ಕನ್ನಡಪ್ರಭವಾರ್ತೆ ಚಿತ್ರದುರ್ಗ
ಸಂಕಷ್ಟದ ಪರಿಸ್ಥಿತಿ ಎದುರಿಸುವ ಪತ್ರಿಕಾ ವಿತರಕರ ನೆರವಿಗೆ ಧಾವಿಸುವ ಸಂಬಂಧ ₹10ಕೋಟಿಯ ಕ್ಷೇಮಾಭಿವೃದ್ದಿ ನಿಧಿ ಸ್ಥಾಪಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡುತ್ತೇನೆ ಎಂದು ಯೋಜನೆ, ಸಾಂಖ್ಯಿಕ ಸಚಿವ ಡಿ. ಸುಧಾಕರ್ ಹೇಳಿದರು.ನಗರದ ಮುರುಘಾ ಮಠದ ಅನುಭವ ಮಂಟಪದಲ್ಲಿ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ವತಿಯಿಂದ ಆಯೋಜಿಸಲಾದ ಪತ್ರಿಕಾ ವಿತರಕರ 4ನೇ ರಾಜ್ಯ ಸಮ್ಮೇಳನ ಸಮ್ಮೇಳನದಲ್ಲಿ ಭಾಗವಹಿಸಿ ಮಾತಾಡಿದ ಅವರು, ಕಾರ್ಮಿಕ ಇಲಾಖೆ ಮೂಲಕ ಇಶ್ರಮ್ ನಲ್ಲಿ ವಿತರಕರ ನೋಂದಣಿ ಮಾಡಿಸಲಾಗುತ್ತಿದೆ. ಅವಘಡಗಳು ಉಂಟಾದಲ್ಲಿ ವಿತರಕರಿಗೆ ಪರಿಹಾರ ಸಿಗಲಿದೆ ಎಂದರು.ವಿಆರ್ ಎಲ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ವಿಜಯ ಸಂಕೇಶ್ವರ ಮಾತನಾಡಿ, ಭಾರತದಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಕಾಗದ ಉತ್ಪಾದನೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ಶೇ.70 ರಷ್ಟನ್ನು ಆಮದು ಮಾಡಿಕೊಳ್ಳಲೇ ಬೇಕಾಗಿದೆ. ವಿದೇಶಗಳಿಂದ ಆಮದು ಮಾಡಿಕೊಳ್ಳುವ ಮುದ್ರಣ ಕಾಗದದ ಮೇಲೆ ಕೇಂದ್ರ ಸರ್ಕಾರ ಶೇ.5 ರಷ್ಟು ತೆರಿಗೆ ವಿಧಿಸುತ್ತಿದೆ ಎಂದು ತೀವ್ರ ಅಸಮಧಾನ ವ್ಯಕ್ತಪಡಿಸಿದರು. ಭಾರತದ ಮಟ್ಟಿಗೆ ತೆರಿಗೆ ಪಾಲಿಸಿಗಳು ಸರಿಯಾಗಿಲ್ಲ. ಪಿಕ್ ಪಾಕೆಟ್ ಮಾದರಿಯಲ್ಲಿ ಸುಲಿಗೆ ಮಾಡಲಾಗುತ್ತಿದೆ. ಯಾವುದಕ್ಕೆ ತೆರಿಗೆ ವಿಧಿಸಬೇಕು ಎಂಬ ಕನಿಷ್ಠ ತಿಳಿವಳಿಕೆ ಕೇಂದ್ರ ಸರ್ಕಾರಕ್ಕೆ ಇದ್ದಂತೆ ಕಾಣಿಸುತ್ತಿಲ್ಲ. ವಿಮಾ ಕಂತಿನ ಮೇಲೂ ಜಿಎಸ್ ಟಿ ವಿಧಿಸಲಾಗುತ್ತಿದೆ. ಪ್ರಸ್ತುತ ಪತ್ರಿಕೆ ನಡೆಸುವುದೇ ಕಷ್ಟವಿದೆ. ದೇಶ ವಿದೇಶಗಳಲ್ಲಿ ಬಹಳಷ್ಟು ಪತ್ರಿಕೆಗಳು ಮುಚ್ಚಿವೆ. ಅನೇಕ ಸಂಸ್ಥಾಪಕರು ಕಣ್ಮರೆಯಾಗಿದ್ದಾರೆ. ಈ ಸಂಗತಿ ಅರಿತು ಕೇಂದ್ರ ತೆರಿಗೆಯಲ್ಲಿ ವಿನಾಯಿತಿ ನೀಡಬೇಕೆಂದರು.ಪತ್ರಿಕಾ ವಿತರಕರು ತಮ್ಮ ಮನೆಯಲ್ಲಿ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಅವರ ಫೋಟೋ ಹಾಕಿಕೊಳ್ಳಬೇಕು. ಅವರಿಂದ ಪ್ರೇರಣೆ ಪಡೆಯಬೇಕು. ವಿತರಕರ ಮಕ್ಕಳು ಒಳ್ಳೆಯ ಶಿಕ್ಷಣ ಪಡೆದು ವೈದ್ಯರು, ಇಂಜಿನಿಯರ್ ಗಳಾಗುತ್ತಿದ್ದಾರೆ. ಒಳ್ಳೆಯ ಶಿಕ್ಷಣ ದೊರೆಯುತ್ತಿದೆ. ಪತ್ರಿಕೆಗಳಿಗೆ ಜಾಹೀರಾತುಗಳೇ ಜೀವಾಳ. ಜಾಹೀರಾತಿನಲ್ಲಿ ಸತ್ಯಾಂಶ ಇದೆ-ಇಲ್ಲವೆ ಎಂಬುದನ್ನು ಜಾಹೀರಾತು ನೀಡುವವರು ಯೋಚಿಸಬೇಕು ಎಂದು ತಿಳಿಸಿದರು.ಪ್ರಾಯೋಜಿತ ಸುದ್ದಿಗಳ ಬಗ್ಗೆ ಕೆಲವರು ಆಕ್ಷೇಪಿಸುತ್ತಾರೆ. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರ ನೀಡುವ ಜಾಹೀರಾತು ಏನು? ಅವುಗಳನ್ನು ಹೇಗೆ ನಂಬಬೇಕೆಂದು ಸಂಕೇಶ್ವರ ಪ್ರಶ್ನಿಸಿದರು.
ಹನ್ನೆರಡು ಪುಟಗಳ ಪತ್ರಿಕೆ ಹೊರತರಲು ₹18 ವೆಚ್ಚವಾಗುತ್ತದೆ. ಜಾಹೀರಾತು ತೆಗೆದುಕೊಳ್ಳದೇ ಪತ್ರಿಕೆ ನಡೆಸಬೇಕೆಂದರೆ ₹30 ಪತ್ರಿಕೆ ಮಾರಾಟ ಮಾಡಬೇಕಾಗುತ್ತದೆ. ಪಾಕಿಸ್ತಾನದಲ್ಲಿ ಕಪ್ಪು ಬಿಳುಪಿನ 12 ಪುಟಗಳ ಪತ್ರಿಕೆ ₹14ಗೆ ಮಾರಾಟವಾಗುತ್ತದೆ. ಮುಂದುವರಿದ ರಾಷ್ಟ್ರಗಳಲ್ಲಿ ಪತ್ರಿಕೆ ಬೆಲೆ ಕನಿಷ್ಟ₹ 200 ಇದೆ ಎಂದು ಸಂಕೇಶ್ವರ ತಿಳಿದರು.ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಮಾತನಾಡಿ, ಪತ್ರಿಕೋದ್ಯಮದ ನರಮಂಡಲವಾಗಿ ಪತ್ರಿಕಾ ವಿತರಕರರು ಕೆಲಸ ಮಾಡುತ್ತಾರೆ. ವಿತರಕರು ಅವರ ಹಕ್ಕುಗಳ ಬಗ್ಗೆ ಜಾಗೃತರಾಗಬೇಕು. ಆರೋಗ್ಯ ಸೌಲಭ್ಯಗಳ ಬಗ್ಗೆ ಸರ್ಕಾರದ ಬಳಿ ಮನವಿ ಸಲ್ಲಿಸಬೇಕು ಎಂದರು.ಸರ್ಕಾರ ಪತ್ರಿಕಾ ವಿತರಕರಿಗೆ ಪ್ರತ್ಯೇಕ ಆರೋಗ್ಯ ಕ್ಷೇಮ ನಿಧಿ ಸ್ಥಾಪಿಸಬೇಕು. ವಿತರಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಬೇಕು. ಪಡಿತರ ಚೀಟಿ ನೀಡಬೇಕು. ವಿತರಕರು ಬಳಸುವ ಮೋಟರ್ ಬೈಕು ಖರೀದಿಗೆ ಶೇ.50 ಸಬ್ಸಿಡಿ ಒದಗಿಸಬೇಕು. ಇದರ ಜತೆಗೆ ಸಿಎಸ್ ಆರ್ ನಿಧಿ ಬಳಸಿ ಸಹ ಸೌಲಭ್ಯ ನೀಡುವಂತಾಗಬೇಕು. ಈ ವಿಚಾರವಾಗಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಕೆ.ವಿ. ಪ್ರಭಾಕರ್ ಅವರಿಗೆ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದಿಂದ ಪತ್ರಿಕಾ ವಿತರಕರ ಬಂಧು ಎಂದು ಬಿರುದು ನೀಡಿ ಗೌರವಿಸಲಾಯಿತು.ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ತಮ್ಮ ದಿಕ್ಸೂಚಿ ಭಾಷಣದಲ್ಲಿ, ಪತ್ರಿಕೆಗಳೊಂದಿಗೆ ಪತ್ರಿಕಾ ವಿತರಕರದ್ದು ಅವಿನಾಭವ ಸಂಬಂಧವಿದೆ. ಆದರೂ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರನ್ನಾಗಿ ಇವರನ್ನು ಪರಿಗಣಿಸಲು ಹಲವಾರು ಅಡೆತಡೆಗಳು ಇವೆ. ಇದೇ ಕಾರಣಕ್ಕಾಗಿ ಕಾರ್ಯ ನಿರತ ಪತ್ರಕರ್ತ ಸಂಘದಲ್ಲಿ ಅವರಿಗೆ ಸ್ಥಾನ ನೀಡಿಲ್ಲ ಎಂದರು.
ರಾಜ್ಯ ಪತ್ರಿಕಾ ವಿತರಕ ಒಕ್ಕೂಟದ ಅಧ್ಯಕ್ಷ ಕೆ. ಶಂಬುಲಿಂಗ ಮಾತನಾಡಿ, ಒಕ್ಕೂಟ ಪತ್ರಿಕಾ ವಿತರಕರ ಸಂಕಷ್ಟಗಳಿಗೆ ಧ್ವನಿಯಾಗಿದೆ. ಕೋವಿಡ್ ಸಂದರ್ಭದಲ್ಲಿ ವಿತರಕರು ಬಹಳಷ್ಟು ಕಷ್ಟಗಳಿಗೀಡಾದರು. ಸರ್ಕಾರ ನೆರವಿಗೆ ಬರಲಿಲ್ಲ. ಈ ಸಂದರ್ಭದಲ್ಲಿ ಪತ್ರಿಕೆಗಳೇ ವಿತರಕರ ನೆರವಿಗೆ ಬಂದವು. ಸದ್ಯ ಒಕ್ಕೂಟದ ಹೋರಾಟದ ಫಲವಾಗಿ ಸರ್ಕಾರ ಪತ್ರಿಕಾ ವಿತರಕರನ್ನು ಗುರುತಿಸಿ ನೆರವು ನೀಡುತ್ತಿದೆ. ರಾಜ್ಯ ಸರ್ಕಾರ ಪತ್ರಿಕಾ ವಿತರಕರಿಗಾಗಿ ₹2 ಕೋಟಿ ಕ್ಷೇಮ ನಿಧಿ ಸ್ಥಾಪಿಸಿದೆ. ಆದರೆ ಈ ನಿಧಿಯ ಸದ್ಭಳಕೆಯಾಗಿಲ್ಲವೆಂದರು.ಈ ವೇಳೆ ಸಂಸದ ಗೋವಿಂದ ಎಂ. ಕಾರಜೋಳ, ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ, ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್, ಪ್ರಜಾಪಗತಿ ದಿನಪತ್ರಿಕೆ ಸಂಪಾದಕ ನಾಗಣ್ಣ, ಐಎಫ್ ಡಬ್ಲ್ಯೂಜೆ ಅಧ್ಯಕ್ಷ ಬಿ.ವಿ. ಮಲ್ಲಿಕಾರ್ಜುನಯ್ಯ, ರಾಜ್ಯ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಿಕಾ ವಿತರಕ ಜವರಪ್ಪ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದಿನೇಶ್.ಬಿ ಗೌಡಗೆರೆ, ಜಿಲ್ಲಾ ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ ಭಾಗವಹಿಸಿದ್ದರು. ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಬೋವಿ ಮಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು.