ಗದಗ: 2022ರ ಪೂರ್ವದಲ್ಲಿನ ಹಳೆ ಮೀಸಲಾತಿ ಪದ್ಧತಿಯನ್ನು ಯಥಾವತ್ತಾಗಿ ಜಾರಿಗೊಳಿಸುವಂತೆ ಒತ್ತಾಯಿಸಿ ಅಖಿಲ ಕರ್ನಾಟಕ ಬಂಜಾರ, ಭೋವಿ, ಕೊರಚ ಮತ್ತು ಕೊರಮ ಸಮಾಜಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಬಂಜಾರ ಸಮಾಜದ ಹಿರಿಯರಾದ ಕುಬೇರಪ್ಪ ಪವಾರ ಮಾತನಾಡಿ, 2022ರ ಪೂರ್ವದಲ್ಲಿನ ಹಳೆ ಮೀಸಲಾತಿ ಪದ್ಧತಿಯನ್ನು ಯಥಾವತ್ತಾಗಿ ಜಾರಿಗೊಳಿಸುವಂತೆ ನಮ್ಮ ಸಂಘವು ಚರ್ಚಿಸಿ ನಿರ್ಣಯ ತೆಗೆದುಕೊಂಡಿದ್ದು, ಹಳೆಯ ಮೀಸಲಾತಿಯ ನಿಯಮ ಶೇ. 50ರ ಅನ್ವಯ ನೇಮಕಾತಿ ಮತ್ತು ಶೈಕ್ಷಣಿಕ ಪ್ರವೇಶ ಪ್ರಕ್ರಿಯೆಯನ್ನು ಮುಂದುವರಿಸುವುದಾಗಿ ರಾಜ್ಯ ಸರ್ಕಾರ ಪ್ರಕಟಣೆ ಮಾಡಿರುವುದು ಸ್ವಾಗತಾರ್ಹ. ಇದನ್ನು ತ್ವರಿತವಾಗಿ ನೇಮಕಾತಿ ಅಧಿಸೂಚನೆ ಹೊರಡಿಸಬೇಕು.ಈ ಹಿಂದೆ ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ(ಶೇ. 17) ಮತ್ತು ಪರಿಶಿಷ್ಟ ಪಂಗಡಗಳ(ಶೇ.7) ಮೀಸಲಾತಿಯನ್ನು ಹೆಚ್ಚಳ ಮಾಡಿರುವ ಆದೇಶವನ್ನು ಸಂವಿಧಾನದ 9ನೇ ಷೆಡ್ಯೂಲ್‌ನಲ್ಲಿ ಸೇರಿಸಲು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲು ಪ್ರಧಾನಿ ಬಳಿ ನಿಯೋಗ ಹೋಗಬೇಕು.
ಕೇರಳ ಮಹಾರಾಷ್ಟ್ರ, ಗೋವಾ ಮುಂತಾದ ರಾಜ್ಯಗಳಿಗೆ ವಲಸೆ ಹೋಗಿರುವ ಬಂಜಾರ ಕೂಲಿ ಕಾರ್ಮಿಕರ ಸಮೀಕ್ಷೆ ಮಾಡಲು ಪ್ರತ್ಯೇಕ ಸಮೀಕ್ಷಾ ತಂಡವನ್ನು ರಚನೆ ಮಾಡಿದ ನಂತರವೇ ಒಳಮೀಸಲಾತಿಯನ್ನು ಜಾರಿಗೆ ತರಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ವೇಳೆ ಬಂಜಾರ ಸಮಾಜದ ಹಿರಿಯರಾದ ಕುಬೇರಪ್ಪ ಪವಾರ, ಪಾಂಡಪ್ಪ ಪೂಜಾರಿ, ಕೇಶಪ್ಪ ನಭಾಪುರ, ಪುಟ್ಟಪ್ಪ ಚನ್ನಳ್ಳಿ. ಶಿವು ನಾಯಕ, ಕೇಶವ, ಕೇಶವ ಛಬ್ಬಿ, ಧನಂಜಯ್ ನಭಾಪುರ, ವಿನಾಯಕ್ ರಾಥೋಡ, ತುಕಾರಾಮ ಲಮಾಣಿ, ತಿಪ್ಪಣ್ಣ ಪೂಜಾರಿ ಸೇರಿದಂತೆ ಇತರರು ಇದ್ದರು.