ಕನ್ನಡಪ್ರಭ ವಾರ್ತೆ ಹಾಸನ
ಭಾರೀ ಕುತೂಹಲ ಮೂಡಿಸಿದ್ದ ಬೂವನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತರು ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.ಇದೇ ಮೊದಲ ಬಾರಿಗೆ ಸಾಲಗಾರರಲ್ಲದ ಕ್ಷೇತ್ರದಿಂದ ಸ್ಪರ್ಧಿಸಿ ಕೇವಲ ೧ ಮತದ ಅಂತರದಿಂದ ಭರ್ಜರಿ ಜಯ ಸಾಧಿಸಿದ್ದ ಬಿ.ಆರ್.ಬೊಮ್ಮೇಗೌಡ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದರು.ಚುನಾವಣೆ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆಯೇ ಒಟ್ಟು ೧೧ ಸದಸ್ಯ ಬಲದ ಸಂಘದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಿ.ಆರ್.ಬೊಮ್ಮೇಗೌಡ ಹಾಗೂ ಗಣೇಶ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಇಂದ್ರಮ್ಮ ಹಾಗೂ ವಿಜಯಲಕ್ಷ್ಮಿ ಎಂಬುವರು ನಾಮಪತ್ರ ಸಲ್ಲಿಸಿದ್ದರು. ಚುನಾವಣೆಯಲ್ಲಿ ಬಿ.ಆರ್. ಬೊಮ್ಮೇಗೌಡ ಹಾಗೂ ವಿಜಯಲಕ್ಷ್ಮಿ ಅವರು ತಲಾ ೬ ಮತ ಪಡೆದು ಆಯ್ಕೆಯಾದರು.
ಶಾಸಕರ ಅಭಿನಂದನೆ: ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಜೆಡಿಎಸ್ ಬೆಂಬಲಿತರು ಅಧಿಕಾರ ಹಿಡಿದಿರುವುದಕ್ಕೆ ಎಚ್.ಪಿ.ಸ್ವರೂಪ್ ಪ್ರಕಾಶ್, ಅಭಿನಂದನೆ ಸಲ್ಲಿಸಿದ್ದು, ತಮ್ಮ ಕಡೆಯಿಂದಲೂ ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ.ಹಾಗೆಯೇ ಜಿಪಂ ಮಾಜಿ ಉಪಾಧ್ಯಕ್ಷ ಸ್ವಾಮಿಗೌಡ, ತಾಪಂ ಮಾಜಿ ಅಧ್ಯಕ್ಷ ಜಯರಾಂ, ಬೂವನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ತುಳಸಿರಾಂ, ಸಹಕಾರ ಸಂಘದ ಮಾಜಿ ಅಧ್ಯಕ್ಷ ಮಲ್ಲೇಶ ಹಾಗೂ ಬೂವನಹಳ್ಳಿ ಗ್ರಾಮಸ್ಥರು ಅಭಿನಂದಿಸಿದ್ದಾರೆ.ಚುನಾವಣೆ ಮುಗಿದ ಬಳಿಕ ಬೆಂಬಲಿಗರು, ಅಭಿಮಾನಿಗಳು ಹಾಗೂ ಗ್ರಾಮಸ್ಥರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಪರಸ್ಪರ ಜಯಘೋಷ ಮೊಳಗಿಸಿ, ಸಿಹಿ ಹಂಚಿ ಕುಣಿದಾಡಿದರು. ಇದಕ್ಕೂ ಮುನ್ನ ಅಂದರೆ ಮಾ.೨೩ ರಂದು ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲುವ ಮೂಲಕ ಜೆಡಿಎಸ್ ತನ್ನ ಪ್ರಾಬಲ್ಯ ಸಾಬೀತು ಮಾಡಿತ್ತು.ಸಾಲಗಾರರ ಕ್ಷೇತ್ರದ ಒಟ್ಟು ೧೧ ಸ್ಥಾನ, ಸಾಲಗಾರರಲ್ಲದ ಕ್ಷೇತ್ರದ ೧ ಸ್ಥಾನ ಸೇರಿ ಒಟ್ಟು ೧೨ ಸ್ಥಾನಗಳ ಪೈಕಿ ಪರಿಶಿಷ್ಟ ವರ್ಗದ ೧ ಸ್ಥಾನಕ್ಕೆ ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ೧೧ ನಿರ್ದೇಶಕರು ಆಯ್ಕೆಯಾಗಿದ್ದರು. ಇವರಲ್ಲಿ ಜೆಡಿಎಸ್ ಬೆಂಬಲಿತರು ೬ ಮತ್ತು ಬಿಜೆಪಿ ಬೆಂಬಲಿತರು ೫ ಸ್ಥಾನಗಳಲ್ಲಿ ಗೆಲುವಿನ ನಗೆ ಬೀರಿದ್ದರು. ಈ ಮೂಲಕ ಅಧಿಕಾರ ಹಿಡಿಯಲು ಹತ್ತಿರ ಆಗಿದ್ದರು. ಅದರಂತೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತರು ಗೆಲುವು ಸಾಧಿಸುವ ಮೂಲಕ ನಿರೀಕ್ಷೆಯಂತೆಯೇ ಅಧಿಕಾರ ಹಿಡಿದಿದ್ದಾರೆ. ಈ ಚುನಾಯಿತ ಮಂಡಳಿ ಮುಂದಿನ ೫ ವರ್ಷಗಳ ಅವಧಿಗೆ ಆಡಳಿತ ನಡೆಸಲಿದೆ.ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಬೊಮ್ಮೇಗೌಡ, ಇಂದಿನ ಚುನಾವಣೆಯೊಂದಿಗೆ ನಮ್ಮ ನಡುವಿನ ಪೈಪೋಟಿ ಮುಕ್ತಾಯವಾಗಿದೆ. ಇನ್ನು ಮುಂದೆ ನಾವೆಲ್ಲರೂ ಒಗ್ಗೂಡಿ ಸಂಘದ ಅಭಿವೃದ್ಧಿಗೆ ಶ್ರಮಿಸೋಣ ಎಂದರು. ಈ ನಿಟ್ಟಿನಲ್ಲಿ ನಾನು ಎಲ್ಲಾ ನಿರ್ದೇಶಕರ ಸಹಕಾರ ಬಯಸುತ್ತೇನೆ. ಎಲ್ಲರೂ ಒಟ್ಟಾಗಿ ಉತ್ತಮ ಅಭಿವೃದ್ಧಿ, ಕೆಲಸ-ಕಾರ್ಯಗಳ ಮೂಲಕ ಸಂಘವನ್ನು ಮಾದರಿಯಾಗಿ ಮಾಡಲು ದುಡಿಯೋಣ ಎಂದರು.