ಕನ್ನಡಪ್ರಭ ವಾರ್ತೆ ಕೋಲಾರಜಾಗೃತಿ ಸಮಿತಿಯ ನಿಯಮ ಉಲ್ಲಂಘಿಸಿ ಕಾನೂನು ಬಾಹಿರವಾಗಿ ಆಯ್ಕೆ ಮಾಡಿರುವ ಜಾಗೃತಿ ಸಮಿತಿ ಕೂಡಲೇ ವಜಾಗೊಳಿಸಿ ಕಾನೂನಿನ ಪ್ರಕಾರ ಹೊಸದಾಗಿ ಜಾಗೃತಿ ಸಮಿತಿ ಆಯ್ಕೆ ಮಾಡಬೇಕು, ಸಮಾಜ ಕಲ್ಯಾಣ ಇಲಾಖೆಯ ಜೆಡಿ ಶ್ರೀನಿವಾಸನ್ ನಿಯೋಜನೆ ರದ್ದು ಮಾಡಿ, ನಿಷ್ಠಾವಂತ ಅಧಿಕಾರಿಯನ್ನು ಇಲಾಖೆಗೆ ನೇಮಕ ಮಾಡುವಂತೆ ಒತ್ತಾಯಿಸಿ ದಲಿತ ಸಂಘಟನೆಗಳ ಸಂಯುಕ್ತ ರಂಗದಿಂದ ಮಂಗಳವಾರ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಪುರುಷೋತ್ತಮ್‌ರ ಮೂಲಕ ಆಯುಕ್ತರಿಗೆ ಮನವಿ ಸಲ್ಲಿಸಿದರು.ದಲಿತ ಸಂಘಟನೆಗಳ ಸಂಯುಕ್ತ ರಂಗ ಅಧ್ಯಕ್ಷ ಡಿಪಿಎಸ್ ಮನಿರಾಜು ಮಾತನಾಡಿ, ಹೊಸದಾಗಿ ಆಯ್ಕೆ ಮಾಡಿರುವ ಜಿಲ್ಲಾ ಜಾಗೃತಿ ಸಮಿತಿ ಆಯ್ಕೆ ಮಾಡಲು ಹಲವಾರು ನಿಬಂಧನೆಗಳು ಇವೆ. ಅರ್ಜಿಗಳನ್ನು ಹಾಕಲು ಎಲ್ಲಾ ದಲಿತಪರ ಸಂಘ ಸಂಸ್ಥೆಗಳು ಮತ್ತು ಸಮುದಾಯದ ಸೇವಕರಿಗೆ ಅವಕಾಶ ನೀಡಬೇಕು, ಅರ್ಜಿ ಹಾಕಲು ಮೊದಲೇ ಪ್ರಚಾರಗೊಳಿಸಬೇಕು ನಂತರ ಸಮುದಾಯದ ಬಡವರ ಪರವಾಗಿ ಯಾರು ಸೇವೆಗಳನ್ನು ಸಲ್ಲಿಸಿರುತ್ತಾರೆ. ಅವರಿಗೆ ಮೊದಲ ಆದ್ಯತೆ ನೀಡಬೇಕು ಎಂದು ಮನವರಿಕೆ ಮಾಡಿಕೊಟ್ಟರು.ಸಮಿತಿ ರಚನೆ ಮಾಡಲು ಸಮಾಜ ಕಲ್ಯಾಣ ಇಲಾಖೆಯ ಜೆಡಿ ಶ್ರೀನಿವಾಸನ್ ನಿಯಮ ಉಲ್ಲಂಘನೆ ಮಾಡಿ ಈತನಿಗೆ ಬೇಕಾದವರಿಂದ ಎಷ್ಟು ಅರ್ಜಿಗಳು ಬೇಕೋ ಅಷ್ಟೇ ಅರ್ಜಿಗಳನ್ನು ಮಾತ್ರ ಪಡೆದುಕೊಂಡಿದ್ದಾರೆ. ಹಿಂದಿನ ವರ್ಷಗಳಲ್ಲಿ ಈ ರೀತಿ ಸಮಿತಿಗೆ ಅರ್ಜಿಗಳನ್ನು ಕರೆದಾಗ ನೂರಾರು ಅರ್ಜಿಗಳನ್ನು ಸಲ್ಲಿಸಿರುವುದು ಕೂಡ ದಾಖಲೆಗಳಲ್ಲಿ ಇದೆ ಆದರೆ ಏಕಾಏಕಿ ಆಯಾ ಶಾಸಕರ ಶಿಫಾರಸು ಪತ್ರಗಳನ್ನು ಪಡೆದುಕೊಂಡು ಭ್ರಷ್ಟ ಅಧಿಕಾರಿ ಶ್ರೀನಿವಾಸನ್ ರಾಜಕೀಯ ಏಜೆಂಟರಿಗೆ ಹಾಗೂ ಸಮುದಾಯದ ಬಗ್ಗೆ ಯಾವುದೇ ಅರಿವು ಇಲ್ಲದಂತಹವರನ್ನು ಕಾನೂನು ಬಾಹಿರವಾಗಿ ಜಾಗೃತಿ ಸಮಿತಿಗೆ ಆಯ್ಕೆ ಮಾಡಿದ್ದಾರೆ ಎಂದು ಆರೋಪಿಸಿದರು.ದಮನಿತರ ಸೇವಾ ಸಮಿತಿ ರಾಜ್ಯ ಅಧ್ಯಕ್ಷ ಮೇಡಿಹಾಳ ಮುನಿಅಂಜಿನಪ್ಪ ಮಾತನಾಡಿ, ಜಾಗೃತಿ ಸಮಿತಿ ಕೂಡಲೇ ವಜಾಗೊಳಿಸಿ ನಿಯಮಗಳ ಪ್ರಕಾರ ಹೊಸದಾಗಿ ನೇಮಕ ಮಾಡಬೇಕು ಮತ್ತು ತೋಟಗಾರಿಕೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದವರನ್ನು ಸಮಾಜ ಕಲ್ಯಾಣ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿ ನಿಯೋಜನೆಗೊಂಡಾಗಿನಿಂದ ಹಲವು ಅಕ್ರಮಗಳಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದರು.ದಲಿತ ಸಂಘಟನೆಗಳ ಮುಖಂಡರಾದ ದಲಿತ್ ನಾರಾಯಣಸ್ವಾಮಿ, ಮೋಚಿಪಾಳ್ಳ ನಾಗೇಶ್, ಅಂಬೇಡ್ಕರ್ ನಗರ ಮಂಜು, ಮತ್ತಿಕುಂಟೆ ಕೃಷ್ಣಪ್ಪ, ಹರಳಕುಂಟೆ ರಾಜು, ಮಹಿಳಾ ಘಟಕದ ಗಿರಿಜಾ ಇದ್ದರು.