ನಗರಸಭೆ ಅಧ್ಯಕ್ಷರ ವಿರುದ್ಧ ಇದೇ ಸೋಮವಾರ ಅವಿಶ್ವಾಸ ನಿರ್ಣಯ

KannadaprabhaNewsNetwork | Published : Apr 3, 2025 12:35 AM

ಸಾರಾಂಶ

ಮೊದಲೇ ನಿರ್ಧರಿಸಿದಂತೆ ನಗರಸಭೆ ಅಧ್ಯಕ್ಷರ ಅಧಿಕಾರವಧಿ ಆರು ತಿಂಗಳು ಮುಗಿದಿದ್ದರೂ ರಾಜೀನಾಮೆ ನೀಡಿಲ್ಲ. ಆ ಮನುಷ್ಯನಿಗೆ ಗೌರವವಿಲ್ಲ. ದಿಮಾಕು ಇದ್ದರೆ ಅವರ ಮನೆಯಲ್ಲಿ ಇಟ್ಟುಕೊಳ್ಳಲಿ. ಮುಂದಿನ ಸೋಮವಾರ ಪಕ್ಷದಿಂದ ಸಭೆ ಮಾಡಿ ತೀರ್ಮಾನ ತೆಗೆದುಕೊಂಡು ಕಾನೂನು ಕ್ರಮ ಜರುಗಿಸಲಾಗುವುದು ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಎಚ್ಚರಿಸಿ ಸಿಡಿಮಿಡಿಗೊಂಡರು.

ಹಾಸನ: ಮೊದಲೇ ನಿರ್ಧರಿಸಿದಂತೆ ನಗರಸಭೆ ಅಧ್ಯಕ್ಷರ ಅಧಿಕಾರವಧಿ ಆರು ತಿಂಗಳು ಮುಗಿದಿದ್ದರೂ ರಾಜೀನಾಮೆ ನೀಡಿಲ್ಲ. ಆ ಮನುಷ್ಯನಿಗೆ ಗೌರವವಿಲ್ಲ. ದಿಮಾಕು ಇದ್ದರೆ ಅವರ ಮನೆಯಲ್ಲಿ ಇಟ್ಟುಕೊಳ್ಳಲಿ. ಮುಂದಿನ ಸೋಮವಾರ ಪಕ್ಷದಿಂದ ಸಭೆ ಮಾಡಿ ತೀರ್ಮಾನ ತೆಗೆದುಕೊಂಡು ಕಾನೂನು ಕ್ರಮ ಜರುಗಿಸಲಾಗುವುದು ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಎಚ್ಚರಿಸಿ ಸಿಡಿಮಿಡಿಗೊಂಡರು.

ನಗರದ ಡೇರಿ ವೃತ್ತದ ಬಳಿ ಇರುವ ಹಾಸನ ಹಾಲು ಒಕ್ಕೂಟದಲ್ಲಿ ಬುಧವಾರ ಮಾಧ್ಯಮದೊಂದಿಗೆ ಮಾತನಾಡಿ, ಮುಂದಿನ ಸೋಮವಾರದಂದು ನಮ್ಮ ಪಕ್ಷದಿಂದ ಕುಳಿತು ಸಭೆ ಮಾಡಿ ನಗರಸಭೆ ಅಧ್ಯಕ್ಷರು ರಾಜೀನಾಮೆ ಕೊಡಬೇಕೆಂದು ತೀರ್ಮಾನ ತೆಗೆದುಕೊಳ್ಳುತ್ತೇವೆ. ಅವರು ಹೇಳಿದ ಸಮಯಕ್ಕೆ ರಾಜೀನಾಮೆ ಕೊಡದಿರುವುದರಿಂದ ಅವಿಶ್ವಾಸ ನಿರ್ಣಯ ತೆಗೆದುಕೊಂಡಿದ್ದೇವೆ. ಈಗಾಗಲೇ ಶಾಸಕರು ಮಾರ್ಚ್ ೨೮ರಂದೇ ಅವಿಶ್ವಾಸ ನಿರ್ಣಯ ತಂದಿದ್ದಾರೆ. ಇದಕ್ಕೂ ಒಪ್ಪದಿದ್ದರೇ ಯಾವ ಕಾನೂನು ಕ್ರಮ ಮಾಡಬೇಕು ಎನ್ನುವ ಬಗ್ಗೆ ಮುಂದಿನ ಸೋಮವಾರ ಸಭೆ ಕರೆಯಲಾಗಿದ್ದು, ಅಧ್ಯಕ್ಷರ ವಿರುದ್ಧ ಯಾವ ಕ್ರಮ ತೆಗೆದುಕೊಳ್ಳಬೇಕು ಎನ್ನುವ ಚರ್ಚೆ ಮಾಡಲಾಗುವುದು. ಈಗಾಗಲೇ ಅವಿಶ್ವಾಸ ನಿರ್ಣಯ ತೆಗೆದುಕೊಳ್ಳಲಾಗಿದೆ. ಒಂದು ಸಮಾಜಕ್ಕೆ ಅವಕಾಶ ಕೊಡಬೇಕು ಎನ್ನುವ ದೃಷ್ಠಿಯಲ್ಲಿ ಕಾಪಾಡಿ ಆತನಿಗೆ ಅಧಿಕಾರ ಕೊಡಲಾಗಿತ್ತು. ಆದರೆ ಆ ಮನುಷ್ಯನಿಗೆ ಗೌರವವಿಲ್ಲ. ಆರು ತಿಂಗಳು ಎಂದು ಒಪ್ಪಿಕೊಂಡಂತೆ ಇರಬೇಕು. ಆದರೂ ಅವರು ರಾಜೀನಾಮೆ ಕೊಡದೇ ಇದ್ದರೆ ಇಳಿಸುವುದು ಗೊತ್ತಿದೆ. ಹೆದರಿಸಿದರೇ ಹೆದರಿ ಓಡಿ ಹೋಗುತ್ತೇವೆಯೇ? ಅವನ ದಿಮಾಕು ಇದ್ದರೇ ಮನೆಯಲ್ಲಿ ಇಟ್ಟಿಕೊಳ್ಳಲಿ ಎಂದು ಗುಡುಗಿದರು.

ಬಜೆಟ್ ಆಗಲಿ ರಾಜೀನಾಮೆ ಕೊಡುತ್ತೇನೆ ಎಂದಿದ್ದರು,ಅದಕ್ಕೆ ಸುಮ್ಮನಿದ್ದೆ. ಈಗ ಬಜೆಟ್ ಕೂಡ ಆಗಿ ಹೋಗಿದೆ. ಶಾಸಕರಿಗೆ ಏನೇನೋ ಹೇಳಿದ್ದು, ಅವಿಶ್ವಾಸ ನಿರ್ಣಯಕ್ಕೆ ಬಂದರೇ ನನ್ನ ಪರವಾಗಿಯೇ ನಿರ್ಣಯ ಆಗುವುದು ಎಂದು ನಗರಸಭೆ ಅಧ್ಯಕ್ಷರು ಹೇಳಿರುವುದಾಗಿ ಮಾಧ್ಯಮದವರ ಪ್ರಶ್ನೆಯೊಂದಕ್ಕೆ ರೇವಣ್ಣ ಉತ್ತರಿಸಿ, ನಾನು ೪೦ ವರ್ಷ ರಾಜಕೀಯ ಮಾಡಿದ್ದೇನೆ. ೬ ತಿಂಗಳು ಮುಗಿದ ನಂತರ ರಾಜೀನಾಮೆ ನೀಡಬೇಕು ಎಂದು ನನಗೆ ಯಾರೂ ಹೇಳಿರಲಿಲ್ಲ ಎಂದು ದೇವರ ಮುಂದೆ ಆಣೆ ಮಾಡಲಿ. ಸ್ಥಳೀಯ ಶಾಸಕರ ಕಾರಣಕ್ಕೆ ನಾನು ಇಷ್ಟು ದಿನ ಸುಮ್ಮನಿದ್ದೆ. ಮುಂದೆ ಕಾನೂನು ಪ್ರಕಾರ ಏನು ಮಾಡಬೇಕು ಗೊತ್ತಿದೆ ಎಂದರು.

Share this article