ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಡಾ.ಡಿ. ವೀರೇಂದ್ರ ಹೆಗ್ಗಡೆ ಅವರು ಗ್ರಾಮೀಣ ಪ್ರದೇಶದ ಆರ್ಥಿಕ ಹಿಂದುಳಿದ ಕುಟುಂಬದ ಮಕ್ಕಳ ಶಿಕ್ಷಣಕ್ಕೆ ವಿಶೇಷ ಪ್ರೋತ್ಸಾಹ ನೀಡುವ ಉದ್ದೇಶದಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಮೂಲಕ ಸರ್ಕಾರಿ ಶಾಲೆಗಳ ಮೂಲಭೂತ ಸೌಕರ್ಯಗಳ ಸುಧಾರಣೆಗಾಗಿಯೇ ಕಳೆದ 30 ವರ್ಷಗಳ ಹಿಂದೆ ‘ಜ್ಞಾನದೀಪ ಶಿಕ್ಷಣ ಕಾರ್ಯಕ್ರಮ’ ಜಾರಿಗೆ ತಂದರು.
ಜ್ಞಾನದೀಪ ಶಿಕ್ಷಣ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣಮಟ್ಟ ಸುಧಾರಣೆ ಹಾಗೂ ಕಲಿಕಾ ವಾತಾವರಣ ಸುಧಾರಣೆಗಾಗಿ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ. ಇದರಂತೆ ಶಾಲಾ ಮೂಲಭೂತ ಸೌಕರ್ಯಗಳಾದ ಶಾಲಾ ಕೊಠಡಿ, ಶೌಚಾಲಯ, ಆಟದ ಮೈದಾನ, ಶಾಲಾ ಆವರಣ, ವಿದ್ಯುದ್ಧೀಕರಣ, ಕುಡಿಯುವ ನೀರು, ರಂಗಮಂದಿರ, ಶಾಲಾ ಕಟ್ಟಡಗಳ ದುರಸ್ತಿ, ಡೆಸ್ಕ್- ಬೆಂಚ್‌ಗಳ ವಿತರಣೆ ಮೊದಲಾದವುಗಳಿಗೆ ಈ ಕಾರ್ಯಕ್ರಮದ ಮೂಲಕ ಪೂರಕ ಸಹಾಯಧನ ನೀಡಲಾಗುತ್ತಿದೆ. ಇದರಂತೆ ಇದುವರೆಗೆ ಒಟ್ಟು 61.16 ಕೋಟಿ ರು. ಮೊತ್ತದ ಸಹಾಯಧನ ನೀಡಲಾಗಿದೆ.ಶಾಲೆಗಳಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಸಂಖ್ಯೆಯ ಅನುಪಾತವನ್ನು ಗಮನಿಸಿ ತೀರಾ ಶಿಕ್ಷಕರ ಕೊರತೆಯಿರುವ ಶಾಲೆಗಳಿಗೆ ‘ಜ್ಞಾನದೀಪ ಅತಿಥಿ ಶಿಕ್ಷಕರ’ ನಿಯೋಜನೆ ಮಾಡಲಾಗುತ್ತಿದೆ. ಈ ಶಿಕ್ಷಕರಿಗೆ ಮಾಸಿಕ ಗೌರವಧನವನ್ನು ಸಂಸ್ಥೆಯ ವತಿಯಿಂದ ಪಾವತಿಸಲಾಗುತ್ತಿದ್ದು, ಇದಕ್ಕಾಗಿಯೇ ಸಂಸ್ಥೆಯಿಂದ ಇದುವರೆಗೆ ಒಟ್ಟು 21.33 ಕೋಟಿ ರು. ಮೊತ್ತ ವಿನಿಯೋಗಿಸಲಾಗಿದೆ.
ರಾಜ್ಯಾದ್ಯಂತ ವಿವಿಧ ಶಾಲೆಗಳಿಗೆ ಈ ಶೈಕ್ಷಣಿ ಕವರ್ಷದಲ್ಲಿ ಸುಮಾರು 1030 ಜ್ಞಾನದೀಪ ಅತಿಥಿ ಶಿಕ್ಷಕರನ್ನು ನಿಯೋಜಿಸಲಾಗಿದೆ. ಈ ಪೈಕಿ 240 ಶಾಲೆಗಳು ಏಕೋಪಾಧ್ಯಾಯ ಶಾಲೆಗಳಾಗಿರುವುದು ಉಲ್ಲೇಖನೀಯವಾಗಿದೆ. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಈ ಶಿಕ್ಷಕರು ಆಯಾ ಶಾಲೆಗಳಿಗೆ ಮಹತ್ತರ ಕೊಡುಗೆ ನೀಡಲಿದ್ದಾರೆ ಎಂದು ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.