ಗಂಗಾವತಿ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ದಿನಗಣನೆ
ರಾಮಮೂರ್ತಿ ನವಲಿ
ಕನ್ನಡಪ್ರಭ ವಾರ್ತೆ ಗಂಗಾವತಿಇಲ್ಲಿಯ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಆ. 26ರಂದು ಚುನಾವಣೆ ನಡೆಯಲಿದ್ದು, ಅಧಿಕಾರದ ಗದ್ದುಗೆ ಏರಲು ಬಿಜೆಪಿ ಮತ್ತು ಕಾಂಗ್ರೆಸ್ಸಿನಲ್ಲಿ ತೀವ್ರ ಪೈಪೋಟಿ ಹೆಚ್ಚಿದೆ.
ಬಿಜೆಪಿಯಲ್ಲಿ ಪೈಪೋಟಿ:
ಕಾಂಗ್ರೆಸ್‌ನಿಂದ ವಲಸೆ ಬಂದ ಅಲ್ಪಸಂಖ್ಯಾತರಾದ 10ನೇ ವಾರ್ಡಿನ ಮುಸ್ತಾಕಲಿ, 5ನೇ ವಾರ್ಡಿನ ಉಸ್ಮಾನ್ ಬಿಚ್ಚಗತ್ತಿ, 16ನೇ ವಾರ್ಡಿನ ಮೌಲಾಸಾಬ ಸಹ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದಾರೆ ಎನ್ನಲಾಗಿದೆ. ಆದರೆ, ಕಾಂಗ್ರೆಸ್‌ನಿಂದ ಬಂದಿರುವ ಇವರಿಗೆ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸ್ಪರ್ಧಿಸಲು ಸೂಚಿಸಬೇಕೋ, ಬೇಡವೋ ಎನ್ನುವ ಬಗ್ಗೆ ಬಿಜೆಪಿ ವರಿಷ್ಠರು ಚಿಂತನೆ ನಡೆಸಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ 13ನೇ ವಾರ್ಡಿನ ಪಾರ್ವತಮ್ಮ ಹೆಸರು ಕೇಳಿ ಬರುತ್ತದೆ.
ಕಾಂಗ್ರೆಸ್ ಕೇವಲ 7 ಸದಸ್ಯರು ಮತ್ತು ಓರ್ವ ಕಾಂಗ್ರೆಸ್ ಸಂಸದ ಸೇರಿದಂತೆ 8 ಸದಸ್ಯರ ಬಲ ಹೊಂದಿದೆ. ಆದರೂ ನಗರಸಭೆ ಆಡಳಿತದ ಚುಕ್ಕಾಣಿ ನಡೆಸಲು ಯತ್ನ ನಡೆಸುತ್ತಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಕೆಆರ್‌ಪಿಪಿ ಪಕ್ಷ (ಈಗಿನ ಬಿಜೆಪಿ ಶಾಸಕ ಜನಾರ್ದನ ರೆಡ್ಡಿ) ಬೆಂಬಲಿಸಿ 10 ಸದಸ್ಯರು ಹೋಗಿದ್ದರು. ಈಗ ಕಾಂಗ್ರೆಸ್‌ನಿಂದ ವಲಸೆ ಹೋದ 10 ಸದಸ್ಯರು, ಪಕ್ಷೇತರ ಓರ್ವ ಸದಸ್ಯರು ತಮಗೆ ಬೆಂಬಲ ಸೂಚಿಸುತ್ತಾರೆ ಎಂದು ಕಾಂಗ್ರೆಸ್ ವಿಶ್ವಾಸದಲ್ಲಿದೆ. ಇದರಿಂದಾಗಿ 19 ಸದಸ್ಯರು ಬಲ ತಮಗೂ ಇದೆ ಎಂದು ಹೇಳುತ್ತ ಅಧಿಕಾರ ಪಡೆಯುವ ಯತ್ನದಲ್ಲಿದೆ. ಪ್ರಮುಖವಾಗಿ 22ನೇ ವಾರ್ಡಿನ ಸುನೀತಾ ಶ್ಯಾವಿ, 8ನೇ ವಾರ್ಡಿನ ಖಾಸೀಂಸಾಬ ಗದ್ವಾಲ್, 23ನೇ ವಾರ್ಡಿನ ಅಭಿದಾ ಮುದ್ದಾಬಳ್ಳಿ ರೇಸ್ ನಲ್ಲಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ32ನೇ ವಾರ್ಡಿನ ಹುಲಿಗೆಮ್ಮ ಕಿರಿಕಿರಿ ಹೆಸರು ಕೇಳಿಬರುತ್ತಿದೆ.