- ಶಾಸಕ ಇಕ್ಬಾಲ್ ಹುಸೇನ್ ಅಭಿಮತ
- ಜಿಲ್ಲಾಡಳಿತ, ಜಿಪಂ, ಇತರೆ ಇಲಾಖೆಗಳು ಆಯೋಜಿಸಿದ್ದ ಡಿ.ದೇವರಾಜ ಅರಸು 109ನೇ ಜನ್ಮದಿನಾಚರಣೆಕನ್ನಡಪ್ರಭ ವಾರ್ತೆ ರಾಮನಗರ
ಸಮಾಜದ ಶೋಷಿತ ವರ್ಗದ ಧ್ವನಿಯಾಗಿ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಶ್ರಮಿಸಿದ ಮಾಜಿ ಮುಖ್ಯಮಂತ್ರಿ ದಿವಂಗತ ಡಿ.ದೇವರಾಜ್ ಅರಸು ಅವರು ಸಾಮಾಜಿಕ ಕ್ರಾಂತಿಯ ಹರಿಕಾರ. ಅವರು ಮಾಡಿರುವ ಅತ್ಯುತ್ತಮ ಕೆಲಸಗಳಿಂದಾಗಿ ಅಮರರಾಗಿದ್ದು, ಇಂದಿನ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದರು.ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಡಿ.ದೇವರಾಜ ಅರಸರುರವರ 109ನೇ ಜನ್ಮದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, 1972 ರಿಂದ 80 ರವರೆಗೆ ಅರಸುರವರು ರಾಜ್ಯದ ಮುಖ್ಯಮಂತ್ರಿಗಳಾಗಿ, ಅನೇಕ ಸಾಮಾಜಿಕ ಸುಧಾರಣೆ ಕಾರ್ಯಕ್ರಮಗಳನ್ನು ಜಾರಿಗೆ ತಂದರು. ಬಡವರು, ರೈತರು, ಹಿಂದುಳಿದ, ಶೋಷಿತ ಸಮುದಾಯಗಳ ಅಭಿವೃದ್ಧಿಗೆ ಶ್ರಮಿಸಿದ ಅರಸು ಧೀಮಂತ ನಾಯಕ ಎಂದು ಬಣ್ಣಿಸಿದರು.
ಭೂ ಸುಧಾರಣೆಯಂತಹ ಕ್ರಾಂತಿಕಾರಿ ವ್ಯವಸ್ಥೆಗೆ ಮುನ್ನುಡಿ ಬರೆದ ಅರಸು ತೋರಿದ ಸಾಮಾಜಿಕ ನ್ಯಾಯದ ಹಾದಿ ಲಕ್ಷಾಂತರ ಕುಟುಂಬಗಳನ್ನು ಭೂ ಸುಧಾರಣೆಯಡಿ ಭೂಮಿ ಹೊಂದುವಂತೆ ಮಾಡಿತು. ಉಳುವವನೆ ಭೂಮಿ ಒಡೆಯ ಕಾಯ್ದೆಯನ್ನು ಅನುಷ್ಠಾನಕ್ಕೆ ತಂದ ದೇಶದ ಏಕೈಕ ಮುಖ್ಯಮಂತ್ರಿ ಎಂಬ ಖ್ಯಾತಿಗೆ ಪಾತ್ರರಾಗಿದ್ದರು. ಸಹಸ್ರಾರು ಜನರನ್ನು ಜೀತ ವಿಮುಕ್ತರನ್ನಾಗಿ ಮಾಡಿದರು ಎಂದು ತಿಳಿಸಿದರು.ಅರಸು ಅವರು ಜಿಲ್ಲಾ, ತಾಲೂಕು ಹಾಗೂ ಹೋಬಳಿ ಕೇಂದ್ರಗಳಲ್ಲಿ ಹಿಂದುಳಿದ ವರ್ಗಗಳ ಹಾಸ್ಟೆಲ್ ಪ್ರಾರಂಭಿಸುವ ಮೂಲಕ ಹಿಂದುಳಿದ ವರ್ಗಗಳಿಗೆ ಶಿಕ್ಷಣ ಸಿಗುವಂತೆ ಮಾಡಿದರು. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರನ್ನಾಗಿ ಎಲ್.ಜಿ.ಹಾವನೂರು ನೇಮಿಸಿ ಹಿಂದುಳಿದ, ಶೋಷಿತ ವರ್ಗಗಳಿಗೆ ಮೀಸಲಾತಿ ಕಲ್ಪಿಸಿಕೊಟ್ಟರು. ಇಂದಿನ ದಿನಗಳಲ್ಲಿ ಹಿಂದುಳಿದ ವರ್ಗದವರು, ದಲಿತರು, ಬಡವರಿಗೆ ಧ್ವನಿ ಬಂದಿದ್ದರೆ, ಅದು ಅರಸು ನೀಡಿದ ಶಕ್ತಿ ಎಂದು ಹೇಳಿದರು.
ಜಿಲ್ಲಾ ಹಿಂದುಳಿದ ಜಾತಿಗಳ ಮಹಾ ಒಕ್ಕೂಟ ಅಧ್ಯಕ್ಷ ರೈಡ್ ನಾಗರಾಜು ಮಾತನಾಡಿ, ಹಿಂದುಳಿದ, ದಲಿತ, ಬಡವರ್ಗ ಸೇರಿದಂತೆ ಕಟ್ಟಕಡೆಯ ವ್ಯಕ್ತಿಯ ಕುರಿತು ಚಿಂತನೆ ನಡೆಸಿ ಸಾಮಾಜಿಕವಾಗಿ ಹಿಂದುಳಿದಿದ್ದ ಸಮುದಾಯಗಳನ್ನು ಮುಂಚೂಣಿಗೆ ತರಲು ನಾನಾ ಯೋಜನೆ ರೂಪಿಸಿ ಅನುಷ್ಠಾನಕ್ಕೆ ತಂದ ಕೀರ್ತಿ ಅರಸುರವರಿಗೆ ಸಲ್ಲುತ್ತದೆ ಎಂದರು.ಈಗೇನಾದರೂ ಸಾಲ ಯೋಜನೆ, ಉಚಿತ ಸವಲತ್ತು, ಸಹಾಯಧನ ಯೋಜನೆಗಳು ಸಿಗುತ್ತಿವೆ ಎಂದರೆ ಅದಕ್ಕೆ ದೇವರಾಜ ಅರಸು ಕಾರಣ. ತಮ್ಮ ಕಾರ್ಯಗಳ ಮೂಲಕ ಶ್ರೇಷ್ಠ ಮುಖ್ಯಮಂತ್ರಿಯಾಗಿ ಅವರು ಜನತೆಯ ನೆನಪಿನಲ್ಲಿ ಶಾಶ್ವತವಾಗಿ ನೆಲೆ ನಿಂತಿದ್ದಾರೆ. ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹಿಂದುಳಿದ ವರ್ಗಗಳ ನಾಯಕ ದೇವರಾಜ ಅರಸು ಮಾರ್ಗದಲ್ಲಿ ನಡೆಯುತ್ತಿದೆ ಎಂದು ತಿಳಿಸಿದರು.
ನಿವೃತ್ತ ಪ್ರಾಧ್ಯಾಪಕ ದೊಡ್ಡಬಾಣಗೆರೆ ಮಾರಣ್ಣ ಅವರು ದೇವರಾಜ ಅರಸು ಕುರಿತು ಪ್ರಧಾನ ಭಾಷಣ ಮಾಡಿದರು.ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಲಾಯಿತು. ವೇದಿಕೆ ಕಾರ್ಯಕ್ರಮ ಪ್ರಾರಂಭಕ್ಕೂ ಮುನ್ನ ನಗರದ ಜೂನಿಯರ್ ಕಾಲೇಜು ಮೈದಾನದಿಂದ ಡಾ.ಬಿ.ಆರ್.ಅಂಬೇಡ್ಕರ್ ಭವನದವರೆಗೆ ಡಿ.ದೇವರಾಜ ಅರಸು ಭಾವಚಿತ್ರದ ಮೆರವಣಿಗೆ ಮಾಡಲಾಯಿತು.
ಜಿಪಂ ಸಿಇಒ ದಿಗ್ವಿಜಯ್ ಬೋಡ್ಕೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ಎಂ.ಜಿ.ಬಿಲಾಲ್, ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷ ಉಮೇಶ್ ಮತ್ತಿತರರು ಉಪಸ್ಥಿತರಿದ್ದರು.ಬಾಕ್ಸ್..................
ಅರಸು ಭವನ ನಿರ್ಮಾಣಕ್ಕೆ ಕ್ರಮ: ಶಾಸಕರಾಮನಗರ: ಹಿಂದುಳಿದ ವರ್ಗಗಳ ಹರಿಕಾರ ದೇವರಾಜ ಅರಸುರವರ ಹೆಸರಿನಲ್ಲಿ ಜಿಲ್ಲಾ ಕೇಂದ್ರದಲ್ಲಿ ಸುಸಜ್ಜಿತ ಭವನ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು ಎಂದು ಶಾಸಕ ಇಕ್ಬಾಲ್ ಹುಸೇನ್ ಭರವಸೆ ನೀಡಿದರು.
ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಡಿ.ದೇವರಾಜ ಅರಸು ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷ ಉಮೇಶ್ ಮತ್ತು ಜಿಲ್ಲಾ ಹಿಂದುಳಿದ ಜಾತಿಗಳ ಮಹಾ ಒಕ್ಕೂಟ ಅಧ್ಯಕ್ಷ ರೈಡ್ ನಾಗರಾಜು ಅರಸು ಭವನ ವಿಷಯ ಪ್ರಸ್ತಾಪಿಸಿ ಗಮನ ಸೆಳೆದಾಗ ಪ್ರತಿಕ್ರಿಯಿಸಿದ ಶಾಸಕರು, ಅರಸು ಭವನಕ್ಕೆ ಬೇಡಿಕೆ ಇಟ್ಟಿದ್ದೀರಿ. ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ, ಜಮೀನನ್ನು ಗುರುತಿಸಲಾಗುವುದು. ಆದಷ್ಟು ಬೇಗ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡುತ್ತೇವೆ. ನಾನು ಹೊಣೆ ಹೊತ್ತು ಭವನ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷ ಉಮೇಶ್ ಮಾತನಾಡಿ, ಅನಿತಾರವರು ಶಾಸಕರಾಗಿದ್ದಾಗ ಅರಸು ಭವನ ನಿರ್ಮಾಣಕ್ಕೆ ರಾಯರದೊಡ್ಡಿಯಲ್ಲಿ ಜಾಗ ಗುರುತಿಸಿದ್ದು, ನಿರ್ಮಿತಿ ಕೇಂದ್ರದಲ್ಲಿ ಯೋಜನಾ ನಕ್ಷೆ ಇದೆ. ಅದಕ್ಕಾಗಿ ಮೀಸಲಿಟ್ಟಿದ್ದ ಅನುದಾನ ವಾಪಸ್ಸಾಗಿದೆ. ಭವನ ನಿರ್ಮಾಣದತ್ತ ಗಮನ ಹರಿಸುವಂತೆ ಶಾಸಕರ ಗಮನ ಸೆಳೆದರು.
ಜಿಲ್ಲಾ ಹಿಂದುಳಿದ ಜಾತಿಗಳ ಮಹಾ ಒಕ್ಕೂಟ ಅಧ್ಯಕ್ಷ ರೈಡ್ ನಾಗರಾಜು ಮಾತನಾಡಿ, ರಾಮನಗರ ಕ್ಷೇತ್ರದಿಂದ ಒಂದು ಬಾರಿ ಪ್ರಧಾನಿ, ಮೂರು ಬಾರಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿ ಹೋದವರು ಅರಸು ಭವನ ನಿರ್ಮಾಣವಿರಲಿ ಜನರ ಸಮಸ್ಯೆಗಳನ್ನೇ ಆಲಿಸುವತ್ತ ಗಮನ ಹರಿಸಲಿಲ್ಲ. ಹಿಂದುಳಿದ, ಶೋಷಿತರು ಮಾತ್ರವಲ್ಲದೆ ಎಲ್ಲ ವರ್ಗಗಳ ಧ್ವನಿಯಾಗಿ ಅವರ ಕಷ್ಟಸುಖಗಳನ್ನು ಆಲಿಸಿ ಸಮಸ್ಯೆ ಬಗೆಹರಿಸುತ್ತಿರುವ ಇಕ್ಬಾಲ್ ಹುಸೇನ್ ಶಾಸಕರಾಗಿ ಸಿಕ್ಕಿರುವುದು ಕ್ಷೇತ್ರದ ಜನರ ಸೌಭಾಗ್ಯ ಎಂದು ಬಣ್ಣಿಸಿದರು.20ಕೆಆರ್ ಎಂಎನ್ 1.ಜೆಪಿಜಿರಾಮನಗರದ ಅಂಬೇಡ್ಕರ್ ಭವನದಲ್ಲಿ ಡಿ.ದೇವರಾಜ ಅರಸು 109ನೇ ಜನ್ಮದಿನಾಚರಣೆ ಸಮಾರಂಭವನ್ನು ಶಾಸಕ ಇಕ್ಬಾಲ್ ಹುಸೇನ್ ಉದ್ಘಾಟಿಸಿದರು. ಜಿಪಂ ಸಿಇಒ ದಿಗ್ವಿಜಯ್ ಬೋಡ್ಕೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ಎಂ.ಜಿ.ಬಿಲಾಲ್, ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷ ಉಮೇಶ್ ಮತ್ತಿತರರು ಉಪಸ್ಥಿತರಿದ್ದರು.