ಬಜೆಟಲ್ಲಿ ಎಲ್ಲಾ ಸಮುದಾಯಗಳಿಗೂ ಸೂಕ್ತ ನ್ಯಾಯ: ಎನ್.ಚಲುವರಾಯಸ್ವಾಮಿ

KannadaprabhaNewsNetwork |  
Published : Mar 12, 2025, 12:49 AM IST
11ಕೆಎಂಎನ್ ಡಿ18 | Kannada Prabha

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಸ್ಲಿಂ ಸಮುದಾಯ ಸೇರಿದಂತೆ ರಾಜ್ಯದ ಎಲ್ಲಾ ಸಮುದಾಯಗಳನ್ನು ಗುರಿಯಾಗಿಸಿಕೊಂಡು ಬಜೆಟ್ ಮಂಡಿಸಿದ್ದಾರೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಸ್ಲಿಂ ಸಮುದಾಯ ಸೇರಿದಂತೆ ರಾಜ್ಯದ ಎಲ್ಲಾ ಸಮುದಾಯಗಳನ್ನು ಗುರಿಯಾಗಿಸಿಕೊಂಡು ಬಜೆಟ್ ಮಂಡಿಸಿದ್ದಾರೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

ಇಲ್ಲಿನ ಚಾಂಷುಗರ್ ಅತಿಥಿಗೃಹದಲ್ಲಿ ಮನ್ಮುಲ್ ನಿರ್ದೇಶಕ ಹರೀಶ್ ಬಾಬು ಅವರಿಂದ ಅಭಿನಂದನೆ ಸ್ವೀಕರಿಸಿದ ಬಳಿಕ ಸುದ್ದಿಗಾರೊಂದಿಗೆ ಮಾತನಾಡಿ, ಮುಸ್ಲಿಂ ಸಮುದಾಯದ ಓಲೈಕೆಗಾಗಿ ಬಜೆಟ್ ನಲ್ಲಿ ಹೆಚ್ಚು ಆದ್ಯತೆ ನೀಡಿದ್ದಾರೆ ಎಂಬ ಬಿಜೆಪಿ ನಾಯಕರ ಟೀಕೆಗೆ, ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿ ಯೋಜನೆಯನ್ನು ಯಾವುದೇ ತಾರತಮ್ಯವಿಲ್ಲದೆ ಎಲ್ಲಾ ಸಮುದಾಯಕ್ಕೂ ನೀಡುತ್ತಿಲ್ಲವೇ ಎಂದು ತಿರುಗೇಟು ನೀಡಿದರು.

ಕೃಷಿ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಗಳಲ್ಲಿಯೂ ಯೋಜನೆಗಳನ್ನು ಎಲ್ಲಾ ಜನರಿಗೂ ಕೊಡುತ್ತಿದ್ದೇವೆ. ಪೆನ್ಷನ್ ಹಣವನ್ನು ಎಲ್ಲಾ ಸಮುದಾಯದ ಹಿರಿಯ ನಾಗರಿಕರಿಗೂ ನೀಡಲಾಗುತ್ತಿದೆ. ನಾವು ಯಾವುದೇ ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಯೋಜನೆಗಳನ್ನು ನೀಡುತ್ತಿಲ್ಲ ಎಂದರು.

ಅಂಕಿ- ಅಂಶಗಳ ಪ್ರಕಾರ ವಿದ್ಯಾಭ್ಯಾಸದಲ್ಲಿ ಹಿಂದುಳಿದ ಸಮುದಾಯದ ಮಕ್ಕಳ ವಿದ್ಯಾಭ್ಯಾಸಕ್ಕೆ ಬಜೆಟ್ ನಲ್ಲಿ ಹೆಚ್ಚು ಅನುದಾನ ನೀಡಿದ್ದಾರೆ. ಇದರಲ್ಲಿ ಯಾವುದೇ ತಾರತಮ್ಯ ಮಾಡಿಲ್ಲ. ಮುಸ್ಲಿಂ ವಿದ್ಯಾರ್ಥಿಗಳು ಹೊರ ದೇಶಕ್ಕೆ ಹೋಗಿ ಉನ್ನತ ವಿದ್ಯಾಭ್ಯಾಸ ಮಾಡಲು 10 ಲಕ್ಷ ರು. ನೀಡಿರುವುದನ್ನು ಸಮರ್ಥಿಸಿಕೊಂಡರು.

ಸರ್ಕಾರ ಕೇವಲ ಮುಸ್ಲಿಂ ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಸಮಾಜದ ಎಲ್ಲ ಸಮುದಾಯದ ಮಕ್ಕಳಿಗೂ ಆದ್ಯತೆ ನೀಡುತ್ತಿದೆ. ಗ್ರಾಮೀಣ ಮಟ್ಟದ ಶಾಲೆಗಳನ್ನು ನಗರ ಪ್ರದೇಶದ ಶಾಲೆಗಳಂತೆ ಉನ್ನತೀಕರಣಕ್ಕೆ ಸಿಎಂ, ಡಿಸಿಎಂ ಶ್ರಮಿಸುತ್ತಿದ್ದಾರೆ. ಶಾಲೆಗಳಿಗೆ ಸೌಲಭ್ಯ ಕಲ್ಪಿಸಲು ಮುಂದಾಗಿದ್ದಾರೆ. 45 ಸಾವಿರ ಅತಿಥಿ ಶಿಕ್ಷಕರ ನೇಮಿಸಲು ಕೋರ್ಟ್ ನಲ್ಲಿದ್ದ ಸಮಸ್ಯೆ ಬಗೆಹರಿಸಿ ನೇಮಕಾತಿ ಮಾಡಲು ಕ್ರಮ ವಹಿಸುತ್ತಿದೆ ಎಂದು ತಿಳಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರರಿಗೆ ಯಾವುದೇ ಬಂಡವಾಳವಿಲ್ಲ. ಕೇಂದ್ರ ಸರ್ಕಾರದ ಯೋಜನೆಗಳು ಪರಿಪೂರ್ಣವಾಗಿ ರಾಜ್ಯಕ್ಕೆ ಪರಿಣಾಮ ಬೀರಲ್ಲ. ಬಿಜೆಪಿಯವರು ಈ ಹಿಂದೆ 5 ವರ್ಷ ಆಡಳಿತ ನಡೆಸಿದಾಗ ಜನರಿಗೆ ಯಾವುದೇ ಯೋಜನೆ ಕೊಡಲಿಲ್ಲ. ಮುಂದೆ ಈ ರೀತಿ ಮಾಡುತ್ತೇವೆ ಎಂಬ ಸ್ಪಷ್ಟವಾದ ನಾಯಕತ್ವವಿಲ್ಲ ಎಂದರು.

ವಿಜಯೇಂದ್ರರಿಗೆ ಸರ್ಕಾರವನ್ನು ಟೀಕಿಸಲು ಯಾವುದೇ ವಿಷಯಗಳಿಲ್ಲ. ಹಿಂದುಗಳ ಬಗ್ಗೆ ಸರ್ಕಾರ ತಾರತಮ್ಯ ಮಾಡುತ್ತಿದೆ ಅಂತ ಹೇಳಿದರೆ ಗ್ರಾಮೀಣ ಪ್ರದೇಶದ ಮುಗ್ದರನ್ನು ಸೆಳೆಯಬಹುದು ಎಂದುಕೊಂಡಿದ್ದಾರೆ. ಇದು ವರ್ಕೌಟ್ ಆಗಲ್ಲ ಎಂದು ವ್ಯಂಗ್ಯವಾಡಿದರು.

ಸಿಎಂ ಪುತ್ರ ಯತೀಂದ್ರ ಅವರು ತಂದೆ ಮುಂದಿನ ಬಾರಿಯೂ ಬಜೆಟ್ ಮಂಡಿಸುತ್ತಾರೆ ಎಂಬ ಹೇಳಿಕೆಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಸಿಎಂ ಸಿದ್ದರಾಮಯ್ಯ ಅಪಾರ ರಾಜಕೀಯ ಜ್ಞಾನ, ಆರ್ಥಿಕ ತಜ್ಞರಾಗಿ 16ನೇ ಬಜೆಟ್ ಮಂಡಿಸಿ ಇತಿಹಾಸ ಸೃಷ್ಟಿಸಿದ್ದಾರೆ. ಇಂಡಿಯಾವೇ ರಾಜ್ಯವನ್ನು ಗುರುತಿಸುವಂತೆ ಮಾಡಿದ್ದಾರೆ. ಅವರಿಗೆ ಸಾಲ ಎಷ್ಟು ತೆಗೆದುಕೊಳ್ಳಬೇಕು, ಯಾವುದಕ್ಕೆ ಎಷ್ಟು ಹಣ ನೀಡಬೇಕು ಎಂಬುದು ತಿಳಿದಿದೆ. ಬೇರೆಯವರಿಂದ ಪಾಠ ಕಲಿಯುವ ಅಗತ್ಯವಿಲ್ಲ ಎಂದು ಹೇಳಿದರು.

ಈ ವೇಳೆ ಶಾಸಕ ಕದಲೂರು ಉದಯ್, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅವರನ್ನು ಅಭಿನಂದಿಸಲಾಯಿತು. ಡಿಸಿಸಿ ಬ್ಯಾಂಕ್ ನಿರ್ದೇಶಕ ಜೋಗೀಗೌಡ, ಮೈಷುಗರ್ ಅಧ್ಯಕ್ಷ ಸಿ.ಡಿ. ಗಂಗಾಧರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಎಸ್. ರಾಜೀವ್, ಮುಖಂಡರಾದ ಅಜ್ಜಹಳ್ಳಿ ರಾಮಕೃಷ್ಣ, ದೇವರಹಳ್ಳಿ ದೊಡ್ಡೇಗೌಡ, ತೊರೆಬೊಮ್ಮನಹಳ್ಳಿ ವೆಂಕಟೇಶ್, ಕದಲೂರು ತಿಮ್ಮೇಗೌಡ ಸೇರಿದಂತೆ ಮತ್ತಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ವಾರ್ಥಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡಲು ಇಷ್ಟವಿಲ್ಲ: ಡಿಸಿಎಂ
ಒಪಿಎಸ್‌ ಜಾರಿಗೆ ಸರ್ಕಾರಕ್ಕೆ ಒತ್ತಾಯಿಸುವೆ-ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಒತ್ತಾಯ