ಆಟೋ ಪ್ರಯಾಣಕ್ಕೆ ಆ್ಯಪ್ ವೇಗ: ಚಾಲಕರ ಬದುಕಿಗೆ ಸ್ಪರ್ಧೆಯ ಬಿಸಿ!

KannadaprabhaNewsNetwork |  
Published : Nov 05, 2026, 02:00 AM IST
ಹುಬ್ಬಳ್ಳಿ ನಗರದ ನಿಲ್ದಾಣದಲ್ಲಿ ಗ್ರಾಹಕರಿಗಾಗಿ ಕಾಯುತ್ತಿರುವ ಆಟೋಚಾಲಕರು. | Kannada Prabha

ಸಾರಾಂಶ

ಡಿಜಿಟಲ್ ಬದಲಾವಣೆ ಮಹಾನಗರದ ಸಾರಿಗೆ ಕ್ಷೇತ್ರದಲ್ಲಿ ಹೊಸ ಸಂಚಲನ ಮೂಡಿಸಿದ್ದು, ಆಟೋ ಚಾಲಕರ ವಲಯದಲ್ಲಿ ಪರ-ವಿರೋಧದ ಚರ್ಚೆಗೆ ಕಾರಣವಾಗಿದೆ.

ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ:

ಆಟೋ ಹತ್ತುವ ಮುನ್ನ ದರದ ಚೌಕಾಸಿ, ಪ್ರಯಾಣ ಮುಗಿದ ಬಳಿಕವೂ ಹಣದ ವಿಚಾರದಲ್ಲಿ ಕಿರಿಕಿರಿ. ಹುಬ್ಬಳ್ಳಿ-ಧಾರವಾಡದ ಪ್ರಯಾಣಿಕರಿಗೆ ಇದು ಸಾಮಾನ್ಯ ಅನುಭವ. ಆದರೆ, ಈಗ ಕಾಲ ಬದಲಾಗುತ್ತಿದೆ. ಕೈಯಲ್ಲೊಂದು ಸ್ಮಾರ್ಟ್‌ಫೋನ್ ಇದ್ದರೆ ಸಾಕು, ಮನೆ ಬಾಗಿಲಿಗೆ ಆಟೋ ಬುಕ್ ಮಾಡಬಹುದು. ಪ್ರಯಾಣದ ದರವನ್ನೂ ಮೊದಲೇ ತಿಳಿಯಬಹುದು!

ಈ ಡಿಜಿಟಲ್ ಬದಲಾವಣೆ ಅವಳಿ ನಗರದ ಸಾರಿಗೆ ಕ್ಷೇತ್ರದಲ್ಲಿ ಹೊಸ ಸಂಚಲನ ಮೂಡಿಸಿದ್ದು, ಆಟೋ ಚಾಲಕರ ವಲಯದಲ್ಲಿ ಪರ-ವಿರೋಧದ ಚರ್ಚೆಗೆ ಕಾರಣವಾಗಿದೆ. ನಮ್ಮ ಯಾತ್ರಿ, ರ‍್ಯಾಪಿಡೊ, ಉಬರ್ ಸೇರಿದಂತೆ ವಿವಿಧ ಆ್ಯಪ್ ಆಧಾರಿತ ಸೇವೆಗಳು ಕಾರ್ಯಾರಂಭ ಮಾಡಿವೆ. ಆಟೋಗಳ ಜತೆಗೆ ಕ್ಯಾಬ್, ಬೈಕ್ ಟ್ಯಾಕ್ಸಿಗಳೂ ಪ್ರವೇಶಿಸಿವೆ. ದರದ ಚೌಕಾಸಿ ತಪ್ಪಿಸಿ, ಮೊಬೈಲ್ ಮೂಲಕವೇ ವಾಹನ ಬುಕ್ ಮಾಡುವ ಅವಕಾಶ ಪ್ರಯಾಣಿಕರನ್ನು ಆಕರ್ಷಿಸುತ್ತಿದೆ.

ಮೀಟರ್ ಇಲ್ಲದ ವ್ಯವಸ್ಥೆಗೆ ಪರ್ಯಾಯ:

ಹುಬ್ಬಳ್ಳಿ-ಧಾರವಾಡದಲ್ಲಿ 25 ಸಾವಿರಕ್ಕೂ ಹೆಚ್ಚು ಆಟೋಗಳಿವೆ. ಆದರೆ, ಬೆರಳೆಣಿಕೆಯಷ್ಟು ಆಟೋಗಳಲ್ಲಿ ಮಾತ್ರ ಮೀಟರ್ ವ್ಯವಸ್ಥೆಯಿದೆ. ಉಳಿದ ವಾಹನಗಳಲ್ಲಿ ಸಮರ್ಪಕ ಮೀಟರ್ ಇಲ್ಲದ ಕಾರಣ ಪ್ರಯಾಣಿಕರಿಂದ ಹೆಚ್ಚಿನ ದರ ವಸೂಲಿ ಮಾಡಲಾಗುತ್ತಿದೆ ಎಂಬ ದೂರುಗಳಿವೆ. ಮೀಟರ್ ಅಳವಡಿಸಿ ನಿಗದಿತ ದರ ಜಾರಿಗೊಳಿಸುವಂತೆ ಸಾರ್ವಜನಿಕರು ಜಿಲ್ಲಾಡಳಿತ ಹಾಗೂ ಆರ್‌ಟಿಒಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಬೇಡಿಕೆ ಈಡೇರಿಲ್ಲ.

ಇಂತಹ ಸಂದರ್ಭದಲ್ಲಿ ಆ್ಯಪ್ ಸೇವೆಗಳು ನಿಗದಿತ ದರದೊಂದಿಗೆ ಪ್ರಯಾಣದ ಆಯ್ಕೆ ಒದಗಿಸಿರುವುದು ಸಾರ್ವಜನಿಕರಿಗೆ ಪರ್ಯಾಯ ವ್ಯವಸ್ಥೆಯಾಗಿದೆ.

ಪ್ರಯಾಣಿಕರಿಗೆ ಕೈಗೆಟುಕುವ ದರ, ಚಾಲಕರಿಗೆ ನ್ಯಾಯಯುತ ಆದಾಯ ಹಾಗೂ ಕಂಪನಿಗಳ ನಿಯಮಗಳಲ್ಲಿ ಪಾರದರ್ಶಕತೆ ಇಂದಿನ ಅಗತ್ಯವಾಗಿದೆ. ಆ್ಯಪ್ ಸೇವೆಗಳನ್ನು ವಿರೋಧಿಸುವ ಜತೆಗೆ ಸಾಂಪ್ರದಾಯಿಕ ಆಟೋ ವ್ಯವಸ್ಥೆಯ ಲೋಪಗಳನ್ನೂ ಸರಿಪಡಿಸಿ, ಎರಡೂ ವರ್ಗಗಳ ಹಿತ ಕಾಪಾಡುವ ಸಮಗ್ರ ನೀತಿ ರೂಪಿಸುವುದು ಜಿಲ್ಲಾಡಳಿತ ಮತ್ತು ಸಾರಿಗೆ ಇಲಾಖೆಯ ಮುಂದಿರುವ ಸವಾಲಾಗಿದೆ.

ಚಾಲಕರಿಗೂ ಹೆಚ್ಚಿದ ಆದಾಯ:

ಆ್ಯಪ್ ಸೇವೆಗಳು ಪ್ರಯಾಣಿಕರ ಜತೆಗೆ ಚಾಲಕರಿಗೂ ಅನುಕೂಲವಾಗುತ್ತಿವೆ ಎಂಬುದು ಮತ್ತೊಂದು ವರ್ಗದ ಅಭಿಪ್ರಾಯ. ಜನರು ಆಹಾರ, ದಿನಸಿ, ತರಕಾರಿ ಖರೀದಿಗೂ ಮೊಬೈಲ್ ಆ್ಯಪ್ ಬಳಸುತ್ತಿದ್ದಾರೆ. ಸಾರಿಗೆ ಕ್ಷೇತ್ರವೂ ಬದಲಾವಣೆಗೆ ಹೊಂದಿಕೊಳ್ಳಬೇಕಿದೆ. ಅಗ್ರಿಗೇಟರ್‌ಗಳೊಂದಿಗೆ ಕೈಜೋಡಿಸಿರುವ ಚಾಲಕರಿಗೆ ಉತ್ತಮ ಸಂಖ್ಯೆಯಲ್ಲಿ ಪ್ರಯಾಣಿಕರು ದೊರೆಯುತ್ತಿದ್ದಾರೆ. ಚಾಲಕರು ಮತ್ತು ಕುಟುಂಬದವರಿಗೆ ವಿಮೆ ಸೇರಿದಂತೆ ಹಲವು ಸೌಲಭ್ಯಗಳೂ ಲಭ್ಯವಾಗುತ್ತಿವೆ. ಹೀಗಾಗಿ ಈ ವ್ಯವಸ್ಥೆಯನ್ನು ಬೆಂಬಲಿಸುವುದಾಗಿ ಡಾ. ಬಿ.ಆರ್. ಅಂಬೇಡ್ಕರ್ ಆಟೋ ಚಾಲಕರ ಸಂಘದ ರಾಜ್ಯಾಧ್ಯಕ್ಷ ವಿಶ್ವನಾಥ ಬೂದೂರ "ಕನ್ನಡಪ್ರಭ "ಕ್ಕೆ ತಿಳಿಸಿದರು.

ಸೇವಾ ಶುಲ್ಕದ ವಿರುದ್ಧ ಆಕ್ರೋಶ:

ಇನ್ನೊಂದೆಡೆ, ಉತ್ತರ ಕರ್ನಾಟಕ ಆಟೋ ರಿಕ್ಷಾ ಚಾಲಕರ ಸಂಘವು ಆ್ಯಪ್ ಸೇವೆಗಳ ವಿರುದ್ಧ ಪ್ರತಿಭಟನೆ ನಡೆಸಿದೆ. ಕಂಪನಿಗಳು ಏಕಪಕ್ಷೀಯ ನಿಯಮಗಳನ್ನು ಜಾರಿಗೊಳಿಸಿ, ಪ್ರಯಾಣಿಕರು ಮತ್ತು ಚಾಲಕರಿಬ್ಬರಿಂದಲೂ ಸೇವಾ ಶುಲ್ಕ ವಸೂಲಿ ಮಾಡುತ್ತಿವೆ. ಇದರಿಂದ ಸಾಂಪ್ರದಾಯಿಕ ಆಟೋ ಚಾಲಕರ ಆದಾಯಕ್ಕೆ ಹೊಡೆತ ಬೀಳುತ್ತಿದೆ. ರಾಜ್ಯದಲ್ಲಿ ಆ್ಯಪ್ ಆಧಾರಿತ ಆಟೋ ಸೇವೆಗಳನ್ನು ನಿಷೇಧಿಸಿ ಚಾಲಕರ ಹಿತಾಸಕ್ತಿ ಕಾಪಾಡಬೇಕು. ಈ ಕುರಿತು ದೀಪಾವಳಿ ನಂತರ ಅವಳಿ ನಗರದ ಎಲ್ಲ ಆಟೋ ಸಂಘಟನೆಗಳನ್ನು ಒಗ್ಗೂಡಿಸಿ ಮುಂದಿನ ಹೋರಾಟ ರೂಪಿಸುವುದಾಗಿ ಸಂಘದ ರಾಜ್ಯಾಧ್ಯಕ್ಷ ಶೇಖರಯ್ಯ ಮಠಪತಿ "ಕನ್ನಡಪ್ರಭ "ಕ್ಕೆ ತಿಳಿಸಿದರು.ಕೋವಿಡ್ ಹಾಗೂ ಶಕ್ತಿ ಯೋಜನೆ ಆರಂಭವಾದ ಬಳಿಕ ಆಟೋಗಳಲ್ಲಿ ಪ್ರಯಾಣಿಸುವವರ ಸಂಖ್ಯೆ ಕಡಿಮೆಯಾಗಿತ್ತು. ಆ್ಯಪ್ ಸೇವೆಗಳಿಂದ ಗ್ರಾಹಕರಿಗೆ ದರದ ಹೊರೆ ಕಡಿಮೆಯಾಗಿದೆ. ನಮಗೂ ಹೆಚ್ಚಿನ ಗ್ರಾಹಕರು ಸಿಗುತ್ತಿದ್ದಾರೆ.

ಮನೋಹರ ಹೆಬ್ಬಳ್ಳಿ, ಆಟೋ ಚಾಲಕ, ಹುಬ್ಬಳ್ಳಿಆ್ಯಪ್ ಮೂಲಕ ಆಟೋ ಬುಕ್ ಮಾಡುವುದು ಅನುಕೂಲಕರವಾಗಿದೆ. ನಾವು ಇರುವ ಸ್ಥಳಕ್ಕೇ ಚಾಲಕರು ಬರುತ್ತಾರೆ. ಜತೆಗೆ ಮೊಬೈಲ್‌ನಲ್ಲಿ ಚಾಲಕರ ಸಂಪೂರ್ಣ ಮಾಹಿತಿ ಲಭ್ಯವಿರುವುದರಿಂದ ಸುರಕ್ಷತೆಯ ದೃಷ್ಟಿಯಿಂದಲೂ ಅನುಕೂಲವಾಗಿದೆ.

ಯಶೋಧಾ ಮಳ್ಳೂರ, ಗ್ರಾಹಕರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಗಳನ್ನು ಲವ್‌ ಮಾಡಿದ್ದಕ್ಕೆ ಕೆಲಸಗಾರನ ಹತ್ಯೆ
ಡೇಟಿಂಗ್‌ ಆ್ಯಪಲ್ಲಿ ಪರಿಚಯವಾದಯುವಕನ ದರೋಡೆ: ನಾಲ್ವರ ಸೆರೆ