ಕೊಪ್ಪಳ: ಉರಿ ಬಿಸಿಲು ಲೆಕ್ಕಿಸದೆ ಶನಿವಾರ ಆಂಜನೇಯನ ಜನ್ಮಸ್ಥಳ ಅಂಜನಾದ್ರಿಗೆ ಅಪಾರ ಪ್ರಮಾಣದ ಭಕ್ತರು ಆಗಮಿಸಿ ಆಂಜನೇಯನ ದರ್ಶನ ಪಡೆದರು.
ಎಲ್ಲೆಂದರಲ್ಲಿ: ಸರದಿಯಲ್ಲಿ ನಿಂತು ಮೆಟ್ಟಿಲುಗಳ ಮೂಲಕ ಬೆಟ್ಟ ಏರಲು ಸಮಯ ಆಗುತ್ತದೆ ಎಂದು ಕೆಲವರು ಹನುಮಂತನಂತೆಯೇ ಎಲ್ಲೆಂದರಲ್ಲಿ ಕಾಲು ದಾರಿಗಳ ಮೂಲಕ ಬೆಟ್ಟ ಏರುತ್ತಿದ್ದರು. ಮೆಟ್ಟಿಲು ಏರುವುದಕ್ಕೆ ದೊಡ್ಡ ಸರದಿ ಇದ್ದಿದ್ದರಿಂದ ಅಕ್ಕಪಕ್ಕದಲ್ಲಿ ಗುಡ್ಡಗಳನ್ನು ಏರಿದರು.
ದರ್ಶನಕ್ಕೂ ಕ್ಯೂ: ದೊಡ್ಡ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರಿಂದ ಆಂಜನೇಯನ ದರ್ಶನ ಮಾಡುವುದಕ್ಕೂ ಸುಮಾರು ಹೊತ್ತು ಸರದಿಯಲ್ಲಿಯೇ ನಿಲ್ಲಬೇಕಾಯಿತು. ಪ್ರಸಾದ ಸ್ವೀಕಾರಕ್ಕೂ ಕ್ಯೂ ಇರುವುದು ಕಂಡು ಬಂದಿತು.ಕುಡಿಯುವ ನೀರಿಗೂ ಸರದಿ: ಬೆಟ್ಟ ಏರಿದ ಭಕ್ತರು ಆಯಾಸದಿಂದ ನೀರು ಕುಡಿಯಲು ಪರಿತಪಿಸುತ್ತಿದ್ದರು. ದೇವಸ್ಥಾನ ಸಮಿತಿಯಿಂದ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಕೇವಲ ನಾಲ್ಕು ನಲ್ಲಿಗಳು ಮಾತ್ರ ಇದ್ದು, ಹತ್ತಾರು ಸಾವಿರ ಜನರು ಬಂದಿದ್ದರಿಂದ ಕುಡಿಯುವ ನೀರಿಗಾಗಿ ಕಾಯುವ ಸ್ಥಿತಿ ನಿರ್ಮಾಣವಾಗಿತ್ತು.
ಕೆಲವೊಮ್ಮೆ ಲಕ್ಷ ಲಕ್ಷ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಅವರಿಗೆ ಸೂಕ್ತ ಮೂಲಭೂತ ಸೌಕರ್ಯ ಇಲ್ಲ. ಕುಡಿವ ನೀರು, ನೆರಳು, ಶೌಚಾಲಯ ವ್ಯವಸ್ಥೆ ಅಗತ್ಯಕ್ಕೆ ತಕ್ಕಂತೆ ಮಾಡುವ ಅಗತ್ಯವಿರುವುದು ಮಾತ್ರ ಸಾರಿ ಸಾರಿ ಹೇಳುತ್ತಿತ್ತು.
ಅಂಜನಾದ್ರಿಯಲ್ಲಿ ಅಭಿವೃದ್ಧಿ ಮಾಡುವುದಕ್ಕೆ ಅರಣ್ಯ ಇಲಾಖೆ ಅಡ್ಡಿಯಾಗುತ್ತಿದೆ. ಹೀಗಾಗಿ ಸಮಸ್ಯೆಯಾಗಿದೆ. ಉಳಿದಂತೆ ಕುಡಿಯುವ ನೀರು, ನೆರಳು, ಶೌಚಾಲಯ ಸೇರಿದಂತೆ ಮೊದಲಾದ ಸೌಕರ್ಯ ಜನಸ್ತೋಮಕ್ಕೆ ತಕ್ಕಂತೆ ನೀಡುವ ವ್ಯವಸ್ಥೆ ಮಾಡುವ ದಿಸೆಯಲ್ಲಿ ಶೀಘ್ರದಲ್ಲಿಯೇ ಸಭೆ ನಡೆಸಲಾಗುವುದು ಎಂದು ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ ತಿಳಿಸಿದ್ದಾರೆ.