ಮಳೆಗಾಲ ಪ್ರಾರಂಭ ಮೊದಲೇ ಬೆಣ್ಣಿಹಳ್ಳ ಹೂಳೆತ್ತುವ ಕಾಮಗಾರಿ ಮುಗಿಯಲಿ. ಹೂಳೆತ್ತಿದ್ದ ಮಣ್ಣನ್ನು ದಡದಲ್ಲಿ ಹಾಕದೇ ದೂರದಲ್ಲಿ ಹಾಕಬೇಕು. ದಡದಲ್ಲಿ ಹಾಕಿದರೆ ಮಳೆಗೆ ಮತ್ತೇ ಹಳ್ಳ ಸೇರುತ್ತದೆ.
ನರಗುಂದ: ಹಳ್ಳಗಳು ರೈತರಿಗೆ ವರವೂ ಹೌದು. ಶಾಪವೂ ಹೌದು. ರಾಜ್ಯ ಸರ್ಕಾರ ಆರ್ಥಿಕ ಸಂಕಷ್ಟದ ನಡುವೆಯೂ ಬೆಣ್ಣಿಹಳ್ಳದ ಹೂಳೆತ್ತುವ ಕಾಮಗಾರಿಗೆ ₹200 ಕೋಟಿ ಅನುದಾನ ನೀಡಿದ್ದಕ್ಕಾಗಿ ಸರ್ಕಾರಕ್ಕೆ ಧನ್ಯವಾದ ಹೇಳುತ್ತೇನೆ ಎಂದು ಶಾಸಕ ಸಿ.ಸಿ. ಪಾಟೀಲ ತಿಳಿಸಿದರು.
ಮಂಗಳವಾರ ಸಂಜೆ ತಾಲೂಕಿನ ಬನಹಟ್ಟಿ ಗ್ರಾಮದ ಹತ್ತಿರದಲ್ಲಿ ಬೆಣ್ಣಿಹಳ್ಳದಿಂದ ಮೆಣಸಗಿ ಮಲಪ್ರಭಾ ನದಿಯವರೆಗೆ ಬೆಣ್ಣಿಹಳ್ಳ ಪ್ರವಾಹ ನಿಯಂತ್ರಣ ಕಾಮಗಾರಿಯನ್ನು ₹38 ಕೋಟಿ ವೆಚ್ಚದಲ್ಲಿ ಭೂಮಿಪೂಜೆ ನೆರವೇರಿಸಿ ಮಾತನಾಡಿ, 2007- 08ರಲ್ಲಿ ಮತ್ತು 2018-19ರಲ್ಲಿ ಮಲಪ್ರಭಾ ಮತ್ತು ಬೆಣ್ಣಿಹಳ್ಳದ ಪ್ರವಾಹಕ್ಕೆ ಬಿದ್ದಿರುವ ಅನೇಕ ಮನೆಗಳ ಸಂತ್ರಸ್ತರಿಗೆ ಬಿ.ಎಸ್. ಯಡಿಯೂರಪ್ಪ ಸಿಎಂ ಆಗಿದ್ದ ವೇಳೆ ಬಿಜೆಪಿ ಸರ್ಕಾರ ತಲಾ ₹50 ಸಾವಿರ ಪರಿಹಾರ ನೀಡಿತ್ತಲ್ಲದೇ ಮತಕ್ಷೇತ್ರದ 14 ಹಳ್ಳಿಗಳು ಸಂಪೂರ್ಣ ಸ್ಥಳಾಂತರವಾದವು. ಇದೇ ಮಾದರಿಯಲ್ಲಿ ರಾಜ್ಯದಲ್ಲಿ 300 ಗ್ರಾಮಗಳು ಸ್ಥಳಾಂತರವಾದವು ಎಂದರು. ಬೆಣ್ಣಿಹಳ್ಳ ಹೂಳೆತ್ತುವುದು ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾರ್ಯಗಳಿಗಾಗಿ ಕುಂದಗೋಳ ಶಾಸಕ ಎಂ.ಆರ್. ಪಾಟೀಲ, ನವಲಗುಂದ ಶಾಸಕ ಎನ್.ಎಚ್. ಕೋನರಡ್ಡಿ ಮತ್ತು ನಾನು ಮೂವರು ಸೇರಿಕೊಂಡು ಕೇಂದ್ರದ ಬಳಿ ತೆರಳಿ ₹1686 ಕೋಟಿ ಅನುದಾನವನ್ನು ನೀಡುವಂತೆ ಮನವಿ ಮಾಡಿದ್ದೇವೆ. ಇದರಲ್ಲಿ ನರಗುಂದ ಮತಕ್ಷೇತ್ರದ ಅಭಿವೃದ್ಧಿಗೆ ₹450 ಕೋಟಿ ದೊರಕಲಿದೆ. ಆದ್ದರಿಂದ ಬೆಣ್ಣಿಹಳ್ಳದ ಶಾಶ್ವತ ಪರಿಹಾರಕ್ಕೆ ಕೇಂದ್ರ ಸರ್ಕಾರವು ಶೀಘ್ರ ಅನುದಾನ ನೀಡಲಿ ಎಂದು ಮನವಿ ಮಾಡಿದರು. ಮಳೆಗಾಲ ಪ್ರಾರಂಭ ಮೊದಲೇ ಬೆಣ್ಣಿಹಳ್ಳ ಹೂಳೆತ್ತುವ ಕಾಮಗಾರಿ ಮುಗಿಯಲಿ. ಹೂಳೆತ್ತಿದ್ದ ಮಣ್ಣನ್ನು ದಡದಲ್ಲಿ ಹಾಕದೇ ದೂರದಲ್ಲಿ ಹಾಕಬೇಕು. ದಡದಲ್ಲಿ ಹಾಕಿದರೆ ಮಳೆಗೆ ಮತ್ತೇ ಹಳ್ಳ ಸೇರುತ್ತದೆ ಎಂದರು.ಕಾರ್ಯನಿರ್ವಾಹಕ ಅಭಿಯಂತರ ಆರ್.ಎಂ. ಜಾಲಿಹಾಳ ಮಾತನಾಡಿ, ಬೆಣ್ಣಿಹಳ್ಳದ ಹೂಳೆತ್ತುವ ಕಾರ್ಯದಲ್ಲಿ 15 ಗ್ರಾಮಗಳು ಬರಲಿವೆ. ಬೆಣ್ಣಿಹಳ್ಳವು ಶೇ. 45ರಷ್ಟು ಅತಿಕ್ರಮಣ ಆಗಿದೆ. ಹೀಗಾಗಿಯೇ ಹಳ್ಳಗಳು ಹೂಳು ತುಂಬಿಕೊಂಡು ಮೂಲಸ್ವರೂಪವನ್ನೇ ಕಳೆದುಕೊಂಡಿವೆ. ಹರಿಯುವ ನೀರಿನ ಮಾರ್ಗ ಸುಲಭವಾಗಿದ್ದರೆ, ಯಾವುದೇ ಪ್ರವಾಹ ಉಂಟಾಗುವುದಿಲ್ಲ. ಹಳ್ಳಕೊಳ್ಳಗಳ ಮೂಲ ಸ್ವರೂಪವನ್ನು ಯಾರೂ ಬದಲಾಯಿಸುವ ಪ್ರಯತ್ನ ಮಾಡಬೇಡಿ. ಹಾಗೇನಾದರೂ ಮಾಡಿದರೆ ಪ್ರಕೃತಿ ನಮ್ಮ ಜೀವನದ ದಿಕ್ಕನ್ನೆ ಬದಲಿಸಲಿವೆ ಎಂದರು.ಈ ಸಂದರ್ಭದಲ್ಲಿ ರುದ್ರಶ್ವರಮಠದ ವೇ.ಮೂ. ಸೊಲಬಯ್ಯ ಸ್ವಾಮಿಗಳು, ಎಸ್.ಬಿ. ಕರಿಗೌಡ್ರ, ಬಾಪುಗೌಡ ಪಾಟೀಲ, ಯಲ್ಲಪ್ಪಗೌಡ ಗೌಡಪ್ಪಗೌಡ, ವೈ.ಎಚ್. ಪೂಜಾರ, ಚಂದ್ರು ಜಾಧವ, ಭೀಮಪ್ಪ ಕಡ್ಲಿಕೊಪ್ಪ, ಚಂದ್ರಶೇಖರ ದಂಡಿನ, ಗುತ್ತಿಗೆದಾರ ಶಿವಾನಂದ ನಾಯಕ, ವಿ.ಬಿ. ಮಾನೀಪಾಟೀಲ, ಮಹೇಶ ಓಲೇಕಾರ, ಚೇತನ ಕಪಲಿ, ಚಂದ್ರು ಜಾಧವ, ಗುರಪ್ಪ ಆದೆಪ್ಪನವರ, ಬಿ.ಬಿ. ಕುಂಬಾರ, ರಾಜುಗೌಡ ಪಾಟೀಲ, ಈಶ್ವರಗೌಡ ಪಾಟೀಲ ಮುಂತಾದವರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.