ರಾಜೇಂದ್ರ ರಾವ್
ಇಡೀ ಏಷ್ಯಾ ಖಂಡದಲ್ಲೆ ಪ್ರಥಮ ಬಾರಿಗೆ ವಿದ್ಯುತ್ ಬೆಳಕು ನೀಡಿದವರೆನಿಸಿದ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಪುತ್ಥಳಿ ಬೆಳಕಿಲ್ಲದೆ ಕತ್ತಲೆಯಲ್ಲಿದ್ದರೆ, ಅವರ ಹೆಸರಿನಲ್ಲಿರುವ ಕೃಷ್ಣರಾಜೇಂದ್ರ ವೃತ್ತ ಹಳ್ಳಕೊಳ್ಳಗಳಿಂದ ಕೂಡಿ ಸಂಚಾರ ಮಾಡುವುದೆ ದುಸ್ತರವಾಗಿದೆ.
ಕಾವೇರಿ ನದಿದಡದಲ್ಲಿದ್ದ ಎಡತೊರೆಯನ್ನು ಎತ್ತರ ಪ್ರದೇಶಕ್ಕೆ ಸ್ಥಳಾಂತರ ಮಾಡಿ ಅಗತ್ಯ ಮೂಲ ಸೌಲಭ್ಯಗಳನ್ನು ನೀಡಿ ರಾಜ್ಯದಲ್ಲೆ ಒಂದು ವ್ಯವಸ್ಥಿತ ಉತ್ತಮ ನಗರವೆಂಬ ಖ್ಯಾತಿಗೆ ಕಾರಣರಾದ ಮೈಸೂರು ರಾಜರಿಗೆ ಪಟ್ಟಣದ ಪುರಸಭೆ ಆಡಳಿತ ನೀಡುತ್ತಿರುವ ರಾಜಮರ್ಯಾದೆ ಇದಾಗಿದೆ.ಪಟ್ಟಣದ ನಿರ್ಮಾಣ ಮಾಡಿ ನಾಲ್ವಡಿ ಅವರ ಪುತ್ಥಳಿ ಪ್ರತಿಷ್ಠಾಪಿಸಬೇಕೆಂದು ಕಳೆದ ದಶಕಗಳಹಿಂದೆ ನಿರ್ಣಯಿಸಲಾಯಿತು. ಪಟ್ಟಣದ ಶ್ರೀಕೃಷ್ಣರಾಜೇಂದ್ರ ವೃತ್ತದಲ್ಲಿ ಪುತ್ಥಳಿಯನ್ನು ಕಾಲೇಜು ರಸ್ತೆ ಮತ್ತು ಮೈಸೂರು ರಸ್ತೆಗಳ ನಡುವಿನ ಇಕ್ಕಟ್ಟಿನ ಜಾಗದಲ್ಲಿ ಪ್ರತಿಷ್ಠಾಪಿಸಿ ಕೈತೊಳೆದುಕೊಳ್ಳಲಾಯಿತೆ ಹೊರತು, ಮುಂದೆ ಆ ಪ್ರತಿಷ್ಠಿತ ಜಾಗಕ್ಕೆ ಆಗಬೇಕಾದ ಮೂಲಭೂತ ಸೌಲಭ್ಯ ಒದಗಿಸುವಲ್ಲಿ ಪುರಸಭೆ ಆಡಳಿತ ನಿರ್ಲಕ್ಷ್ಯ ತಾಳಿದ ಪರಿಣಾಮ ಇಂದು ಮೈಸೂರು ಮಹಾರಾಜರ ಪ್ರತಿಮೆ ಕತ್ತಲೆಯಲ್ಲಿ ಮುಳುಗಿದ್ದು, ಸುಣ್ಣ ಬಣ್ಣ ಕಂಡು ಅದೆಷ್ಟೊ ವರ್ಷಗಳಾಗಿದ್ದು, ಸ್ವಚ್ಚತೆ ಎಂಬುದು ಇಲ್ಲದ ಕಾರಣ ಗಣ್ಯರ ಮತ್ತು ನಗರದ ನಾಗರೀಕರ ಆಕ್ರೋಶಕ್ಕೆ ಕಾರಣವಾಗಿದೆ.
ಪಟ್ಟಣದಲ್ಲಿ ಯಾವುದಾದರೂ ನಾಡಹಬ್ಬಗಳು, ಜಯಂತಿ ಕಾರ್ಯಕ್ರಮಗಳು ನಡೆದಾಗ ಮಾತ್ರ ನಾಮಕಾವಾಸ್ತೆಗೆ ಪುರಸಭೆ ವತಿಯಿಂದ ಒಂದಷ್ಟು ಹಸಿರು ತೋರಣ ಕಟ್ಟಿ ಹೂವಿನ ಹಾರ ಹಾಕಿ ಕೈತೊಳೆದು ಕೊಂಡರೆ ಅಲ್ಲಿಗೆ ಮುಗಿಯಿತು, ಪುರಸಭೆ ಜವಾಬ್ದಾರಿ ಎಂಬಂತಾಗಿದೆ, ಪರಿಣಾಮ ಪ್ರತಿದಿನ ಮೈಸೂರು ಮಹಾರಾಜರು ಕುಡುಕರು, ಧೂಮಪಾನಿಗಳು ಹಾಗೂ ಪುಂಡಪೋಕರಿಗಳೊಂದಿಗೆ ದಿನದೂಡುವಂತಾಗಿದೆ.
ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಪಟ್ಟಣದ ಜನತೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೆ ಗಮನರಿಸಿ ಪುತ್ಥಳಿಗೆ ಸುತ್ತಾ ವಿದ್ಯುತ್ ಸಂಪರ್ಕ ಕಲ್ಪಿಸಿ, ಸುಣ್ಣಬಣ್ಣ ಹಚ್ಚಿ, ಸ್ವಚ್ಛತೆಯೊಂದಿಗೆ ಗೇಟ್ ಸರಿಪಡಿಸುವಂತೆ ಒತ್ತಾಯಿಸಿದ್ದಾರೆ.
-ಜಿ.ಎಸ್. ರಮೇಶ್, ಪುರಸಭೆ ಮುಖ್ಯಾಧಿಕಾರಿ