ಅನಧಿಕೃತ ವಧಾಲಯ ತೆರವು ಮಾಡಲು ಬ್ಯಾಡಗಿಯಲ್ಲಿ ಶಿವಶರಣ ಹರಳಯ್ಯ ಸಮಾಜದಿಂದ ಮನವಿ

KannadaprabhaNewsNetwork |  
Published : Aug 05, 2025, 01:30 AM IST
ಮ | Kannada Prabha

ಸಾರಾಂಶ

ದುರ್ವಾಸನೆಯಿಂದ ದೇವಸ್ಥಾನಕ್ಕೆ ಆಗಮಿಸುವ ಭಕ್ತರು ಮೂಗಿಗೆ ಬಟ್ಟೆ ಕಟ್ಟಿ ಕೊಂಡು ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಕಡಿವಾಣ ಹಾಕದಿದ್ದಲ್ಲಿ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು.

ಬ್ಯಾಡಗಿ: ಪಟ್ಟಣದಲ್ಲಿನ ಉಚ್ಚೆಂಗಮ್ಮ ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿಯೇ ಕಾನೂನು ಉಲ್ಲಂಘಿಸಿ ಜಾನುವಾರುಗಳನ್ನು ಕಡಿದು ಮಾಂಸ ಮಾರಾಟ ಮಾಡಲಾಗುತ್ತಿದ್ದು, ಕೂಡಲೇ ಕಡಿವಾಣ ಹಾಕಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಿವಶರಣ ಹರಳಯ್ಯ ಸಮಾಜ ಸದಸ್ಯರು ಪುರಸಭೆ ಮುಖ್ಯಾಧಿಕಾರಿಗೆ ಸೋಮವಾರ ಮನವಿ ಸಲ್ಲಿಸಿದರು.ಈ ವೇಳೆ ಸಮಾಜದ ಮುಖಂಡ ಮಾರುತಿ ಹಂಜಗಿ, ರಾಜ್ಯದಲ್ಲಿ ಗೋಹತ್ಯೆ ನಿಷೇಧವಾಗಿದೆ. ಇದು ಪಟ್ಟಣಕ್ಕೂ ಅನ್ವಯವಾಗುತ್ತದೆ. ಪಟ್ಟಣದಲ್ಲಿ ಈ ಕುರಿತಂತೆ ಹಲವು ಪ್ರತಿಭಟನೆ ಆದಾಗ ಪಟ್ಟಣದ ಹೊರವಲಯದಲ್ಲಿ ಎಲ್ಲ ಸೌಲಭ್ಯಗಳನ್ನು ಕಲ್ಪಿಸಿ ವಧಾಲಯ(ಸ್ಲಾಟರ್ ಹೌಸ್) ನಿರ್ಮಿಸಿಕೊಡಲಾಗಿತ್ತು. ಆದರೆ ಈ ಜಾಗದಲ್ಲಿ ಜಾನುವಾರು ವಧೆ ಮಾಡದೇ ಪಟ್ಟಣದ ನಿಯಮಗಳನ್ನು ಗಾಳಿಗೆ ತೂರಿರುವ ಕೆಲವರು ಪಟ್ಟಣದ ಮಧ್ಯಭಾಗದಲ್ಲಿಯೇ ದನಗಳನ್ನು ಕಡಿದು ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕಿದ್ದ ಪುರಸಭೆ ಅಧಿಕಾರಿಗಳು ಗೊತ್ತಿದ್ದು ಜಾಣಕುಡುಡು ಪ್ರದರ್ಶಿಸುತ್ತಿದ್ದಾರೆ. ಸಾರ್ವಜನಿಕರಿಗೆ ತೊಂದರೆಯಾದರೂ ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದು ಸುಮ್ಮನೆ ಕೈಕಟ್ಟಿ ಕುಳಿತಿದ್ದಿರಿ ಎಂದು ಆರೋಪಿಸಿದರು.ಮಂಜುನಾಥ ಗದಗಕರ ಮಾತನಾಡಿ, ಇದೀಗ ಶ್ರಾವಣ ಮಾಸ ನಡೆಯುತ್ತಿದೆ. ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮದ ಜನರು ಬ್ಯಾಡಗಿ ಕದರಮಂಡಲಗಿ ರಸ್ತೆ ಬಳಸಿ ಪಾದಯಾತ್ರೆ ನಡೆಸುತ್ತಾರೆ. ಆದರೆ ಬೆಳ್ಳಂಬೆಳಿಗ್ಗೆ ಸಾರ್ವಜನಿಕರಿಗೆ ಕಾಣುವಂತೆ ದನ ಕಡಿಯುವುದು ಎಗ್ಗಿಲ್ಲದೇ ಸಾಗಿದೆ. ಇದರಿಂದ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗುತ್ತಿದೆ. ಅಲ್ಲದೇ ಮಾತಾ ಉಚ್ಚಂಗಿ ದೇವಸ್ಥಾನಕ್ಕೆ ಬರುವಂತ ಭಕ್ತಾದಿಗಳು ಸೇರಿದಂತೆ ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಬಹಳ ತೊಂದರೆ ಉಂಟಾಗುತ್ತಿದೆ.

ದುರ್ವಾಸನೆಯಿಂದ ದೇವಸ್ಥಾನಕ್ಕೆ ಆಗಮಿಸುವ ಭಕ್ತರು ಮೂಗಿಗೆ ಬಟ್ಟೆ ಕಟ್ಟಿ ಕೊಂಡು ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಕಡಿವಾಣ ಹಾಕದಿದ್ದಲ್ಲಿ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.ನ್ಯಾಯವಾದಿ ಮಂಜುನಾಥ ಹಂಜಿಗಿ, ಚಂದ್ರಶೇಖರ ಗದಗಕರ, ರಾಜು ಪಂಡರಾಪುರ, ಚಮನಪ್ಪ ಅರಿಕೇರಿ, ಬುದ್ಧಿವಂತ ಹಂಜಗಿ, ಶ್ರೀಮಂತ ಬಾಗಲಕೋಟೆ, ಹನುಮಂತ ಹಂಜಗಿ, ಸುಭಾಸ್ ಹಂಜಗಿ, ಅಪ್ಪು ಬಾಗಲಕೋಟ, ಈಶ್ವರ್ ಗದಗಕರ, ಶಿವಪುತ್ರಪ್ಪ ಬೆಟಗೇರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ