ಕರ್ನಾಟಕ ರಾಜ್ಯ ಪೊಲೀಸ್ ಧ್ವಜ ಹಾಗೂ ಕಲ್ಯಾಣ ದಿನಾಚರಣೆಯಲ್ಲಿ ನಿವೃತ್ತ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಎಚ್.ಆರ್.ಜ್ಞಾನಮೂರ್ತಿ ಅಭಿಮತಕನ್ನಡಪ್ರಭ ವಾರ್ತೆ ಚಿತ್ರದುರ್ಗ
ನಗರದ ಡಿಎಆರ್ ಪೊಲೀಸ್ ಕವಾಯತು ಮೈದಾನದಲ್ಲಿ ಬುಧವಾರ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ಪೊಲೀಸ್ ಧ್ವಜ ಹಾಗೂ ಕಲ್ಯಾಣ ದಿನಾಚರಣೆಯಲ್ಲಿ ಗೌರವ ವಂದನೆ ಸ್ವೀಕರಿಸಿ ಮಾತನಾಡಿದ ಅವರು ಇಂದಿನ ಪರಿಸ್ಥಿತಿಯಲ್ಲಿ ಉತ್ತಮ ರಾಜ್ಯ, ರಾಷ್ಟ್ರ ನಿರ್ಮಾಣ ಹಾಗೂ ಸಮಾಜದ ಶಾಂತಿ, ನೆಮ್ಮದಿ ಕಾಪಾಡಲು ಪೊಲೀಸ್ ಸೇವೆ ಅತ್ಯವಶ್ಯಕವಾಗಿದೆ ಎಂದರು.
ಸಮಾಜ ವಿರೋಧಿ ಚಟುವಟಿಕೆಗಳನ್ನು ಮಟ್ಟ ಹಾಕಲು ಹಾಗೂ ದುರ್ಬಲ ವರ್ಗದವರಿಗೆ ನ್ಯಾಯ ದೊರಕಿಸಿ ಕೊಡಲು ಪೊಲೀಸ್ ಇಲಾಖೆಯ ಕಾರ್ಯ ಮಹತ್ತರವಾದುದು. ರಾಜ್ಯ ಸರ್ಕಾರದ ಸೇವೆಗಳಲ್ಲಿ ಇತರೆ ಇಲಾಖೆಗಳಿಗಿಂತಲೂ ಪೊಲೀಸ್ ಇಲಾಖೆಯ ಕಾರ್ಯ ಮಹತ್ವದ್ದಾಗಿದೆ. ಹಗಲಿರುಳು ದುಡಿಯುವ ಪೊಲೀಸರಿಗೆ ಇಲಾಖೆಯಿಂದ ಆರೋಗ್ಯ ಭಾಗ್ಯ ಯೋಜನೆಯಡಿಯಲ್ಲಿ ಕುಟುಂಬದ ಎಲ್ಲ ಸದಸ್ಯರಿಗೂ ಚಿಕಿತ್ಸೆ ಕಲ್ಪಿಸಿರುವುದು ತುಂಬಾ ಅನುಕೂಲಕರವಾಗಿದೆ. ಪೊಲೀಸ್ ಇಲಾಖೆಯಿಂದ ಪ್ರತಿ ತಿಂಗಳು ನಿವೃತ್ತಿ ಹೊಂದುವ ಪೊಲೀಸರಿಗೆ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ಕರ್ತವ್ಯದ ಕೊನೆಯ ದಿನದಂದೇ ಬೀಳ್ಕೊಡುಗೆ ಸಮಾರಂಭ ನೀಡುತ್ತಿರುವುದು ಸಂತಸದ ಸಂಗತಿ ಎಂದು ಶ್ಲಾಘಿಸಿದರು.ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ನಾಗರಿಕರೆಲ್ಲರೂ ಶಾಂತಿ, ನೆಮ್ಮದಿಯಿಂದ ಇರಲು ಹೆಮ್ಮೆಯ ಪೊಲೀಸರು ಕಾರಣ. ಪೊಲೀಸ್ ಇಲಾಖೆಗೆ ಸೇರ್ಪಡೆಯಾಗುವುದು ಪುಣ್ಯದ ಕಾರ್ಯವಾಗಿದೆ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ಅಧೀಕ್ಷಕ ರಂಜಿತ್ ಕುಮಾರ್ ಬಂಡಾರು ಮಾತನಾಡಿ, ಪೊಲೀಸ್ ಕಲ್ಯಾಣ ಕಾರ್ಯಕ್ರಮಗಳ ಮೂಲಕ ಪೊಲೀಸರ ಜೀವನಮಟ್ಟವನ್ನು ಸುಧಾರಿಸುವ ಅವಶ್ಯಕತೆ ಬಗ್ಗೆ ಹೆಚ್ಚಿನ ಗಮನಹರಿಸಬೇಕಾಗಿದೆ. ಈ ಉದ್ದೇಶಕ್ಕಾಗಿ ನಿವೃತ್ತರಾಗಿರುವ ಹಾಗೂ ಸೇವೆಯಲ್ಲಿರುವ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳ ಹಿತಚಿಂತನೆ ಮತ್ತು ಕ್ಷೇಮಾಭಿವೃದ್ಧಿಗಾಗಿ ನಿವೃತ್ತ ಪೊಲೀಸ್ ಅಧಿಕಾರಿಗಳ ಕಲ್ಯಾಣ ನಿಧಿ ಅಡಿಯಲ್ಲಿ ನಿಧಿ ಸಂಗ್ರಹಿಸಿ, ಈ ರೀತಿಯಾಗಿ ಕ್ರೂಢೀಕರಣಗೊಂಡ ಹಣದಲ್ಲಿ ವಿವಿಧ ರೀತಿಯ ಸಹಾಯ ಕಾರ್ಯಕ್ರಮಗಳನ್ನು ಕಾಲಕಾಲಕ್ಕೆ ಹಮ್ಮಿಕೊಂಡು ಬರಲಾಗುತ್ತಿದೆ ಎಂದರು.
ಚಿತ್ರದುರ್ಗ ಉಪವಿಭಾಗ ಡಿವೈಎಸ್‍ಪಿ ದಿನಕರ್, ಚಳ್ಳಕೆರೆ ಡಿವೈಎಸ್‍ಪಿ ರಾಜಣ್ಣ, ಜಿಲ್ಲಾ ಕಾರಾಗೃಹ ಅಧೀಕ್ಷಕ ಸಿದ್ದರಾಮ ಪಾಟೀಲ್, ನಿವೃತ್ತ ಪೊಲೀಸ್ ನೌಕರರ ಸಂಘದ ಅಧ್ಯಕ್ಷ ಭೀಮಾರೆಡ್ಡಿ ಇದ್ದರು.