ಚನ್ನಪಟ್ಟಣ: ನಗರಕ್ಕೆ ಯುಜಿಡಿ ವ್ಯವಸ್ಥೆ ಕಲ್ಪಿಸಲು ಸರ್ಕಾರದಿಂದ ೧೨೮ ಕೋಟಿ ಕ್ರಿಯಾ ಯೋಜನೆ ಆಡಳಿತಾತ್ಮಕ ಅನುಮೋದನೆ ದೊರೆತಿದ್ದು, ಈ ಯೋಜನೆ ಜಾರಿಗೆ ಅಗತ್ಯವಿರುವ ಭೂ ಸ್ವಾಧೀನಕ್ಕೆ ಹೆಚ್ಚುವರಿ ಹಣ ಹೊಂದಿಸಲು ನಗರಸಭೆಯಿಂದ ಖರಿದೀಸಿರುವ ಸ್ವತ್ತನ್ನು ಮಾರಾಟ ಮಾಡಲು ಹಾಗೂ ಮುಂದಿನ ತಿಂಗಳು ನಗರಸಭಾ ಸದಸ್ಯರ ಅಧ್ಯಯನ ಪ್ರವಾಸಕ್ಕೆ ನಗರಸಭೆ ವಿಶೇಷ ಸಭೆಯಲ್ಲಿ ಒಮ್ಮತದ ತೀರ್ಮಾನ ತೆಗೆದುಕೊಳ್ಳಲಾಯಿತು.
ನಗರಸಭೆ ಅಧ್ಯಕ್ಷ ವಾಸಿಲ್ ಆಲಿಖಾನ್ ಮಾತನಾಡಿ, ಮೊದಲಿಗೆ ಯುಜಿಡಿ ಸಮಸ್ಯೆ ನಿವಾರಣಗೆಂದು ಹಣ ಬಿಡುಗಡೆ ಮಾಡಿದ ಸರಕಾರಕ್ಕೂ, ಈ ವಿಚಾರದಲ್ಲಿ ಸಾಕಷ್ಟು ಶ್ರಮ ವಹಿಸಿದ ಶಾಸಕರಿಗೂ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು. ಸಭೆಯಲ್ಲಿ ಯುಜಿಡಿ ಯೋಜನೆ ಜಾರಿ ಸಂಬಂಧ ಅಗತ್ಯವಿರುವ ಭೂ ಸ್ವಾಧೀನಕ್ಕೆ ಅವಶ್ಯವಿರುವ ಆರು ಕೋಟಿ ಹಣವನ್ನು ಸಂಗ್ರಹಿಸುವ ಬಗ್ಗೆ ಚರ್ಚಿಸಲಾಯಿತು.
ನಗರಸಭೆಯಲ್ಲಿ ಅಷ್ಟು ಹಣ ಇಲ್ಲದಿರುವ ಬಗ್ಗೆ ಹಾಗೂ ಬೇರೆ ಮೂಲಗಳಿಂದ ಹಣ ಸಂಗ್ರಹಿಸಲು ಸಾಧ್ಯವಾಗದಿರುವ ಬಗ್ಗೆ ಪೌರಾಯುಕ್ತರು ಮಾಹಿತಿ ನೀಡಿದ ಬಳಿಕ ಕೂಡ್ಲೂರು ಬಳಿ ಇರುವ ನಗರಸಭೆಯ ನಾಲ್ಕು ಎಕರೆ ಜಾಗವನ್ನು ಮಾರುವ ಬಗ್ಗೆ ಚರ್ಚೆ ಕೈಗೆತ್ತಿಕೊಳ್ಳಲಾಯಿತು. ಇದಕ್ಕೆ ಒಪ್ಪಿಗೆ ಸೂಚಿಸಿದ ಸರ್ವ ಸದಸ್ಯರು ಮೊದಲು ಜಾಗವನ್ನು ಸ್ವಚ್ಚಗೊಳಿಸಿ ಬಳಿಕ ಎಸ್‌ಆರ್ ವ್ಯಾಲ್ಯೂ ಪಡೆದುಕೊಂಡು ಸಾರ್ವಜನಿಕ ಪ್ರಕಟಣೆ ಹೊರಡಿಸಿ ಮಾರಾಟ ಮಾಡುವುದೆಂದು ಸಭೆಯು ಅಂತಿಮ ನಿರ್ಣಯಕ್ಕೆ ಬಂದಿತ್ತು.ನಗರಸಭೆ ಸದಸ್ಯರ ಅಧ್ಯಯನ ಪ್ರವಾಸಕ್ಕೆ ಪೌರಾಡಳಿತ ನಿರ್ದೇಶನಾಲಯ ಒಪ್ಪಿಗೆಯನ್ನು ಸೂಚಿಸಿದ್ದು, ಎಲ್ಲಾ ಸದಸ್ಯರು ಒಪ್ಪಿಗೆ ಸೂಚಿಸಿದರೆ ದಿನಾಂಕ ನಿಗಧಿಗೊಳಿಸಿ ಪ್ರವಾಸ ಕೈಗೊಳ್ಳಲು ಚರ್ಚೆ ನಡೆಯಿತು.
ಸಭೆಯಲ್ಲಿ ಉಪಾಧ್ಯಕ್ಷ ಲೋಕೇಶ್, ಪೌರಾಯುಕ್ತ ಮಹೇಂದ್ರ , ನಗರಸಭಾ ಸದಸ್ಯರಾದ ನಾಗೇಶ್, ಕಂಠಿ, ಮಂಜುನಾಥ್, ಮತೀನ್, ಸುಮಾ ರವೀಶ್, ಜಯಮಾಲಾ, ವಿವೇಕ್ ಸೇರಿದಂತೆ ಹಲವರು ಹಾಜರಿದ್ದರು.
ಸದಸ್ಯ ಸ್ಥಾನಕ್ಕೂ ರಾಜಿನಾಮೆ ಬೇಕಾ: ಶ್ರೀನಿವಾಸಮೂರ್ತಿ
ಶಾಸಕರು ನಮ್ಮ ವಾರ್ಡಿಗೆ ಬರುವ ವಿಚಾರವನ್ನು ನನ್ನ ಗಮನಕ್ಕೆ ತರದಿದ್ದ ಮೇಲೆ ನಾನು ಸದಸ್ಯನಾಗಿದ್ದು ಏನು ಪ್ರಯೋಜನ, ನಿಮಗೆ ಯಾರು ಬೇಕೊ ಅವರಿಗೆ ಮಾತ್ರ ಮಾಹಿತಿ ನೀಡುತ್ತೀರಾ. ವಾರ್ಡ್ ಜನ ಏನಾದರೂ ಸಮಸ್ಯೆ ಎಂದರೆ ನಮ್ಮ ಮನೆ ಹತ್ತಿರ ಬಂದು ಕೇಳುತ್ತಾರೆ. ಅವರಿಗೆ ನಾನೇ ಉತ್ತರ ನೀಡಬೇಕು. ಶಾಸಕರಾಗಲೂ ನಾವು ಮತಗಳನ್ನು ಹಾಕಿಸಿದ್ದು, ಇದೀಗ ನಮ್ಮನ್ನು ಕಡೆಗಣಿಸುವುದು ಎಷ್ಟು ಸರಿ? ಇದಕ್ಕೆ ಕೆಲ ಸದಸ್ಯರು ಸಹ ಧನಿಗೂಡಿಸಿ ಸದಸ್ಯರು ಹಕ್ಕನ್ನು ಮೊಟಕುಗೊಳಿಸುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಚನ್ನಪಟ್ಟಣ ನಗರಸಭಾ ಸಭಾಂಗಣದಲ್ಲಿ ಅಧ್ಯಕ್ಷ ವಾಸೀಲ್ ಅಲಿಖಾನ್ ಅಧ್ಯಕ್ಷತೆಯಲ್ಲಿ ವಿಶೇಷ ಸಭೆ ನಡೆಯಿತು.