ದೊಡ್ಡ ಮಟ್ಟದಲ್ಲಿ ಸಮೀಕ್ಷೆ ಶುರು । ಮಲೆನಾಡು ಭಾಗದಲ್ಲಿ ಆತಂಕ ಸೃಷ್ಟಿ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಪಶ್ಚಿಮಘಟ್ಟದ ಹಲವು ಕಡೆ ಅಪಾರ ಪ್ರಮಾಣದ ಚಿನ್ನ, ಕಬ್ಬಿಣ ಸೇರಿದಂತೆ ಮೊದಲಾದ ಖನಿಜ ಸಂಪತ್ತು ಇರುವುದು ಈಗಾಗಲೇ ಖಚಿತವಾಗಿರುವುದೇ ಪಶ್ಚಿಮಘಟ್ಟದ ಸಂರಕ್ಷಣೆಗೆ ಶಾಪವಾಗಿ ಪರಿಣಮಿಸಿದೆಯೇ ಎಂಬ ಪ್ರಶ್ನೆ ಇದೀಗ ಉದ್ಬವವಾಗಿದೆ.ಪಶ್ಚಿಮಘಟ್ಟದಲ್ಲಿ ಈ ಹಿಂದೆಯೂ ಹಲವು ಬಾರಿ ಗಣಿಗಾರಿಕೆಗೆ ಪ್ರಯತ್ನಗಳು ನಡೆದಿವೆ. ಇದೀಗ ಮತ್ತೊಂದು ದೊಡ್ಡ ಮಟ್ಟದಲ್ಲಿ ಸಮೀಕ್ಷೆ ಶುರುವಾಗಿರುವುದು ಮಲೆನಾಡು ಭಾಗದಲ್ಲಿ ದೊಡ್ಡ ಆತಂಕ ಸೃಷ್ಟಿಸಿದೆ.
ಒಂದು ವೇಳೆ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ದೊಡ್ಡ ಪ್ರಮಾಣದಲ್ಲಿ ಖನಿಜ ನಿಕ್ಷೇಪಗಳು ಪತ್ತೆಯಾದಲ್ಲಿ ಗಣಿಗಾರಿಕೆಗೆ ಅವಕಾಶ ನೀಡಲಾಗುತ್ತದೆಯೇ? ಎಂಬ ಕುರಿತ ಚರ್ಚೆಗಳು ಆರಂಭಗೊಂಡಿವೆ.
ಪಶ್ಚಿಮ ಘಟ್ಟ ಸಾಲಿನಲ್ಲಿ ಈ ಹಿಂದೆಯೂ ಗಣಿಗಾರಿಕೆ ನಡೆದಿರುವ ಹಲವು ಉದಾಹರಣೆಗಳಿವೆ. ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖ, ಕೆಮ್ಮಣ್ಣು ಗುಂಡಿ, ಶಿವಮೊಗ್ಗ ಜಿಲ್ಲೆಯ ಅಂಬಾರಗುಡ್ಡದಲ್ಲಿ ದೊಡ್ಡ ಮಟ್ಟದಲ್ಲಿ ಗಣಿಗಾರಿಕೆ ನಡೆದಿತ್ತು. ಸ್ಥಳೀಯರು ಹಾಗೂ ವಿವಿಧ ಸಂಘಟನೆಗಳ ಹೋರಾಟದ ಫಲವಾಗಿ ಗಣಿಗಾರಿಕೆಯೇನೋ ಸ್ಥಗಿತಗೊಂಡಿದೆ. ಆದರೆ ಪರಿಸರ ನಾಶದಿಂದ ಆಗಿರುವ ನಷ್ಟದಿಂದ ಮಳೆಗಾಲದಲ್ಲಿ ಭೂ ಕುಸಿತ ಸೇರಿದಂತೆ ಮೊದಲಾದ ಪ್ರಕೃತಿ ವಿಕೋಪಗಳನ್ನು ಇಂದಿಗೂ ಎದುರಿಬೇಕಾಗಿದೆ.
ರಾಜ್ಯದಲ್ಲೇ ಅತ್ಯಂತ ಎತ್ತರದ ಪರ್ವತ ಎಂಬ ಖ್ಯಾತಿ ಪಡೆದ ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನ ಗಿರಿ ಒಡಲನ್ನು ಬಗೆದು ಗಣಿಗಾರಿಕೆ ನಡೆಸಲು 2010ರಲ್ಲೇ ಸಿದ್ಧತೆ ನಡೆದಿತ್ತು. ನ್ಯಾಷನಲ್ ಮಿನರಲ್ ಡೆವೆಲಪ್‌ಮೆಂಟ್ ಕಾರ್ಪೋರೇಷನ್ ಮುಳ್ಳಯ್ಯನ ಗಿರಿಯಲ್ಲಿ ಅಂಡರ್ ಗ್ರೌಂಡ್ ಮೈನಿಂಗ್ ಮಾಡಲು ಎಲ್ಲ ಸಿದ್ಧತೆ ಮಾಡಿಕೊಂಡಿತ್ತು. ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ಹಾಗೂ ಪರಿಸರಾಸಕ್ತರು ಹೋರಾಟ ನಡೆಸಿದ ಪರಿಣಾಮವಾಗಿ ಮುಳ್ಳಯ್ಯನಗಿರಿಯಲ್ಲಿ ಗಣಿಗಾರಿಕೆ ಆರಂಭಗೊಳ್ಳುವ ಮೊದಲೇ ಸ್ಥಗಿತಗೊಂಡಿದ್ದನ್ನು ಸ್ಮರಿಸಬಹುದಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಭದ್ರಾ ಅಭಯಾರಣ್ಯದ ಬಫರ್ ಜೋನ್‌ನಲ್ಲಿ ಬರುವ ಕೆಂಚೇನಹಳ್ಳಿ ವ್ಯಾಪ್ತಿಯ ಮುಂಡ್ರೆ, ಬೆಟ್ಟದಹಳ್ಳಿ, ಲಿಂಗದಹಳ್ಳಿ, ಲಿಂಗದಮನೆ ಸೇರಿದಂತೆ ಈ ವ್ಯಾಪ್ತಿಯ ಸಣ್ಣಪುಟ್ಟ ಹಳ್ಳಿಗಳ ವ್ಯಾಪ್ತಿಯ ಭೂಮಿಯಲ್ಲಿ ಚಿನ್ನದ ನಿಕ್ಷೇಪವಿದೆ ಎಂಬುದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸರ್ವೇಯಲ್ಲಿ ದೃಢಪಟ್ಟಿತ್ತು.
- ಕೋಟ್...... --
ಪಶ್ಚಿಮ ಘಟ್ಟ ಶ್ರೇಣಿಗಳು ಪರಿಸರದ ಸೂಕ್ಷ್ಮತೆಯನ್ನು ಸರ್ಕಾರ ಪ್ರಥಮವಾಗಿ ಆರ್ಥ ಮಾಡಿಕೊಳ್ಳಬೇಕು. ಪಶ್ಚಿಮ ಘಟ್ಟದಲ್ಲಿ ಈಗಾಗಲೇ ಅಭಿವೃದ್ಧಿ ಹೆಸರಿನಲ್ಲಿ ರಸ್ತೆ, ಕಟ್ಟಡ, ಹೋಂಸ್ಟೇ ನಿರ್ಮಾಣ ಮಾಡಲಾಗಿದೆ. ಪಶ್ಚಿಮ ಘಟ್ಟಗಳು ಮನುಷ್ಯನಿಂದ ಆಗುತ್ತಿರುವ ಪ್ರಮಾದಗಳನ್ನು ತಡೆಯುವ ಶಕ್ತಿ ಕಳೆದುಕೊಂಡಿವೆ. ಹೀಗಾಗಿ, ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಸ್ಥಳೀಯರಿಗೆ ಮಾಹಿತಿ ನೀಡಬೇಕು. ಪಶ್ಚಿಮಘಟ್ಟ ಶ್ರೇಣಿಗಳಲ್ಲೇ ಬಹುತೇಕ ನದಿಗಳು ಜನ್ಮ ತಾಳಿ ರಾಜ್ಯಕ್ಕೆ ಜೀವಜಲವನ್ನು ಒದಗಿಸುತ್ತಿವೆ. ಇಂಥ ಸೂಕ್ಷ್ಮ ಪ್ರದೇಶದಲ್ಲಿ ಯಾವುದೇ ಕಾರಣಕ್ಕೂ ಗಣಿಗಾರಿಕೆಗೆ ಅವಕಾಶ ನೀಡಬಾರದು.- ಸ.ಗಿರಿಜಾಶಂಕರ್, ಪರಿಸರ ವಾದಿ
ಫೋಟೋ: ಪಶ್ಚಿಮಘಟ್ಟದ ಫೋಟೋ ಬಳಸುವುದು