ಕೊಪ್ಪಳಕ್ಕೆ ಹೆಚ್ಚಿನ ಅನುದಾನಕ್ಕೆ ಸಿಎಂಗೆ ಮನವಿ

KannadaprabhaNewsNetwork |  
Published : Jun 15, 2024, 01:07 AM IST
14ಕೆಪಿಎಲ್29 ಬೆಂಗಳೂರಿನಲ್ಲಿ ಸಿ.ಎಂ. ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಕಲ್ಯಾಣಕರ್ನಾಟಕ ಅಭಿವೃದ್ಧಿ ನಿಗಮದ ಪರಿಶೀಲನೆ ನಡೆಸಲಾಯಿತು. | Kannada Prabha

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ಶುಕ್ರವಾರ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ವ್ಯಾಪ್ತಿಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಜಿಲ್ಲೆಯ ಪ್ರತಿನಿಧಿಗಳು ಕೊಪ್ಪಳಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಮನವಿ ಮಾಡಿದ್ದಾರೆ.

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ವ್ಯಾಪ್ತಿಯ ಪ್ರಗತಿ ಪರಿಶೀಲನೆ ಸಭೆ

ಕನ್ನಡಪ್ರಭ ವಾರ್ತೆ ಕೊಪ್ಪಳ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ಶುಕ್ರವಾರ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ವ್ಯಾಪ್ತಿಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಜಿಲ್ಲೆಯ ಪ್ರತಿನಿಧಿಗಳು ಕೊಪ್ಪಳಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಮನವಿ ಮಾಡಿದ್ದಾರೆ.

ಸಭೆಯಲ್ಲಿ ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ಸಚಿವ ಶಿವರಾಜ್ ಎಸ್.ತಂಗಡಗಿ, ವಿಷಯ ಪ್ರಸ್ತಾಪ ಮಾಡಿ, ಕೇವಲ ಕಲಬುರಗಿಗೆ ಹೆಚ್ಚು ಅನುದಾನ ನೀಡಲಾಗುತ್ತದೆ. ಕೊಪ್ಪಳ ಜಿಲ್ಲೆಯಲ್ಲಿ ಸಾಕಷ್ಟು ಕಾಮಗಾರಿಗಳು ಆಗಬೇಕಾಗಿರುವುದರಿಂದ ಹೆಚ್ಚಿನ ಅನುದಾನ ನೀಡುವಂತೆ ಕೋರಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ ಎಲ್ಲ ಜಿಲ್ಲೆಗಳಿಗೂ ಆದ್ಯತೆ ಮೇಲೆ ಅನುದಾನ ನೀಡಿ ಎಂದರು.

ಪ್ರತ್ಯೇಕ ಸ್ಥಾನಮಾನ ನೀಡಿ, ಅಭಿವೃದ್ಧಿಗೆ ಆದ್ಯತೆ ನೀಡಿದ್ದರೂ ಸಹ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳು ಅಭಿವೃದ್ಧಿ ಸೂಚ್ಯಂಕದಲ್ಲಿ ಹಿಂದೆಯೇ ಇವೆ. ಅದರಲ್ಲೂ ಕಲಬುರಗಿಯೇ 30 ಸ್ಥಾನದಲ್ಲಿ ಇರುವುದು ಯಾಕೆ ಎಂದು ಸಿಎಂ ಪ್ರಶ್ನೆ ಮಾಡಿದರು. ಅನುದಾನ ಬಳಕೆಗೆ ಸಮಸ್ಯೆಯಾಗಿರುವುದಾದರೂ ಎಲ್ಲಿ ಎಂದು ಪ್ರಶ್ನೆ ಮಾಡಿದಾಗ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ನಿಗಮದ ಕಾರ್ಯದರ್ಶಿ ನೀತಿ ಸಂಹಿತೆಯಿಂದಾಗಿ ಸಮಸ್ಯೆಯಾಗಿತ್ತು. ಈಗ ತ್ವರಿತವಾಗಿ ಮಾಡಲಾಗುವುದು ಎಂದರು.

ಇದಕ್ಕಿಂತ ಹೆಚ್ಚಾಗಿ ನಮ್ಮ ಸರ್ಕಾರ ಬಂದ ಮೇಲೆ ಕಲ್ಯಾಣ ಕರ್ನಾಟಕ ಭಾಗಕ್ಕೆ ನೀಡಿರುವ ಅನುದಾನ ಇನ್ನು ಪೂರ್ಣ ಬಳಕೆಯಾಗಿಲ್ಲ. ಹೀಗಾಗಿ, ಕೂಡಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ, ಜುಲೈ ವೇಳೆಗೆ ಬಳಕೆ ಮಾಡಿ ಎಂದು ಸಿಎಂ ಸೂಚಿಸಿದ್ದಾರೆ.

ಡಾ. ಶರಣಪ್ರಕಾಶ್‌ ಪಾಟೀಲ, ರಹೀಂ ಖಾನ್, ಈಶ್ವರ್ ಖಂಡ್ರೆ, ಜಮೀರ್ ಅಹಮದ್ ಖಾನ್, ಶರಣಬಸಪ್ಪ ದರ್ಶನಾಪೂರ, ಎನ್.ಎಸ್. ಭೋಸರಾಜು, ಡಿ.ಸುಧಾಕರ್, ಕೆಕೆಆರ್ ಡಿಬಿ ಅಧ್ಯಕ್ಷ ಡಾ. ಅಜಯ್‌ ಸಿಂಗ್‌, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತೆ ಡಾ. ಶಾಲಿನಿ ರಜನೀಶ್‌, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್‌ ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಾಳಿಪಟ ದಾರ ಕುತ್ತಿಗೆ ಸೀಳಿ ಮಗಳನ್ನು ಹಾಸ್ಟೆಲ್‌ನಿಂದ ಕರೆತರಲು ಹೊರಟಿದ್ದ ಅಪ್ಪ ದಾರುಣ ಸಾವು
ಪೌರಾಯುಕ್ತೆಗೆ ಬೆಂಕಿ: ಕಾಂಗ್ರೆಸ್ಸಿಗನಿಂದ ಧಮ್ಕಿ