ಬಳ್ಳಾರಿಗೂ ಬರಲಿ ಅರಸೀಕೆರೆ ಡೆಮೋ ರೈಲು!

KannadaprabhaNewsNetwork |  
Published : Aug 29, 2026, 01:30 AM IST
ಬಳ್ಳಾರಿಯ ರೈಲ್ವೆ ನಿಲ್ದಾಣದ ಒಂದು ದೃಶ್ಯ. | Kannada Prabha

ಸಾರಾಂಶ

ಬಳ್ಳಾರಿಯಿಂದ ರೈಲ್ವೆ ಇಲಾಖೆಗೆ ಸಾವಿರಾರು ಕೋಟಿ ಆದಾಯ ಬರುತ್ತಿದೆ. ಆದರೆ, ಈ ಭಾಗಕ್ಕೆ ಸೌಕರ್ಯ ನೀಡುವಲ್ಲಿ ರೈಲ್ವೆ ಇಲಾಖೆ ಈ ಹಿಂದಿನಿಂದಲೂ ನಿರ್ಲಕ್ಷ್ಯ ವಹಿಸುತ್ತಿದೆ. ಇದರ ಮುಂದುವರಿಕೆ ಭಾಗವಾಗಿ ಬಳ್ಳಾರಿಯಿಂದ ಓಡಿಸಬಹುದಾದ ನೂತನ ಅರಸಿಕೆರೆ ವಿಶೇಷ ಡೆಮೋ ರೈಲನ್ನು ಹೊಸಪೇಟೆಯಿಂದ ಓಡಿಸುತ್ತಿರುವುದಕ್ಕೆ ಜಿಲ್ಲೆಯಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಮಂಜುನಾಥ ಕೆ.ಎಂ.

ಬಳ್ಳಾರಿ: ಬಳ್ಳಾರಿಯಿಂದ ರೈಲ್ವೆ ಇಲಾಖೆಗೆ ಸಾವಿರಾರು ಕೋಟಿ ಆದಾಯ ಬರುತ್ತಿದೆ. ಆದರೆ, ಈ ಭಾಗಕ್ಕೆ ಸೌಕರ್ಯ ನೀಡುವಲ್ಲಿ ರೈಲ್ವೆ ಇಲಾಖೆ ಈ ಹಿಂದಿನಿಂದಲೂ ನಿರ್ಲಕ್ಷ್ಯ ವಹಿಸುತ್ತಿದೆ. ಇದರ ಮುಂದುವರಿಕೆ ಭಾಗವಾಗಿ ಬಳ್ಳಾರಿಯಿಂದ ಓಡಿಸಬಹುದಾದ ನೂತನ ಅರಸಿಕೆರೆ ವಿಶೇಷ ಡೆಮೋ ರೈಲನ್ನು ಹೊಸಪೇಟೆಯಿಂದ ಓಡಿಸುತ್ತಿರುವುದಕ್ಕೆ ಜಿಲ್ಲೆಯಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಆ. 28ರಿಂದ ಸಂಚಾರ ಆರಂಭಿಸಿರುವ ರೈಲು ಸಂಖ್ಯೆ 07343 ಹೊಸಪೇಟೆಯಿಂದ ಬೆಳಗ್ಗೆ 6.30ಕ್ಕೆ ಹೊರಟು ಮಧ್ಯಾಹ್ನ 2.20ಕ್ಕೆ ಅರಸೀಕೆರೆ ತಲುಪಲಿದೆ. ರೈಲು ಸಂಖ್ಯೆ 07344 ಅರಸೀಕೆರೆಯಿಂದ ಮಧ್ಯಾಹ್ನ 2.30ಕ್ಕೆ ಹೊರಟು ರಾತ್ರಿ 9.30ಕ್ಕೆ ಹೊಸಪೇಟೆ ತಲುಪಲಿದೆ. ಈ ರೈಲನ್ನು ಹೊಸಪೇಟೆಯ ಬದಲು ಬಳ್ಳಾರಿಯಿಂದ ಬೆಳಗಿನ ಜಾವ 5 ಗಂಟೆಗೆ ಆರಂಭಿಸಿದರೆ, ಬಳ್ಳಾರಿ ಸೇರಿದಂತೆ ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಹರಪನಹಳ್ಳಿ, ದಾವಣಗೆರೆ, ಕಡೂರು, ಬೀರೂರು ಹಾಗೂ ಅರಸೀಕೆರೆ ಭಾಗದ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಡೆಮೋ ರೈಲಿನ ಪ್ರಯಾಣ ದರ ಸಹ ಕಡಿಮೆ ಇರಲಿದೆ. ಇದರಿಂದ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಸಹಕಾರಿಯಾಗಿದೆ. ಈ ಭಾಗದ ಜನರ ಹಿತಾಸಕ್ತಿ ಮರೆತು ಹೊಸಪೇಟೆಯಿಂದ ಓಡಿಸುವ ನಿರ್ಧಾರ ಅತ್ಯಂತ ಜನವಿರೋಧಿ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ದಾವಣಗೆರೆ ಮೂಲಕ ಬೆಂಗಳೂರು ಸಂಪರ್ಕ

ಹೊಸಪೇಟೆ–ಅರಸೀಕೆರೆ ಡೆಮೋ ರೈಲನ್ನು ಬಳ್ಳಾರಿಯಿಂದ ಬೆಳಗ್ಗೆ 5 ಗಂಟೆಗೆ ಆರಂಭಿಸಿದರೆ, ದಾವಣಗೆರೆಗೆ ಬೆಳಗ್ಗೆ ಸುಮಾರು 9.55ಕ್ಕೆ ತಲುಪಬಹುದು. ಅಲ್ಲಿಂದ ಬೆಂಗಳೂರಿಗೆ ತೆರಳುವ ಪ್ರಯಾಣಿಕರಿಗೆ ವಿಶ್ವಮಾನವ ಎಕ್ಸ್‌ಪ್ರೆಸ್ ಸೇರಿದಂತೆ ಸೂಕ್ತ ರೈಲು ಸಂಪರ್ಕ ಬಳಸಿಕೊಳ್ಳಲು ಅವಕಾಶ ದೊರೆಯಲಿದೆ. ಅಲ್ಲದೆ, ರೈಲು ಕಡೂರು ಮಾರ್ಗವಾಗಿ ಸಂಚರಿಸುವುದರಿಂದ, ಅಲ್ಲಿಂದ ಧರ್ಮಸ್ಥಳ ಸೇರಿದಂತೆ ವಿವಿಧ ಧಾರ್ಮಿಕ ಹಾಗೂ ಪ್ರವಾಸಿ ತಾಣಗಳಿಗೆ ತೆರಳಬಹುದಾಗಿದೆ. ಅರಸೀಕೆರೆ–ಹೊಸಪೇಟೆ ಮಾರ್ಗದಲ್ಲಿರುವ ಎಲ್ಲ ಪ್ರಮುಖ ನಿಲ್ದಾಣಗಳಿಂದ ಬಳ್ಳಾರಿಗೆ ಬರುವ ಪ್ರಯಾಣಿಕರಿಗೂ ನೇರ ಸಂಪರ್ಕ ಕಲ್ಪಿಸಿದಂತಾಗಲಿದೆ. ಬೆಂಗಳೂರಿನಿಂದ ಬೆಳಗ್ಗೆ 11.50ಕ್ಕೆ ಹೊರಡುವ ರೈಲಿನಲ್ಲಿ ಬಳ್ಳಾರಿ ಕಡೆಗೆ ಬರುವ ಪ್ರಯಾಣಿಕರಿಗೆ ದಾವಣಗೆರೆಯಲ್ಲಿ ಸಂಜೆ ವೇಳೆಗೆ ಹೊಸಪೇಟೆ–ಅರಸೀಕೆರೆ ಡೆಮೋ ರೈಲಿನ ಸಂಪರ್ಕ ಕಲ್ಪಿಸಬಹುದಾಗಿದೆ. ಹೀಗಾಗಿ ಬೆಂಗಳೂರು ಸೇರಿದಂತೆ ಮಾರ್ಗಮಧ್ಯದ ಪ್ರದೇಶಗಳಿಂದ ಬಳ್ಳಾರಿಗೆ ಬರುವವರಿಗೂ ರೈಲು ಸಂಪರ್ಕ ಸುಗಮವಾಗಲಿದೆ.

188 ದಿನಗಳ ಹೋರಾಟ

ಬಳ್ಳಾರಿ ರೈಲ್ವೆ ಪ್ರದೇಶಗಳನ್ನು ದಕ್ಷಿಣ ಮಧ್ಯ ರೈಲ್ವೆಯ ಗುಂತಕಲ್ ವಿಭಾಗದಿಂದ ನೈರುತ್ಯ ರೈಲ್ವೆ ವಲಯದ ಹುಬ್ಬಳ್ಳಿ ವಿಭಾಗಕ್ಕೆ ಸೇರ್ಪಡೆಗೊಳಿಸುವಂತೆ ಒತ್ತಾಯಿಸಿ ಸಮಿತಿ ಈ ಹಿಂದೆ ಬಳ್ಳಾರಿಯಲ್ಲಿ 188 ದಿನಗಳ ಸತ್ಯಾಗ್ರಹ ನಡೆಸಿತ್ತು. ಸತತ ಹೋರಾಟದ ಫಲವಾಗಿ ಬಳ್ಳಾರಿ ರೈಲ್ವೆ ಪ್ರದೇಶಗಳು ನೂತನವಾಗಿ ರಚನೆಯಾದ ನೈರುತ್ಯ ರೈಲ್ವೆ ವಲಯದ ವ್ಯಾಪ್ತಿಗೆ ಸೇರ್ಪಡೆಯಾದವು. ಆದರೆ, ವಲಯ ಬದಲಾವಣೆಯ ನಂತರವೂ ನಿರೀಕ್ಷೆಯಂತೆ ಹೆಚ್ಚಿನ ಪ್ರಯಾಣಿಕರ ರೈಲುಗಳು ಬಳ್ಳಾರಿ ಮಾರ್ಗವಾಗಿ ಸಂಚರಿಸುತ್ತಿಲ್ಲ. ನೈರುತ್ಯ ವಲಯದ ರೈಲ್ವೆ ಅಧಿಕಾರಿಗಳು ಬಳ್ಳಾರಿ ಮಾರ್ಗದಲ್ಲಿ ಕೇವಲ ಗೂಡ್ಸ್‌ ರೈಲುಗಳ ಸಂಚಾರಕ್ಕೆ ಆದ್ಯತೆ ನೀಡುತ್ತಿದ್ದಾರೆಯೇ ವಿನಾ, ಪ್ರಯಾಣಿಕರ ರೈಲುಗಳ ಸೇವೆಯತ್ತ ಗಮನ ನೀಡುತ್ತಿಲ್ಲ, ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿ ಅಧ್ಯಕ್ಷ ಕೆ.ಎಂ. ಮಹೇಶ್ವರ ಸ್ವಾಮಿ ಆರೋಪಿಸುತ್ತಾರೆ.

ರಾತ್ರಿ ಬಳ್ಳಾರಿಯಲ್ಲೇ ನಿಲುಗಡೆಯಾಗಲಿ

ಹೊಸಪೇಟೆಗೆ ರಾತ್ರಿ 9.30ಕ್ಕೆ ತಲುಪುವ ಡೆಮೋ ರೈಲನ್ನು ಬಳ್ಳಾರಿ ವರೆಗೆ ವಿಸ್ತರಿಸಿದರೆ ರಾತ್ರಿ ಸುಮಾರು 11ಕ್ಕೆ ಬಳ್ಳಾರಿ ತಲುಪಬಹುದು. ಬಳಿಕ ಪ್ಲಾಟ್‌ಫಾರಂ 1ಎ ಅಲ್ಲಿ ನಿಲುಗಡೆ ಮಾಡಿ ರಾತ್ರಿ ವೇಳೆಯಲ್ಲೇ ಸ್ವಚ್ಛತೆ ಹಾಗೂ ನಿರ್ವಹಣಾ ಕಾರ್ಯ ಕೈಗೊಳ್ಳಲು ಸಾಧ್ಯವಿದೆ. ಹೀಗಾಗಿ ರೈಲನ್ನು ಬಳ್ಳಾರಿಯಿಂದ ಆರಂಭಿಸುವುದರಿಂದ ಕಾರ್ಯಾಚರಣೆಗೆ ಯಾವುದೇ ದೊಡ್ಡ ತೊಂದರೆ ಉಂಟಾಗುವುದಿಲ್ಲ. ಬದಲಾಗಿ ಬಳ್ಳಾರಿ ಸೇರಿದಂತೆ ಇಡೀ ಉತ್ತರ ಕರ್ನಾಟಕದ ಪ್ರಯಾಣಿಕರಿಗೆ ಹೊಸ ಸಂಪರ್ಕ ಮಾರ್ಗ ದೊರೆಯಲಿದೆ.

ಬಳ್ಳಾರಿ ರೈಲ್ವೆ ಪ್ರದೇಶದಿಂದ ರೈಲ್ವೆ ಇಲಾಖೆಗೆ ಗಣನೀಯ ಆದಾಯ ಬರುತ್ತಿರುವ ಹಿನ್ನೆಲೆಯಲ್ಲಿ, ಸರಕು ಸಾಗಣೆ ರೈಲುಗಳಿಗೆ ನೀಡುವಷ್ಟೇ ಆದ್ಯತೆಯನ್ನು ಪ್ರಯಾಣಿಕರ ರೈಲುಗಳಿಗೂ ನೀಡಬೇಕು. ಬಳ್ಳಾರಿ ಮಾರ್ಗವಾಗಿ ಹೊಸ ರೈಲುಗಳನ್ನು ಆರಂಭಿಸುವ ಮೂಲಕ ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಗಳನ್ನು ಈಡೇರಿಸಬೇಕು. ನೈರುತ್ಯ ರೈಲ್ವೆ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು, ಹೊಸಪೇಟೆ–ಅರಸೀಕೆರೆ–ಹೊಸಪೇಟೆ ಡೆಮೋ ವಿಶೇಷ ರೈಲನ್ನು ಬಳ್ಳಾರಿಯಿಂದಲೇ ಆರಂಭಿಸಬೇಕು. ಈ ಹಿನ್ನೆಲೆಯಲ್ಲಿ ಹೋರಾಟ ಮುಂದುವರಿಯಲಿದೆ ಎಂದು ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿ ಅಧ್ಯಕ್ಷ ಕೆ.ಎಂ. ಮಹೇಶ್ವರಸ್ವಾಮಿ ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯ ಸರ್ಕಾರ ಕಸ್ತೂರಿ ರಂಗನ್ ವರದಿ ತಿರಸ್ಕರಿಸಲಿದೆ: ಭೀಮಣ್ಣ ನಾಯ್ಕ
ಚಿಂತಕರ ವಿಚಾರಧಾರೆ ಇಂದಿಗೂ ಪ್ರಸ್ತುತ: ಉಮೇಶ