ನರಗುಂದ: ಮಹದಾಯಿ ಯೋಜನೆ ತುರ್ತಾಗಿ ಜಾರಿ ಮಾಡಬೇಕು ಎಂದು ಕೇಂದ್ರ ಸರ್ಕಾರದ ಪರಿಸರ ಮತ್ತು ಪರಿಸರ ವಿಜ್ಞಾನ ಸಚಿವಾಲಯದ ಪ್ರಧಾನ ಕಾರ್ಯದರ್ಶಿ ಮನೋಜ್ ಕುಮಾರ್ ಅವರಿಗೆ ಬೆಂಗಳೂರಿನಲ್ಲಿ ಕರ್ನಾಟಕ ರೈತ ಸೇನೆಯಿಂದ ಮನವಿ ಸಲ್ಲಿಸಲಾಯಿತು. ಆನಂತರ ಮಾತನಾಡಿದ ಕರ್ನಾಟಕ ರೈತ ಸೇನೆ ಅಧ್ಯಕ್ಷ ಶಂಕ್ರಣ್ಣ ಅಂಬಲಿ, ಮಹದಾಯಿ, ಕಳಸಾ-ಬಂಡೂರಿ ಯೋಜನೆಯನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ತುರ್ತಾಗಿ ಒಮ್ಮತದಿಂದ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು. ಗದಗ ಜಿಲ್ಲಾ ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಎಸ್.ಎಸ್. ಪಾಟೀಲ ಮಾತನಾಡಿ, 1976ರಿಂದ ನಿರಂತರವಾಗಿ ಮಹದಾಯಿ, ಕಳಸಾ-ಬಂಡೂರಿ ಯೋಜನೆ ಜಾರಿಗೆ ಆಗ್ರಹಿಸಿ ಹೋರಾಟ ಮಾಡಲಾಗುತ್ತಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಸಮನ್ವಯದ ಕೊರತೆಯಿಂದ ಯೋಜನೆ ಈ ವರೆಗೆ ಅನುಷ್ಠಾನ ಮಾಡಿಲ್ಲ. ರೈತರ ಕೃಷಿ ಭೂಮಿಗೆ ನೀರು ಒದಗಿಸಿಲ್ಲ. ಕಳಸಾ-ಬಂಡೂರಿ ಯೋಜನೆ ಜಾರಿಗಾಗಿ ನ್ಯಾಯಾಧಿಕರಣದ ಆದೇಶದಂತೆ ಕೇಂದ್ರದ ಅನುಮತಿ ಪಡೆದು ಯೋಜನೆ ಜಾರಿಗೊಳಿಸುವುದು ಕಡ್ಡಾಯ. ಆದರೆ, ಕೇಂದ್ರ ಅರಣ್ಯ ಇಲಾಖೆಯ ಉನ್ನತಾಧಿಕಾರ ಸಮಿತಿ ರಾಜ್ಯದ ಪ್ರಸ್ತಾವನೆಯನ್ನು ತಿರಸ್ಕರಿಸಿದೆ.
ಈ ಯೋಜನೆ ನಿಂತರೆ 5.20 ಲಕ್ಷ ಹೆಕ್ಟೇರ್ ಕೃಷಿ ಭೂಮಿಗೆ ನೀರು ಇಲ್ಲದಂತಾಗುತ್ತದೆ. ಅರಣ್ಯ ಇಲಾಖೆ ಮತ್ತು ಇತರ ಇಲಾಖೆಗಳು ಸಮನ್ವಯತೆಯಿಂದ ರಾಜ್ಯ ಮತ್ತು ಕೇಂದ್ರದ ಏಕ ಸಾಮ್ಯತೆ ಇರಬೇಕು ಎಂದರು.
ಗ್ಲೋಬಲ್ ಗ್ರೀನ್ ಎನರ್ಜಿ ಪ್ರೈವೇಟ್ ಲಿಮಿಟೆಡ್ ನಿರ್ದೇಶಕ ಪ್ರವೀಣ್ ನಾಯಕ ಮುಂತಾದವರು ಇದ್ದರು.