ ಬಸ್ ನಿಲ್ದಾಣದಲ್ಲಿ ಇಂದು ಕೊರತೆಗಳ ಪರ್ವತವೇ ಎದ್ದು ನಿಂತಿದೆ ಎಂದು ದೂರಿದರು.

ಸಧ್ಯದ ಸ್ಥಿತಿಯಲ್ಲಿ ಓಡುತ್ತಿರುವ ಬಸ್‌ಗಳ ಸಂಖ್ಯೆ ಮತ್ತು ಅದಕ್ಕೆ ತಕ್ಕಂತೆ ಪ್ರಯಾಣಿಕರ ಸಂಖ್ಯೆಗೆ ಅಗತ್ಯವಿರುವಷ್ಟು ಸೌಕರ್ಯ ಇಲ್ಲಿ ಇಲ್ಲ. ಬಸ್ ನಿಲ್ದಾಣದಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುವಂತೆ ಜನ ಎಷ್ಟೇ ಮನವಿ ಸಲ್ಲಿಸಿದರೂ ಸಂಬಂಧಪಟ್ಟ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ. ಇನ್ನಾದರೂ ಇಲಾಖೆ ಅಧಿಕಾರಿಗಳು ಶೀಘ್ರ ಗಮನ ಹರಿಸಿ ಬಸ್ ನಿಲ್ದಾಣದಲ್ಲಿ ಎಲ್ಲ ರೀತಿಯ ಮೂಲಭೂತ ಸೌಕರ್ಯ ಕಲ್ಪಿಸಿ ಜನತೆಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ತಾಲೂಕು ಕೇಂದ್ರವು ಬಹಳ ವರ್ಷಗಳಿಂದಲೂ ಅನ್ಯಾಯಕ್ಕೆ ಒಳಗಾಗುತ್ತಲೇ ಬಂದಿದೆ. ಹಲವಾರು ಬಾರಿ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಸಹ ಬಸ್ ನಿಲ್ದಾಣದಲ್ಲಿ ಅವಶ್ಯಕವಿರುವಂತಹ ಮೂಲ ಸೌಲಭ್ಯ ಕಲ್ಪಿಸಿಲ್ಲ. ಆದ್ದರಿಂದ ಬೇಡಿಕೆ ೨೧ ದಿನದಲ್ಲಿ ಈಡೇರಿಸದೇ ಇದ್ದರೆ ಬಸ್ ನಿಲ್ದಾಣದಲ್ಲಿ ಅನಿರ್ದಿಷ್ಟಾವಧಿ ಬಸ್ ತಟೆ ಚಳವಳಿ ಮಾಡಲಾಗುವುದು ಎಂದು ಎಚ್ಚರಿಸಿದರು.

ಸಂಘಟನೆಯ ನಗರ ಘಟಕದ ಅಧ್ಯಕ್ಷ ಬುಡ್ಡೇಸಾಬ, ಪ್ರಧಾನ ಕಾರ್ಯದರ್ಶಿ ಇಮ್ರಾನ್ ಬಾವಿಕಟ್ಟಿ, ಕಾರ್ಯಾಧ್ಯಕ್ಷ ಫಾರುಕ್ ಢಾಲಾಯತ, ತೋಶಿಫ್ ಸೇರಿದಂತೆ ಅನೇಕರು ಮನವಿ ನೀಡುವಲ್ಲಿ ಇದ್ದರು. ನಂತರ ಸಾರಿಗೆ ಇಲಾಖೆ ಅಧಿಕಾರಿಗೆ ಲಿಖಿತ ಮನವಿ ಸಲ್ಲಿಸಿದರು.ಬೇಡಿಕೆಗಳು

ಸರಿಯಾದ ಶುದ್ದ ನೀರಿನ ಘಟಕ ಸ್ಥಾಪನೆ, ಕಂಪ್ಯೂಟರೀಕೃತ ಧ್ವನಿವರ್ಧಕ ಅಳವಡಿಕೆ, ಬಸ್ ನಿಲ್ದಾಣದಲ್ಲಿ ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದು, ಸರಿಯಾದ ರೀತಿಯಲ್ಲಿ ಶೌಚಾಲಯ ನಿರ್ವಹಣೆಗೆ ಆದ್ಯತೆ, ರಕ್ಷಣೆ ಹಾಗೂ ಭದ್ರತೆ ದೃಷ್ಟಿಯಿಂದ ನಿಲ್ದಾಣದಲ್ಲಿ ಸಿಸಿ ಕ್ಯಾಮೇರಾ ಅಳವಡಿಕೆ, ಶಿರಹಟ್ಟಿ ಘಟಕದಿಂದ ರಾತ್ರಿ ೮-೩೦ರಿಂದ ಹುಬ್ಬಳ್ಳಿಗೆ ಬಸ್ ವ್ಯವಸ್ಥೆ ಮಾಡುವುದು, ನಿಲ್ದಾಣದಲ್ಲಿ ಸಮರ್ಪಕ ಹೋಟೆಲ್ ವ್ಯವಸ್ಥೆಗೆ ಆದ್ಯತೆ ನೀಡಬೇಕು. ಈ ಎಲ್ಲ ಬೇಡಿಕೆ ಈಡೇರಿಸದಿದ್ದರೆ ಸಂಘಟನೆ ವತಿಯಿಂದ ಹೋರಾಟಕ್ಕೆ ಇಳಿಯುವುದಾಗಿ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೆದುಳಿನ ಅಸ್ವಸ್ಥತೆ ಆರಂಭದಲ್ಲೇ ಪತ್ತೆ ಹಚ್ಚಿ: ಡಾ. ರಾಜೇಂದ್ರ
ಪಂ. ಶ್ರೀಪಾದ ಹೆಗಡೆ ಕಂಪ್ಲಿಗೆ ಸ್ವರಗಂಧರ್ವ ಪ್ರಶಸ್ತಿ