ಕಬ್ಬು ಬೆಳೆಗಾರರ ಸಮಸ್ಯೆ ಪರಹರಿಸುವಂತೆ ನೀತಿ ಆಯೋಗದ ಸದಸ್ಯರಿಗೆ ಮನವಿ

KannadaprabhaNewsNetwork |  
Published : Oct 30, 2026, 01:15 AM IST
44 | Kannada Prabha

ಸಾರಾಂಶ

ದೇಶದಲ್ಲಿ ಉತ್ಪಾದನೆಯಾಗುವ ಸಕ್ಕರೆ ಶೇಕಡ 75 ರಷ್ಟು ವಾಣಿಜ್ಯ ಬಳಕೆ ಮತ್ತು 25ರಷ್ಟು ಗೃಹಬಳಕೆಗೆ ಇರುವ ಕಾರಣ ಸಕ್ಕರೆಗೆ ವಾಣಿಜ್ಯ ಉದ್ದೇಶಗಳಿಗೆ ಬಳಸುವ ಸಿಹಿ ತಿಂಡಿ ಘಟಕಗಳು. ತಂಪು ಪಾನೀಯ ತಯಾರಿಕಾ ಕಂಪನಿಗಳು, ಆಹಾರ ಸಂಸ್ಕರಣಾ ಉದ್ಯಮಗಳು ಹಾಗೂ ಇತರ ವಾಣಿಜ್ಯ ಸಂಸ್ಥೆಗಳಿಗೆ ಹೆಚ್ಚಿನ ದರ ನಿಗದಿಪಡಿಸಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ಕಬ್ಬು ಬೆಳೆಗಾರರರ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘ ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಕೇಂದ್ರ ನೀತಿ ಆಯೋಗದ ಸದಸ್ಯ, ಸಕ್ಕರೆ ಹಾಗೂ ಕಬ್ಬು ಬೆಳೆಗಾರರ ಸಮಸ್ಯೆ ಕುರಿತು ಸಮಿತಿಯ ಮುಖ್ಯಸ್ಥ ರಮೇಶ್‌ ಚಂದ್ರ ಅವರಿಗೆ ಮನವಿ ಸಲ್ಲಿಸಿದರು.

ರಾಜ್ಯದ ಕಬ್ಬು ಬೆಳೆಗಾರರಿಗೆ, ನಿರಂತರವಾಗಿ ಹೆಚ್ಚುತ್ತಿರುವ ಕೃಷಿ ಉತ್ಪಾದನಾ ವೆಚ್ಚ, ಅಸಮರ್ಪಕ ಬೆಲೆ, ಸಕ್ಕರೆ ಕಾರ್ಖಾನೆಗಳ ಶೋಷಣೆ, ಬರಗಾಲ, ಬೆಳೆ ನಷ್ಟ ಹಾಗೂ ಸಾಲದ ಹೊರೆಯಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರ ಹಿತಾಸಕ್ತಿಯನ್ನು ಕಾಪಾಡಲು ಹಾಗೂ ಕೃಷಿಯನ್ನು ಲಾಭದಾಯಕವಾಗಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತುರ್ತಾಗಿ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಎಫ್ ಆರ್ ಪಿ ಏರಿಕೆ ಮಾಡಿ ಕಬ್ಬಿನ ಬೀಜ, ಗೊಬ್ಬರ, ಕೃಷಿ ಕೂಲಿ, ನೀರಾವರಿ, ವಿದ್ಯುತ್, ಡೀಸೆಲ್, ಕಟಾವು ಮತ್ತು ಸಾಗಾಣಿಕೆ ಸೇರಿದಂತೆ ಎಲ್ಲ ಉತ್ಪಾದನಾ ವೆಚ್ಚಗಳು ಗಣನೀಯ ಏರಿಕೆಯಾಗಿವೆ.

ಆದರೆ ರೈತರಿಗೆ ದೊರೆಯುತ್ತಿರುವ ಕಬ್ಬಿನ ದರವು ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿಲ್ಲ. ಕರ್ನಾಟಕ ಸರ್ಕಾರದ ಕಬ್ಬು ಅಭಿವೃದ್ಧಿ ಆಯುಕ್ತರ ವರದಿಯಲ್ಲಿ ಹಿಂದಿನ ವರ್ಷ ಒಂದು ಟನ್ ಕಬ್ಬು ಉತ್ಪಾದನೆಗೆ 4450 ವೆಚ್ಚ ಬರುತ್ತದೆ ಎಂದು ಕೇಂದ್ರ ಕೃಷಿ ಬೆಲೆ ಆಯೋಗಕ್ಕೆ ವರದಿ ನೀಡಿದ್ದಾರೆ. ಅದರಂತೆ ಕೇಂದ್ರ ಸರ್ಕಾರವು 10.25% ಸಕ್ಕರೆ ಇಳುವರಿ ಪ್ರಮಾಣಕ್ಕೆ ಕಬ್ಬಿನ ಎಫ್‌ಆರ್‌ಪಿ ದರವನ್ನು ಕನಿಷ್ಠ ಪ್ರತಿ ಟನ್‌ಗೆ ₹4,500ಕ್ಕೆ ಏರಿಸಬೇಕು ಎಂದು ಒತ್ತಾಯಿಸಿದರು.

ದೇಶದಲ್ಲಿ ಉತ್ಪಾದನೆಯಾಗುವ ಸಕ್ಕರೆ ಶೇಕಡ 75 ರಷ್ಟು ವಾಣಿಜ್ಯ ಬಳಕೆ ಮತ್ತು 25ರಷ್ಟು ಗೃಹಬಳಕೆಗೆ ಇರುವ ಕಾರಣ ಸಕ್ಕರೆಗೆ ವಾಣಿಜ್ಯ ಉದ್ದೇಶಗಳಿಗೆ ಬಳಸುವ ಸಿಹಿ ತಿಂಡಿ ಘಟಕಗಳು. ತಂಪು ಪಾನೀಯ ತಯಾರಿಕಾ ಕಂಪನಿಗಳು, ಆಹಾರ ಸಂಸ್ಕರಣಾ ಉದ್ಯಮಗಳು ಹಾಗೂ ಇತರ ವಾಣಿಜ್ಯ ಸಂಸ್ಥೆಗಳಿಗೆ ಹೆಚ್ಚಿನ ದರ ನಿಗದಿಪಡಿಸಬೇಕು. ಸಾಮಾನ್ಯ ಗ್ರಾಹಕ ಗೃಹಬಳಕೆದಾರರಿಗೆ ಸಾಮಾನ್ಯ ದರವನ್ನು ಮುಂದುವರಿಸಬೇಕು. ಅಡುಗೆ ಅನಿಲ ಹಾಗೂ ವಾಣಿಜ್ಯ ಅನಿಲಕ್ಕೆ ಪ್ರತ್ಯೇಕ ದರ ನಿಗದಿ ಮಾಡಿರುವ ರೀತಿ ವಾಣಿಜ್ಯ ಬಳಕೆಯ ಸಕ್ಕರೆಗೆ ಹೆಚ್ಚಿನ ದರ ನಿಗದಿಪಡಿಸುವುದರಿಂದ ಬರುವ ಹೆಚ್ಚುವರಿ ಆದಾಯದಲ್ಲಿ ಕಬ್ಬು ಬೆಳೆಗಾರರಿಗೆ ಎಫ್ ಆರ್ ಪಿ ಹೆಚ್ಚುವರಿ ಮಾಡುವ ವ್ಯವಸ್ಥೆ ಜಾರಿಗೊಳಿಸಬೇಕು.

ಸಕ್ಕರೆ ನಿಯಂತ್ರಣ ಕಾಯ್ದೆ 1966ರ ಪ್ರಕಾರ ಕಬ್ಬಿನ ಉಪ ಉತ್ಪನ್ನಗಳಾದ ಮೊಲಾಸಿಸ್, ಬಗಾಸ್, ಎಥೆನಾಲ್, ವಿದ್ಯುತ್ ಉತ್ಪಾದನೆ ಹಾಗೂ ಇತರ ಉತ್ಪನ್ನಗಳಿಂದ ಸಕ್ಕರೆ ಕಾರ್ಖಾನೆಗಳಿಗೆ ಹೆಚ್ಚುವರಿ ಆದಾಯ ದೊರೆಯುತ್ತಿದೆ. ಕಬ್ಬಿನ ಉಪ ಉತ್ಪನ್ನಗಳಿಂದ ದೊರೆಯುವ ಆದಾಯವನ್ನು ಪರಿಗಣಿಸಿ. ರೈತರಿಗೆ ಲಾಭ ಹಂಚಿಕೆ ಮಾಡುವ ಪದ್ಧತಿ ಕಡ್ಡಾಯವಾಗಿ ಜಾರಿಯಾಗಬೇಕು, ಪ್ರತಿ ರೈತನ ಹೊಲದ ಕಬ್ಬಿನ ಸಕ್ಕರೆ ಇಳುವರಿ ಆಧಾರದಲ್ಲಿ ಎಫ್‌ಆರ್‌ಪಿ ದರ ನೀಡಬೇಕು. ಪ್ರಸ್ತುತ ಸಕ್ಕರೆ ಕಾರ್ಖಾನೆಗಳು ಕಬ್ಬು ಸರಬರಾಜು ಮಾಡಿದ ಎಲ್ಲಾ ರೈತರ ಪ್ರಮಾಣವನ್ನು ಆಧರಿಸಿ ಸರಾಸರಿ ಇಳುವರಿ ಲೆಕ್ಕ ಹಾಕಿ ರೈತರಿಗೆ ಕಬ್ಬಿನ ದರ ನೀಡುವ ಪದ್ಧತಿ ಇದೆ. ಇದು ಉತ್ತಮ ಗುಣಮಟ್ಟದ ಕಬ್ಬು ಬೆಳೆದ ರೈತರಿಗೆ ಅನ್ಯಾಯವಾಗುತ್ತಿದೆ. ಆದ್ದರಿಂದ ಪ್ರತಿ ರೈತನ ಹೊಲದಲ್ಲಿ ಬೆಳೆದ ಕಬ್ಬಿನ ಸಕ್ಕರೆ ಇಳುವರಿ ಪ್ರಮಾಣವನ್ನು ವೈಜ್ಞಾನಿಕವಾಗಿ ಪರೀಕ್ಷಿಸಿ, ಅದರ ಆಧಾರದಲ್ಲಿ ಎಫ್‌ಆರ್‌ಪಿ ದರ ನೀಡುವ ವ್ಯವಸ್ಥೆ ಜಾರಿಗೆ ತರಬೇಕು.

ಕಬ್ಬು ಕಟಾವು ಯಂತ್ರದ ಮೂಲಕ ಕಬ್ಬು ಕಟಾವು ಮಾಡುವ ವೇಳೆ ಕಾನೂನು ಬಾಹಿರವಾಗಿ ವೇಸ್ಟೇಜ್ ಎಂದು ಶೇ.8ರಿಂದ 10ರಷ್ಟು ತೂಕ ಕಡಿತ ಮಾಡುವುದನ್ನು ತಪ್ಪಿಸಬೇಕು, ವೈಜ್ಞಾನಿಕ ಪರೀಕ್ಷೆ ಹಾಗೂ ಕಾನೂನುಬದ್ಧ ಮಾನದಂಡಗಳಿಲ್ಲದೆ ಈ ರೀತಿ ತೂಕ ಕಡಿತ ಮಾಡುವುದು ರೈತರ ಶೋಷಣೆಯಾಗಿದೆ. ತೂಕ ಕಡಿತ ಮಾಡುವ ಸಕ್ಕರೆ ಕಾರ್ಖಾನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳುವಂತಾಗಬೇಕು. ಕಬ್ಬಿನ ಎಫ್‌ಆರ್‌ಪಿ ದರವನ್ನು ರೈತರ ಹೊಲದಲ್ಲಿನ ದರ ಎಂದು ನಿಗದಿಪಡಿಸಬೇಕು. ಕಬ್ಬು ಕಟಾವು ಕೂಲಿ ಹಾಗೂ ಸಾಗಾಣಿಕೆ ವೆಚ್ಚದ ಹೆಸರಿನಲ್ಲಿ ರೈತರಿಂದ ಹೆಚ್ಚಿನ ಹಣ ಕಡಿತ ಮಾಡಲಾಗುತ್ತಿದೆ. ಇದರಿಂದ ಸರ್ಕಾರ ಘೋಷಿಸುವ ಎಫ್‌ಆರ್‌ಪಿ ದರವು ರೈತರಿಗೆ ಸಂಪೂರ್ಣವಾಗಿ ದೊರೆಯುತ್ತಿಲ್ಲ.

ಆದ್ದರಿಂದ ಕಬ್ಬಿನ ಎಫ್‌ಆರ್‌ಪಿ ದರವನ್ನು ರೈತರ ಹೊಲದಲ್ಲಿನ ದರ ಎಂದು ನಿಗದಿಪಡಿಸಬೇಕು. ಕಬ್ಬು ಕಟಾವು ಮತ್ತು ಸಾಗಾಣಿಕೆ ವೆಚ್ಚವನ್ನು ಸಕ್ಕರೆ ಕಾರ್ಖಾನೆಗಳೇ ಭರಿಸುವ ವ್ಯವಸ್ಥೆ ಜಾರಿಗೆ ತರಬೇಕು. ಇದರಿಂದ ಕಟಾವು ಕೂಲಿ ಹಾಗೂ ಸಾಗಾಣಿಕೆ ವೆಚ್ಚದ ಹೆಸರಿನಲ್ಲಿ ನಡೆಯುತ್ತಿರುವ ರೈತರ ಶೋಷಣೆಯನ್ನು ತಪ್ಪಿಸಬಹುದು . ಹಿಂದಿನ ವರ್ಷದ ಸಕ್ಕರೆ ಇಳುವರಿ ಆಧಾರದಲ್ಲಿ ಪ್ರಸಕ್ತ ವರ್ಷದ ಕಬ್ಬಿನ ಎಫ್ ಆರ್ ಪಿ ದರ ನಿಗದಿಪಡಿಸಿ ಹಣ ಪಾವತಿಸುವ ನೀತಿ ಬದಲಾಗಬೇಕು.

ಪ್ರತಿ ವರ್ಷ ಹವಾಮಾನ, ಮಳೆ, ನೀರಾವರಿ, ಕಬ್ಬಿನ ಗುಣಮಟ್ಟ ಹಾಗೂ ಸಕ್ಕರೆ ಇಳುವರಿಯಲ್ಲಿ ವ್ಯತ್ಯಾಸವಾಗುತ್ತದೆ.

ಆದ್ದರಿಂದ ಹಿಂದಿನ ವರ್ಷದ ಸಕ್ಕರೆ ಇಳುವರಿಯನ್ನು ಆಧಾರವಾಗಿಟ್ಟುಕೊಳ್ಳದೆ, ಆಯಾ ವರ್ಷ ರೈತರು ಪೂರೈಸುವ ಕಬ್ಬಿನ ಸಕ್ಕರೆ ಇಳುವರಿ ಪ್ರಮಾಣದ ಆಧಾರದಲ್ಲಿ ದರ ನಿಗದಿಪಡಿಸಿ ಹಣ ಪಾವತಿಸುವ ವ್ಯವಸ್ಥೆ ಜಾರಿಗೊಳಿಸಬೇಕು.

ಸಕ್ಕರೆ ನಿಯಂತ್ರಣ ಕಾಯ್ದೆ ಅನ್ವಯ ಕಬ್ಬಿನ ಹಣವನ್ನು 14 ದಿನಗಳೊಳಗೆ ಪಾವತಿಸದ ಸಕ್ಕರೆ ಕಾರ್ಖಾನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಕಬ್ಬು ಪೂರೈಕೆ ಮಾಡಿದ ರೈತರಿಗೆ ಕಾನೂನಿನ ಪ್ರಕಾರ ನಿಗದಿತ ಅವಧಿಯೊಳಗೆ ಹಣ ಪಾವತಿಸಬೇಕಾದ ಜವಾಬ್ದಾರಿ ಸಕ್ಕರೆ ಕಾರ್ಖಾನೆಗಳ ಮೇಲಿದೆ. ಆದರೆ, ಕೆಲವು ಕಾರ್ಖಾನೆಗಳು ಸರ್ಕಾರದ ಆದೇಶಗಳನ್ನು ನಿರ್ಲಕ್ಷಿಸಿ ರೈತರ ಹಣವನ್ನು ತಿಂಗಳುಗಟ್ಟಲೆ ಬಾಕಿ ಉಳಿಸಿಕೊಳ್ಳುತ್ತಿವೆ.

ಆದ್ದರಿಂದ ಕಬ್ಬು ಪೂರೈಕೆಯಾದ ದಿನದಿಂದ 14 ದಿನಗಳೊಳಗೆ ಕಬ್ಬಿನ ಹಣ ಪಾವತಿಸುವುದನ್ನು ಕಡ್ಡಾಯಗೊಳಿಸಬೇಕು.

ವಿಳಂಬ ಪಾವತಿಗೆ ಕಾನೂನಿನ ಪ್ರಕಾರ ಬಡ್ಡಿ ವಿಧಿಸಬೇಕು. ಸರ್ಕಾರದ ಆದೇಶಗಳನ್ನು ಉಲ್ಲಂಘಿಸುವ ಕಾರ್ಖಾನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.

ನಿರಂತರವಾಗಿ ನಿಯಮ ಉಲ್ಲಂಘಿಸುವ ಕಾರ್ಖಾನೆಗಳ ಪರವಾನಗಿ ಅಮಾನತು ಸೇರಿದಂತೆ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು. ರೈತರ ಬಾಕಿ ಹಣ ವಸೂಲಿಗೆ ಜಿಲ್ಲಾಧಿಕಾರಿಗಳಿಗೆ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಅಧಿಕಾರ ನೀಡಬೇಕು. ಕಬ್ಬು ಬೆಳೆ ಆಕಸ್ಮಿಕ ವಿದ್ಯುತ್ ಸ್ರಾಟ್ ಸರ್ಕ್ಯೂಟ್ ನಿಂದ. ಅಥವಾ ಬೆಂಕಿ ಅನಾಹುತವಾಗಿ ಸುಟ್ಟು ಹೋದಾಗ ಕಂದಾಯ ಇಲಾಖೆ ನೀಡುವ ಪರಿಹಾರ ಧನ ವೈಜ್ಞಾನಿಕವಾಗಿ ಏರಿಕೆ ಮಾಡಬೇಕು.

ಸಕ್ಕರೆ ಕಾರ್ಖಾನೆಗಳು ಬೆಂಕಿ ಬಿದ್ದ ಕಬ್ಬನ್ನ ನುರಿಸಿ ಎಫ್‌ ಆರ್‌ ಪಿ ಹಣದಲ್ಲಿ ಶೇಕಡ 25ರಷ್ಟು ಹಣ ಖಂಡಿತ ಮಾಡುವ ನಿಯಮವನ್ನು ರದ್ದು ಮಾಡಬೇಕು.

ಸಕ್ಕರೆಯನ್ನು ಅಗತ್ಯ ವಸ್ತುಗಳ ಕಾಯ್ದೆಯಲ್ಲಿ ರದ್ದು ಮಾಡಿ ಮುಕ್ತ ಮಾರುಕಟ್ಟೆ ಮಾಡಬೇಕು. ಮೇಲ್ಕಂಡ ಒತ್ತಾಯಗಳ ಬಗ್ಗೆ ಕೇಂದ್ರ ಸರ್ಕಾರ ತಕ್ಷಣವೇ ಕ್ರಮ ಕೈಗೊಂಡು ರೈತರಿಗೆ ನ್ಯಾಯ ಕೊಡಿಸಬೇಕು ಎಂದು ಅವರು ಆಗ್ರಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೇಪ್‌ ಮಾಡಿದ್ದಕ್ಕಾಗಿ ಅಪಹರಣ ಮೂಲಕ ಪ್ರತೀಕಾರ
ಉತ್ತರ ಪಾಲಿಕೆಯಲ್ಲಿ 18 ಜಂಕ್ಷನ್‌ ಗುರುತು